ಸಾರಾಂಶ
ಸರದಿ ಸಾಲಿನಲ್ಲಿ ಬಂದ ವಿದ್ಯಾರ್ಥಿಗಳು ಗುರುತಿನ ಚೀಟಿ ತೋರಿಸಿ, ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡಿ ಸಂಭ್ರಮಿಸಿದರು. ವಿಶೇಷವಾಗಿ ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ, ಆರೋಗ್ಯ, ನೈರ್ಮಲ್ಯ, ಕ್ರೀಡಾ ಹಾಗೂ ಶಿಸ್ತು ಸಮಿತಿ ಇತ್ಯಾದಿ ಖಾತೆಗಳಿಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾಗಿ ಚುನಾವಣೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಚುನಾವಣೆ ಎಂಬುದು ಪ್ರಜಾಸತ್ತಾತ್ಮಕ ಸಮಾಜದ ಮೂಲ ಅಂಶವಾಗಿದೆ. ಆಡಳಿತದಲ್ಲಿ ಬಳಸಬಹುದಾದ ರಚನಾತ್ಮಕ ಪ್ರಕ್ರಿಯೆಯನ್ನು ಒದಗಿಸುತ್ತವೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಹೇಳಿದರು.ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯ ಪೂರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮತದಾನವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಉತ್ತೇಜಿಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಚುನಾವಣೆ ಅರಿವು ಮೂಡಿಸಲು ಶಾಲೆಯಲ್ಲಿ ಚುನಾವಣಾ ಕಾರ್ಯಕ್ರಮ ಏರ್ಪಡಿಸಿದ್ದು, ವಿದ್ಯಾರ್ಥಿಗಳು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಉಪಯುಕ್ತವಾಗಿದೆ ಎಂದರು.
ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯಂತೆ ಮೊದಲಿಗೆ ನಾಮಪತ್ರ ಸಲ್ಲಿಸಿದ ವಿದ್ಯಾರ್ಥಿಗಳ ಹೆಸರನ್ನು ನೋಂದಾಯಿಸಿಕೊಂಡು, ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆದು ಅಭ್ಯರ್ಥಿಗಳಿಗೆ ಚಿನ್ಹೆ ನೀಡಲಾಯಿತು. ಮತನೀಡಿ ಗೆಲ್ಲಿಸಿದರೆ ಶಾಲಾ ಅಭಿವೃದ್ಧಿಗೆ ಶ್ರಮಿಸುವ ಹಾಗೂ ಇತರ ಭರವಸೆಯೊಂದಿಗೆ ಚುನಾವಣಾ ಪ್ರಚಾರ ಕೈಗೊಂಡ ಅಭ್ಯರ್ಥಿಗಳು ಮತದಾರರ ಮನವೊಲಿಸುವ ದೃಶ್ಯ ಕಂಡುಬಂದಿತು.ಸರದಿ ಸಾಲಿನಲ್ಲಿ ಬಂದ ವಿದ್ಯಾರ್ಥಿಗಳು ಗುರುತಿನ ಚೀಟಿ ತೋರಿಸಿ, ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡಿ ಸಂಭ್ರಮಿಸಿದರು. ವಿಶೇಷವಾಗಿ ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ, ಆರೋಗ್ಯ, ನೈರ್ಮಲ್ಯ, ಕ್ರೀಡಾ ಹಾಗೂ ಶಿಸ್ತು ಸಮಿತಿ ಇತ್ಯಾದಿ ಖಾತೆಗಳಿಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾಗಿ ಚುನಾವಣೆ ನಡೆಸಲಾಯಿತು.
ಚುನಾವಣಾ ಮೇಲ್ವಿಚಾರಣಾ ಅಧಿಕಾರಿಯಾಗಿ ಪ್ರಾಂಶುಪಾಲ ವಿ. ಪುಟ್ಟಸ್ವಾಮಿ, ಉಪ ಪ್ರಾಂಶುಪಾಲರಾದ ಸಿ.ದರ್ಶಿನಿ, ಚುನಾವಣಾ ಅಧಿಕಾರಿಗಳಾಗಿ ಶಿಕ್ಷಕ ಸಿದ್ದರಾಜು, ವಿಜಯಲಕ್ಷ್ಮೀ, ರಮ್ಯಶ್ರೀ, ಹೇಮಾ, ದಿಲೀಪ್ ಹಾಗೂ ಶಾಲಾ ಸಂಯೋಜಕರಾದ ಆರೋಕಿಯ ಸಾಮಿ, ಟಿ.ಎಸ್.ಗಾಯತ್ರಿ, ಸಪ್ನ ಸಜೀವನ್ ಸೇರಿದಂತೆ ಹಲವರು ಇದ್ದರು.