ಸಾರಾಂಶ
ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಅಂತಹ ಸ್ಥಳಗಳಿಗೆ ಪೌರಾಯುಕ್ತ ಗಣೇಶ ಪಾಟೀಲ ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಳೆ ನೀರು ತೆರವಿಗೆ ಕಾರ್ಯ ಕೈಗೊಂಡರು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಕಳೆದ ಕೆಲವು ದಿನಗಳಿಂದ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಅಂತಹ ಸ್ಥಳಗಳಿಗೆ ಪೌರಾಯುಕ್ತ ಗಣೇಶ ಪಾಟೀಲ ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಳೆ ನೀರು ತೆರವಿಗೆ ಕಾರ್ಯ ಕೈಗೊಂಡರು.ನಗರದ ರೈಲ್ವೆ ಸ್ಟೇಶನ್ ಹತ್ತಿರ ರೈಲ್ವೆ ನಿಲ್ದಾಣದ ಕಾಮಗಾರಿಯಿಂದ ಚರಂಡಿ ಮುಚ್ಚಿರುವುದರಿಂದ ಮಳೆ ನೀರು ನಿಂತು ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅಲ್ಲಿಗೆ ಅಧಿಕಾರಿಗಳು ತೆರಳಿ ನೀರು ಹರಿದು ಹೋಗುವಂತೆ ಕಾರ್ಯ ಕೈಗೊಂಡರು.
ನಗರದ ಕಲ್ಯಾಣನಗರ, ಗಣೇಶನಗರಗಳಿಗೆ ಸಹ ನಗರಸಭೆ ಸಿಬ್ಬಂದಿಯು ಜೆಸಿಬಿಯೊಂದಿಗೆ ತೆರಳಿ ನಿಂತ ಮಳೆ ನೀರನ್ನು ಪರ್ಯಾಯವಾಗಿ ಬೇರೆ ಕಡೆಗೆ ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿದರು. ಮಳೆ ನೀರು ಮನೆಗಳಿಗೆ ಹೊಕ್ಕು ಸಮಸ್ಯೆ ಉಂಟಾದ ಕಡೆಗೆ ಸಹ ನಗರಸಭೆ ಅಧಿಕಾರಿಗಳು ತೆರಳಿ ಕಾರ್ಯಪ್ರವೃತ್ತರಾದರು.ಮಳೆಯಿಂದ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕೊಪ್ಪಳ ನಗರಸಭೆಯಿಂದ ಮುಂಜಾಗೃತಾ ಕ್ರಮ ವಹಿಸಲಾಗಿದೆ. ಹಾನಿಗೊಳಗಾದ ಪ್ರದೇಶ, ವಾರ್ಡ್‌ಗಳಿಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಹೊರತೆಗೆಯುವ ಕಾರ್ಯಕ್ಕಾಗಿ ಸಕ್ಕಿಂಗ್ ಮಿಷಿನಗಳನ್ನು ಬಳಸಲಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಅಗತ್ಯ ಕ್ರಮವಹಿಸಲು ನಗರಸಭೆಯ ಪೌರಕಾರ್ಮಿಕರು ಹಾಗೂ ಜೆಸಿಬಿಗಳಿಂದ ಚರಂಡಿಗಳ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪೌರಾಯುಕ್ತ ಗಣೇಶ ಪಾಟೀಲ ತಿಳಿಸಿದ್ದಾರೆ.
ಸಿಬ್ಬಂದಿ ನಿಯೋಜನೆ:ಯಾವುದೇ ರೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂದೆಯೂ ಕೂಡ ಕಟ್ಟುನಿಟ್ಟಾಗಿ ಕ್ರಮವಹಿಸಲು ನಿಂತಿರುವ ನೀರನ್ನು ಪರ್ಯಾಯ ವ್ಯವಸ್ಥೆ ಮೂಲಕ ಹರಿಸಲು ಕ್ರಮವಹಿಸಿದ್ದು, ಮಳೆಯಿಂದಾಗಿ ಮನೆಗಳು ಬಿದ್ದಲ್ಲಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಪರಿಶೀಲಿಸಿ ವರದಿ ಪಡೆದುಕೊಳ್ಳಲು ಹಾನಿಗೊಳಗಾದ ಪ್ರದೇಶಗಳಿಗೆ ಹಾಗೂ ವಾರ್ಡ್‌ಗಳಿಗೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.