ಸಾರಾಂಶ
ಕನಕಪುರ: ರಾಜ್ಯದಲ್ಲಿ ಡೆಂಘೀ ಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭಾ ಆಯುಕ್ತ ಮಹದೇವ್ ಮಾರ್ಗದರ್ಶನದಲ್ಲಿ ನಗರಾದ್ಯಂತ ರೋಗ ನಿರೋಧಕ ಔಷಧಿ ಸಿಂಪಡಿಸಲಾಯಿತು.
ಕನಕಪುರ: ರಾಜ್ಯದಲ್ಲಿ ಡೆಂಘೀ ಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭಾ ಆಯುಕ್ತ ಮಹದೇವ್ ಮಾರ್ಗದರ್ಶನದಲ್ಲಿ ನಗರಾದ್ಯಂತ ರೋಗ ನಿರೋಧಕ ಔಷಧಿ ಸಿಂಪಡಿಸಲಾಯಿತು.
ರಾಜ್ಯಾದ್ಯಂತ ಡೆಂಘೀ ಜ್ವರದಿಂದ ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಡೆಂಘೀ ಹರಡಲು ಕಾರಣವಾದ ಸೊಳ್ಳೆಗಳು ಉತ್ಪತ್ತಿಯಾಗದಂತೆ ರಸ್ತೆ ಅಕ್ಕ-ಪಕ್ಕ ಬೆಳೆದಿರುವ ಗಿಡಗಂಟಿಗಳನ್ನು ಕಿತ್ತು, ಮೋರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಸ್ವಚ್ಛತಾ ಕಾರ್ಯವನ್ನು ನಗರಸಭಾ ಸಿಬ್ಬಂದಿ ಕೈಗೊಂಡರು.ಈ ವೇಳೆ ನಗರಸಭಾ ಆಯುಕ್ತ ಮಹದೇವ್ ಮಾತನಾಡಿ, ಸಾರ್ವಜನಿಕರು ಡೆಂಘೀ ಬಗ್ಗೆ ಆತಂಕ ಪಡುವುದು ಬಿಟ್ಟು, ತಮ್ಮ ಮನೆಯ ಒಳ ಹಾಗೂ ಹೊರಭಾಗದಲ್ಲಿ ನೀರು ನಿಲ್ಲದಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರಿನ ತೊಟ್ಟಿಯ ಮೇಲೆ ಸೊಳ್ಳೆಗಳು ಶೇಖರಣೆ ಆಗದಂತೆ ಎಚ್ಚರ ವಹಿಸಬೇಕು. ತೊಟ್ಟಿಯ ಮೇಲ್ಭಾಗವನ್ನು ಮುಚ್ಚಬೇಕು. ಮನೆಯ ಸುತ್ತಮುತ್ತ ಕಸದ ರಾಶಿ, ಸಾಕು ಪ್ರಾಣಿಗಳ ಮಲ-ಮೂತ್ರ ಮೋರಿಗೆ ಬಿಡದೆ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಜೊತೆಗೆ ಮಲಗುವ ವೇಳೆ ಆದಷ್ಟೂ ಸೊಳ್ಳೆ ಪರದೆ ಉಪಯೋಗಿಸುವ ಮೂಲಕ ಡೆಂಘೀ ಹರಡದಂತೆ ಎಚ್ಚರ ವಹಿಸಬೇಕು ಎಂದು ಜಾಗೃತಿ ಮೂಡಿಸಿದರು.
(ಫೋಟೋ ಕ್ಯಾಫ್ಷನ್)ಕನಕಪುರ ನಗರದ ರಸ್ತೆ ಇಕ್ಕೆಲಗಳಲ್ಲಿನ ಚರಂಡಿಗಳಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ನಗರಸಭಾ ಸಿಬ್ಬಂದಿ ತೆರವುಗೊಳಿಸುತ್ತಿರುವುದು.