ನಗರದ ಮೊದಲ ಸ್ಮಾರ್ಟ್‌ ಪಾರ್ಕಿಂಗ್‌ ಭಣಭಣ!

| Published : Jul 10 2024, 12:34 AM IST

ಸಾರಾಂಶ

ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸುಗಮ ಸಂಚಾರಕ್ಕೆ ಸಂಚಕಾರ ತರಬಾರದೆಂಬ ಉದ್ದೇಶದಿಂದ ಬ್ರಾಂಡ್‌ ಬೆಂಗಳೂರು ಯೋಜನೆಯಡಿ ಬಿಬಿಎಂಪಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಸ್ವಾತಂತ್ರ್ಯ ಉದ್ಯಾನದ ಬಳಿ ನಿರ್ಮಿಸಿದ್ದ ಬಹುಮಹಡಿ ಸ್ಮಾರ್ಟ್ ಪಾರ್ಕಿಂಗ್ ಕಟ್ಟಡ ಖಾಲಿ ಹೊಡೆಯುತ್ತಿದ್ದು, ಟೆಂಡರ್‌ ಪಡೆದುಕೊಂಡ ಸಂಸ್ಥೆ ಕಂಗಾಲಾಗಿದೆ.

ರಾಜು ಕಾಂಬಳೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಸುಗಮ ಸಂಚಾರಕ್ಕೆ ಸಂಚಕಾರ ತರಬಾರದೆಂಬ ಉದ್ದೇಶದಿಂದ ಬ್ರಾಂಡ್‌ ಬೆಂಗಳೂರು ಯೋಜನೆಯಡಿ ಬಿಬಿಎಂಪಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಸ್ವಾತಂತ್ರ್ಯ ಉದ್ಯಾನದ ಬಳಿ ನಿರ್ಮಿಸಿದ್ದ ಬಹುಮಹಡಿ ಸ್ಮಾರ್ಟ್ ಪಾರ್ಕಿಂಗ್ ಕಟ್ಟಡ ಖಾಲಿ ಹೊಡೆಯುತ್ತಿದ್ದು, ಟೆಂಡರ್‌ ಪಡೆದುಕೊಂಡ ಸಂಸ್ಥೆ ಕಂಗಾಲಾಗಿದೆ.

ಸ್ವಾತಂತ್ರ್ಯ ಉದ್ಯಾನದ ಹಿಂಭಾಗದಲ್ಲಿ ಬಿಬಿಎಂಪಿ ಅಂದಾಜು ₹80 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡದಲ್ಲಿ ವಾಹನ ನಿಲುಗಡೆ ಮಾಡಲು ವಾಹನ ಸವಾರರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಸುಮಾರು 600 ಕಾರುಗಳು ಹಾಗೂ 750 ಬೈಕುಗಳನ್ನು ನಿಲುಗಡೆ ಮಾಡುವ ಸಾಮರ್ಥ್ಯ ಹೊಂದಿರುವ ಬಹುಮಹಡಿ ಪಾರ್ಕಿಂಗ್‌ ಕಟ್ಟಡ ಬಣಗುಡುತ್ತಿದೆ. ಪಾರ್ಕಿಂಗ್‌ ನಿರ್ವಹಣೆಯ ಟೆಂಡರ್‌ ಪಡೆದುಕೊಂಡಿದ್ದ ಖಾಸಗಿ ಸಂಸ್ಥೆಯು ನಷ್ಟಕ್ಕೆ ಸಿಲುಕುವ ಆತಂಕದಲ್ಲಿದೆ. ಲಕ್ಷಾಂತರ ರು.ಗಳನ್ನು ಖರ್ಚು ಮಾಡಿ ಅತ್ಯುತ್ತಮ ತಂತ್ರಜ್ಞಾನ ಬಳಕೆ ಮಾಡಿರುವ ಸಂಸ್ಥೆಯು ದೇಶದಲ್ಲೇ ಮಾದರಿ ಪಾರ್ಕಿಂಗ್‌ ತಾಣವಾಗಿ ರೂಪಿಸಿದೆ. ಜತೆಗೆ, ಸ್ಮಾರ್ಟ್‌ ಪಾರ್ಕಿಂಗ್‌ ತಾಣದಲ್ಲಿ ವಾಹನ ನಿಲ್ಲಿಸುವವರಿಗೆ ವಿಧಾನಸೌಧ ಹಾಗೂ ಮೆಜೆಸ್ಟಿಕ್‌ ಕಡೆ ಹೋಗುವುದಕ್ಕೆ ಉಚಿತ ಬಸ್‌ ಸೇವೆ ನೀಡಿದೆ. ಆದರೂ ವಾಹನ ಮಾಲೀಕರು ಮಾತ್ರ ಸ್ಮಾರ್ಟ್‌ ಪಾರ್ಕಿಂಗ್‌ ಕಡೆ ಬರುತ್ತಿಲ್ಲ.

ದಿನಕ್ಕೆ ಕೇವಲ ₹5 ಸಾವಿರ ಸಂಗ್ರಹ:

ಉಚಿತ ವೈಫೈ, ಸಿಸಿ ಕ್ಯಾಮೆರಾ ಭದ್ರತೆ, ಮಹಿಳೆಯರಿಗೆ ವಾಹನ ನಿಲುಗಡೆಗೆ ಸ್ಥಳ ಮೀಸಲು, ಮುಂಗಡ ಸ್ಥಳ ಮೀಸಲು ಸೇರಿದಂತೆ ಮೊದಲಾದ ಸೌಲಭ್ಯಗಳನ್ನು ನೀಡಿದರೂ ಒಂದು ದಿನದಲ್ಲಿ 5 ರಿಂದ 6 ಬೈಕ್‌ ಹಾಗೂ 20 ರಿಂದ 30 ಕಾರು ಮಾತ್ರ ನಿಲ್ಲುತ್ತಿವೆ. ಇದರಿಂದ ಸುಮಾರು 5 ಸಾವಿರ ರು, ವರೆಗೆ ಮಾತ್ರ ಶುಲ್ಕ ಸಂಗ್ರಹವಾಗುತ್ತಿದೆ.

==

ಪಾರ್ಕಿಂಗ್‌ ನಿಷೇಧ ಕಾಗದಕ್ಕೆ ಸೀಮಿತ

ಬಹುಮಡಿ ವಾಹನ ಪಾರ್ಕಿಂಗ್‌ ಬಳಕೆ ಹೆಚ್ಚಾಗಬೇಕು. ಗಾಂಧಿನಗರ, ಮೆಜೆಸ್ಟಿಕ್‌, ವಿಧಾನಸೌಧನ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಸ್ಮಾರ್ಟ್‌ ಪಾರ್ಕಿಂಗ್‌ ತಾಣದ ಸುತ್ತಮುತ್ತಲಿನ 35 ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಆದೇಶಿಸಿದೆ. ಆದರೆ, ಈ ಆದೇಶ ಕೇವಲ ಕಾಗದಕ್ಕೆ ಸೀಮಿತವಾಗಿದೆ. ನಿಷೇಧಿಸಿದ ಬಹುತೇಕ ರಸ್ತೆಗಳಲ್ಲಿ ಇಂದಿಗೂ ರಾಜಾರೋಷವಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದನ್ನು ಕಾಣಬಹುದಾಗಿದೆ.

ಅಧಿಕಾರಿಗಳು ಸಹಕರಿಸುತ್ತಿಲ್ಲ:

ಪಾರ್ಕಿಂಗ್‌ ತಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆ ಅವಕಾಶ ನೀಡುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದರು. ಪಾರ್ಕಿಂಗ್‌ ತಾಣ ಉದ್ಘಾಟನೆಗೊಂಡ ಮೂರ್ನಾಲ್ಕು ದಿನ ಮಾತ್ರ ರಸ್ತೆಗಳಲ್ಲಿ ವಾಹನ ನಿಲ್ಲಿಸಬಾರದು ಎಂದು ಧ್ವನಿ ವರ್ಧಕದ ಮೂಲಕ ಘೋಷಣೆ ಮಾಡಲಾಯಿತು. ನಂತರ ಎಲ್ಲವನ್ನೂ ಕೈ ಬಿಟ್ಟಿದ್ದಾರೆ ಎಂದು ಗುತ್ತಿಗೆ ಪಡೆದ ಸಂಸ್ಥೆಯ ಅಧಿಕಾರಿಗಳು ಆರೋಪಿಸಿದ್ದಾರೆ.