ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ನಗರ ಸಜ್ಜು

| Published : Aug 14 2024, 01:18 AM IST

ಸಾರಾಂಶ

ವರಮಹಾಲಕ್ಷ್ಮಿ ಪೂಜೆಗೆ ಬೆಂಗಳೂರು ನಗರದ ಜನರು ಸಿದ್ಧತೆ ಆರಂಭಿಸಿದ್ಧಾರೆ. ಲಕ್ಷ್ಮೀದೇವಿಯ ವಿಗ್ರಹ ಖರೀದಿ ಆರಂಭಿಸಿದ್ದಾರೆ. ಚಿನ್ನವನ್ನೂ ಮುಂಗಡವಾಗಿ ಬುಕ್‌ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶ್ರಾವಣ ಶುಕ್ರವಾರದ ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ನಗರ ಸಜ್ಜಾಗಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ವರಮಹಾಲಕ್ಷ್ಮಿಯ ಮೂರ್ತಿ, ಅಲಂಕಾರಿಕ ಪರಿಕರಗಳನ್ನು ಗೃಹಿಣಿಯರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಸಿದ್ಧತೆಗಳು ಜೋರಾಗಿವೆ. ಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ಮೂರ್ತಿಗಳು, ಅಗತ್ಯ ಸಾಮಗ್ರಿಗಳ ವ್ಯಾಪಾರ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ.

ಮಧುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ದಾವಣಿ-ಲಂಗ ಧರಿಸಿದ ಕನ್ಯಾ ಕುಮಾರಿಯಂತೆ ಕಾಣುವ ವರಮಹಾಲಕ್ಷ್ಮಿ, ಕಮಲದ ಹೂವಿನೊಳಗೆ ಕುಳಿತ ಲಕ್ಷ್ಮಿ, ಆದಿ ಶಕ್ತಿಯಂತೆ ಕಾಣಿಸುವ ನಿಂತ ವರಮಹಾಲಕ್ಷ್ಮಿ ಸೇರಿ ನಾನಾ ಬಗೆಯ ಅಲಂಕೃತಗೊಂಡ ವರಮಹಾಲಕ್ಷ್ಮಿ ಉತ್ಸವ ಮೂರ್ತಿಗಳು ಮಾರಾಟ ಆಗುತ್ತಿವೆ. ಕನಿಷ್ಠ ₹750 ರಿಂದ ₹8 ಸಾವಿರಕ್ಕೂ ಹೆಚ್ಚಿನ ದರವಿದೆ. ಗಾಂಧೀ ಬಜಾರ್‌, ಮಲ್ಲೇಶ್ವರದ ಮುಖ್ಯ ರಸ್ತೆಯ ಸುತ್ತ-ಮುತ್ತ, ಜಯನಗರ 4ನೇ ಬ್ಲಾಕ್‌ ಸೇರಿದಂತೆ ನಾನಾ ಮಾರುಕಟ್ಟೆಗಳಲ್ಲಿ, ಗ್ರಂಥಿಗೆ ಮಳಿಗೆಗಳಲ್ಲಿ ಮೂರ್ತಿಗಳು ರಾರಾಜಿಸುತ್ತಿವೆ.

ಉದ್ಯೋಗಸ್ಥ ಮಹಿಳೆಯರು ಹಬ್ಬದ ದಿನ ಅಥವಾ ಮುನ್ನಾದಿನ ಸಿದ್ಧತೆ ಕಷ್ಟವೆಂದು ಮೊದಲೇ ಖರೀದಿ ಮಾಡುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಹಂಪಲು, ಹೂವುಗಳ ದರ ಕೂಡ ಏರಿಕೆಯಾಗುತ್ತಿದೆ. ಆಷಾಢದಲ್ಲಿ ಕಡಿಮೆಯಿದ್ದ ಹೂಗಳ ದರ ಈಗ ಹೆಚ್ಚಾಗಿದೆ. ಬೇಸಿಗೆಯಲ್ಲಿನ ಬಿರು ಬಿಸಿಲು, ಬಳಿಕ ವಿಪರೀತ ಮಳೆ ಕಾರಣದಿಂದ ಹೂಗಳು ಮಾರುಕಟ್ಟೆಗೆ ಕಡಿಮೆ ಬರುತ್ತಿರುವುದು ಬೆಲೆ ಹೆಚ್ಚಾಗಲು ಕಾರಣ ಎಂದು ವರ್ತಕರು ಹೇಳಿದ್ದಾರೆ.

ಹಬ್ಬದ ದಿನದಂದು ಲಕ್ಷ್ಮೀದೇವಿ ಪೂಜಿಸಿ ಬಳಿಕ ಮನೆಯ ನೆರೆಹೊರೆಯ ಮುತ್ತೈದೆಯರನ್ನು ಕರೆದು ಅವರಿಗೆ ಅರಿಶಿನ, ಕುಂಕುಮ, ಬಾಗೀನ ನೀಡುವ ಸಂಪ್ರದಾಯವಿದೆ.ಚಿನ್ನಾಭರಣಕ್ಕೆ ಬೇಡಿಕೆ

ವರಮಹಾಲಕ್ಷ್ಮಿ ಹಬ್ಬದ ವೇಳೆ ಚಿನ್ನಾಭರಣ ಬೆಲೆ ಏರಿಳಿತದಲ್ಲಿದೆ. ಕರ್ನಾಟಕ ರಾಜ್ಯ ಜ್ಯೂವೆಲ್ಲರ್ಸ್‌ ಫೆಡರೇಷನ್‌ ಪ್ರಕಾರ ಜು.13ರಂದು 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹7061, 22 ಕ್ಯಾರಟ್‌ಗೆ ₹6545 (+ಜಿಎಸ್‌ಟಿ) ಬೆಲೆಯಿತ್ತು. ಹಬ್ಬಕ್ಕಾಗಿ ವಿಶೇಷವಾಗಿ ಲಕ್ಷ್ಮಿ ಕಾಯಿನ್‌ಗಳನ್ನು ಜನತೆ ಮುಂಗಡವಾಗಿ ಬುಕ್‌ ಮಾಡಿಕೊಂಡಿದ್ದಾರೆ. ಬಜೆಟ್‌ನಲ್ಲಿ ಚಿನ್ನದ ಆಮದು ಸುಂಕ ಇಳಿಕೆ ಮಾಡಿರುವುದರಿಂದ ಬೆಲೆ ಕಡಿಮೆಯೇ ಇದೆ. ಹೀಗಾಗಿ ಈ ಬಾರಿ ಹೆಚ್ಚಾಗಿ ಚಿನ್ನಕ್ಕೆ ಬೇಡಿಕೆ ಇರುವುದನ್ನು ಕಾಣುತ್ತಿದ್ದೇವೆ ಎಂದು ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರ್ಯ ತಿಳಿಸಿದರು.