ಸಿಬ್ಬಂದಿ ಕೊರತೆಯಲ್ಲಿಯೂ ನಗರ ಸ್ವಚ್ಛತೆಗೆ ಆದ್ಯತೆ: ಪೌರಾಯುಕ್ತ ಹೆಚ್.ಆರ್.ರಮೇಶ್

| Published : Oct 14 2025, 01:02 AM IST

ಸಿಬ್ಬಂದಿ ಕೊರತೆಯಲ್ಲಿಯೂ ನಗರ ಸ್ವಚ್ಛತೆಗೆ ಆದ್ಯತೆ: ಪೌರಾಯುಕ್ತ ಹೆಚ್.ಆರ್.ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯಲ್ಲಿ ಸಿಬ್ಬಂದಿಗಳ ತೀವ್ರ ಕೊರತೆಯ ನಡುವೆ ಪೌರ ಸಿಬ್ಬಂದಿಗಳ ಮೂಲಕ ನಗರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಪೌರಾಯುಕ್ತರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರಸಭೆಯಲ್ಲಿ ಸಿಬ್ಬಂದಿಗಳ ತೀವ್ರ ಕೊರತೆಯ ನಡುವೇ ಪೌರಸಿಬ್ಬಂದಿಗಳ ಮೂಲಕ ನಗರ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಮಡಿಕೇರಿ ನಗರಸಭೆಯ ಪೌರಾಯುಕ್ತ ಹೆಚ್.ಆರ್.ರಮೇಶ್ ಹೇಳಿದ್ದಾರೆ. ಮಡಿಕೇರಿ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಪೌರಸಿಬ್ಬಂದಿಗಳಾದ ಅಹಮ್ಮದ್ ಕಬೀರ್, ಎಚ್.ಆರ್.ಶಂಕರ್, ಈರಪ್ಪ ಶೆಟ್ಟಿ, ವಸಂತ ಕುಮಾರ್, ಬಿ.ಟಿ. ಜಗದೀಶ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಮಡಿಕೇರಿಯಲ್ಲಿ ಸ್ವಚ್ಛತೆ ಸಂಬಂಧಿತ ಜನರಲ್ಲಿ ಹೆಚ್ಚು ಅರಿವು ಮೂಡಿದೆ. ಪೌರಸಿಬ್ಬಂದಿಗಳು ನಗರದ ತ್ಯಾಜ್ಯ ವಿಲೇವಾರಿ ಮಾಡುವ ಪೌರಸಿಬ್ಬಂದಿಗಳ ಆರೋಗ್ಯದ ಬಗ್ಗೆಯೂ ನಗರಸಭೆ ಹೆಚ್ಚಿನ ಕಾಳಜಿ ವಹಿಸಿದೆ. ಪ್ರತೀ ವರ್ಷ ಅತ್ಯುತ್ತಮ ರೀತಿಯಲ್ಲಿ ಪೌರಸಿಬ್ಬಂದಿಗಳ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ. ಅಗತ್ಯವುಳ್ಳವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ ಎಂದೂ ರಮೇಶ್ ನುಡಿದರು.ಈಗಾಗಲೇ ಮಡಿಕೇರಿಯ ರಾಜರಾಜೇಶ್ವರಿ ಬಡಾವಣೆಯಲ್ಲಿ ಪೌರಸಿಬ್ಬಂದಿಗಳಿಗೆ 12 ಮನೆಗಳನ್ನು ನಿರ್ಮಿಸಿ ಉಚಿತವಾಗಿ ವಿತರಿಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದೂ ರಮೇಶ್ ಹೇಳಿದರು.700 ಜನಸಂಖ್ಕೆಗೊಬ್ಬರಂತೆ ಓರ್ವ ಪೌರಸಿಬ್ಬಂದಿಗಳಿರಬೇಕು. ಆದರೆ ಈ ಪ್ರಮಾಣವೂ ಮಡಿಕೇರಿಗೆ ಸಾಕಾಗುವುದಿಲ್ಲ ಎನ್ನುವಂತಾಗಿದೆ ಎಂದೂ ಅವರು ಹೇಳಿದರು.

ಆರೋಗ್ಯ ಶಿಬಿರ ಆಯೋಜಿತವಾಗಬೇಕು:

ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ದಸರಾ ಸಂದರ್ಭ ಪೌರಸಿಬ್ಬಂದಿಗಳು ಮಡಿಕೇರಿಯನ್ನು ಮಡಿಯಾದ ಕೇರಿಯನ್ನಾಗಿಸುವಲ್ಲಿ ವಹಿಸಿದ ಶ್ರಮ ಶ್ಲಾಘನೀಯ, ಪೌರಸಿಬ್ಬಂದಿಗಳ ಅವಿರತ ಶ್ರಮದಿಂದಾಗಿಯೇ ಮಡಿಕೇರಿ ತನ್ನ ಸೌಂದರ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು. ಪೌರಸಿಬ್ಬಂದಿಗಳನ್ನು ಕಸ ತೆಗೆಯುವ ವ್ಯಕ್ತಿಗಳಾಗಿ ಪರಿಗಣಿಸದೇ ನಮ್ಮ ಮನೆ, ಅಂಗಡಿಗಳಲ್ಲಿರುವ ಕಸವನ್ನು ವಿಲೇವಾರಿ ಮಾಡಿ, ಸಮಾಜವನ್ನು ಸ್ವಚ್ಛವಾಗಿರಿಸುವ ಕಾಯಕಜೀವಿಗಳೆಂದು ಮಾನವೀಯತೆಯಿಂದ ಪರಿಗಣಿಸುವಂತೆಯೂ ಅನಿಲ್ ಕೋರಿದರು. ಪೌರಸಿಬ್ಬಂದಿಗಳಿಗೆ ಅಗತ್ಯವಾದ ನಿವೇಶನ, ವಸತಿ ನಿರ್ಮಾಣದತ್ತಲೂ ಸ್ಥಳೀಯ ಸಂಸ್ಥೆಗಳು ಕಾರ್ಯಪ್ರವೃತ್ತವಾಗಬೇಕೆಂದು ಹೇಳಿದ ಅನಿಲ್ ಹೆಚ್,ಟಿ. ಪೌರಸಿಬ್ಬಂದಿಗಳು, ಕುಟುಂಬ ವರ್ಗದವರಿಗೆ ರೋಟರಿ ಸಂಸ್ಥೆಯ ಮೂಲಕ ಆರೋಗ್ಯ ಶಿಬಿರ ಆಯೋಜಿತವಾಗಬೇಕೆಂದು ಸಲಹೆ ನೀಡಿದರು.

ಅಮೂಲ್ಯ ಕಾಯಕ: ರೋಟರಿ ವುಡ್ಸ್ ಸಲಹೆಗಾರ ಬಿ.ಜಿ. ಅನಂತಶಯನ ಮಾತನಾಡಿ, ಭೂಮಿತಾಯಿಯ ಮಡಿಲಲ್ಲಿ ತ್ಯಾಜ್ಯ ಎಸೆಯುವ ಜನರು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅಂಥ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಮೂಲಕ ನಿಸರ್ಗ ಮಾತೆಯನ್ನು ಸ್ವಚ್ಛಗೊಳಿಸುವ ಅಮೂಲ್ಯ ಕಾಯಕದಲ್ಲಿ ಪೌರಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಎಲ್ಲಿ ಶುದ್ದ ಹಸ್ತಗಳಿರುತ್ತವೆಯೋ ಅಂಥ ಸಮಾಜ ಸುಂದರವಾಗಿರುತ್ತದೆ. ಆ ಶುದ್ಧ ಹಸ್ತವನ್ನು ಪೌರಸಿಬ್ಬಂದಿಗಳಲ್ಲಿ ಕಾಣಬಹುದಾಗಿದೆ ಎಂದೂ ಅನಂತಶಯನ ಹೇಳಿದರು.ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ಮಡಿಕೇರಿಯ ಪೌರಸೇವಾ ಸಿಬ್ಬಂದಿಗಳ ಕಾರ್ಯನಿಷ್ಠೆಯ ಬಗ್ಗೆ ಪ್ರಶಂಸಿಸಿದರು. ನಗರದ ಅನೇಕರು ಏಳುವ ಮೊದಲೇ ನಗರದ ಬೀದಿಗಳು, ಮನೆಯ ಮುಂದಿನ ಪರಿಸರ ಸ್ವಚ್ಛಗೊಳ್ಳುವಲ್ಲಿ ಪೌರಸಿಬ್ಬಂದಿ ಪಾತ್ರ ಸದಾ ಮಹತ್ವದ್ದಾಗಿದೆ ಎಂದೂ ಕಿರಣ್ ಶ್ಲಾಘಿಸಿದರು.ರೋಟರಿ ವಲಯ 6 ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ ಮಾತನಾಡಿ, ತ್ಯಾಜ್ಯ ವಿಲೇವಾರಿ ಮಾಡುವ ಸಂಬಂಧ ವಿದ್ಯಾರ್ಥಿಗಳಲ್ಲಿ ಸೂಕ್ತ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮಗಳನ್ನು ಸಾಮಾಜಿಕ ಸಂಘಸಂಸ್ಥೆಗಳು ಹೆಚ್ಚು ಮಾಡಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳಲ್ಲಿ ಪರಿಸರ ಸ್ವಚ್ಛತೆಯ ಜಾಗೃತಿ ಹೆಚ್ಚಾದಲ್ಲಿ ದೊಡ್ಡವರೂ ಅದರಿದ ಪಾಠ ಕಲಿಯಬಹುದಾಗಿದೆ ಎಂದೂ ಧಿಲನ್ ಅಭಿಪ್ರಾಯಪಟ್ಟರು. ಮಡಿಕೇರಿ, ಗೋಣಿಕೊಪ್ಪ ದಸರಾದ ಯಶಸ್ವಿಗೆ ಮೂಲ ಕಾರಣಕರ್ತರೇ ಪೌರಸಿಬ್ಬಂದಿಗಳಾಗಿದ್ದಾರೆ ಎಂದೂ ಗೋಣಿಕೊಪ್ಪ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಧಿಲನ್ ಚಂಗಪ್ಪ ಶ್ಲಾಘಿಸಿದರು.

ವಲಯ ಸೇನಾನಿ ಕಾರ್ಯಪ್ಪ ಮಾತನಾಡಿ, ಸಕ್ರಿಯ ಸೇವೆಯ ಮೂಲಕ ಸಮಾಜದ ಸ್ವಚ್ಛತೆಗೆ ಕಾರಣರಾಗುತ್ತಿರುವ ಪೌರಸಿಬ್ಬಂದಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮೆಚ್ಚುಗೆ ಪಡೆಯುವಂಥದ್ದು ಎಂದರು.ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ ವಂದಿಸಿದ ಕಾರ್ಯಕ್ರಮದಲ್ಲಿ ವುಡ್ಸ್ ಸಂಸ್ಥೆಯ ಸಲಹೆಗಾರ ಮೋಹನ್ ಪ್ರಭು, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ ಕಾರ್ಯಪ್ಪ, ಹಾಜರಿದ್ದರು. ವಸಂತ್ ಕುಮಾರ್ ನಿರೂಪಿಸಿದರು.