ಪಾಲಿಕೆ ಆಯುಕ್ತರಿಂದ ನಗರ ಸಂಚಾರ

| Published : Dec 29 2023, 01:32 AM IST

ಸಾರಾಂಶ

ಪುಟ್‌ಪಾತ್‌ ಮೇಲೆ ಇಟ್ಟಿರುವ ವಸ್ತುಗಳನ್ನು ತಕ್ಷಣ ತೆರವುಗೊಳಿಸುವಂತೆ ಸಂಬಂಧಿಸಿದ ಅಂಗಡಿ ಮಾಲಿಕರಿಗೆ ಸೂಚನೆ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಗುರುವಾರ ನಗರ ಸಂಚಾರ ನಡೆಸಿದರು.

ಈ ವೇಳೆ ಸಾರ್ವಜನಿಕರು ಆಯುಕ್ತರ ಮುಂದೆ ಹಲವು ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ನಗರದ ಹಲವು ಕಡೆಗಳಲ್ಲಿ ಒಳಚರಂಡಿ ಬಂದಾಗಿ ಚರಂಡಿ ನೀರೆಲ್ಲ ರಸ್ತೆಯ ಮೇಲೆಯೇ ಹರಿಯುತ್ತಿದ್ದು, ಇದರಿಂದ ಜನತೆ ಸಂಚರಿಸದಂತಹ ಪರಿಸ್ಥಿತಿ ಎದುರಾಗಿದೆ. ಆದಷ್ಟು ಬೇಗ ಬಂದಾಗಿರುವ ಒಳ ಚರಂಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಈ ವೇಳೆ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವಳಿ ನಗರದಲ್ಲಿ ಬಂದಾಗಿರುವ ಒಳಚರಂಡಿಗಳನ್ನು ದುರಸ್ತಿಗೊಳಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ನಗರದಲ್ಲಿ ಸಂಚಾರ ಕೈಗೊಂಡ ಆಯುಕ್ತರು ಪುಟ್‌ಪಾತ್‌ ಒತ್ತುವರಿ ಮಾಡಿಕೊಂಡು ಎಲ್ಲೆಂದರಲ್ಲಿ ಅನಧಿಕೃತವಾಗಿ ಹಾಕಲಾದ ನಾಮಫಲಕಗಳನ್ನು ತೆರವುಗೊಳಿಸುವಂತೆ ಹಾಗೂ ಪುಟ್‌ಪಾತ್‌ ಮೇಲೆ ಇಟ್ಟಿರುವ ವಸ್ತುಗಳನ್ನು ತಕ್ಷಣ ತೆರವುಗೊಳಿಸುವಂತೆ ಸಂಬಂಧಿಸಿದ ಅಂಗಡಿ ಮಾಲಿಕರಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆಯ ವತಿಯಿಂದ ಮಾಡಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳಾದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ನಗರದ ಸ್ವಚ್ಛತೆಯ‌ ಕುರಿತು ಪರಿಶೀಲಿಸಿ ಸಮಗ್ರ ಮಾಹಿತಿ ಪಡೆದರಲ್ಲದೇ ಕೋವಿಡ್ ನಿಯಂತ್ರಣಾ ಮುಂಜಾಗ್ರತೆಯ ಕುರಿತು ಹುಬ್ಬಳ್ಳಿ ಧಾರವಾಡ ಮಹಾನಗರದ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಎಲ್ಲೆಂದರಲ್ಲಿ ಕಸ ಚೆಲ್ಲುವವರಿಗೆ ಸ್ಥಳದಲ್ಲಿಯೇ ದಂಡವಿಧಿಸುವಂತೆ ತಿಳಿಸಿದರು.

ಈ ವೇಳೆ ವಲಯ ಸಹಾಯಕ ಆಯುಕ್ತರರು, ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.