ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಗುಮ್ಮಟನಗರಿ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕರು ಗಣವೇಷದಲ್ಲಿ ಭರ್ಜರಿ ಪಥಸಂಚಲನ ನಡೆಸುವ ಮೂಲಕ ಗಮನ ಸೆಳೆದರು. ಸಾವಿರಾರು ಸ್ವಯಂ ಸೇವಕರು ಬಿಳಿ ವರ್ಣದ ಅಂಗಿ, ಕಾಕಿ ಪ್ಯಾಂಟ್ ಆರ್.ಎಸ್.ಎಸ್ ಸಾಂಪ್ರದಾಯಿಕ ಉಡುಗೆಯಲ್ಲಿ ಶಿಸ್ತುಬದ್ದ ಹೆಜ್ಜೆ ಹಾಕಿದರು.ವಿಜಯದಶಮಿ ಉತ್ಸವದ ಪ್ರಯುಕ್ತ ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶ್ರಯದಲ್ಲಿ ನಡೆದ ಸ್ವಯಂ ಸೇವಕರ ಆಕರ್ಷಕ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ಸ್ವಯಂ ಸೇವಕರು ಸಾಗುತ್ತಿದ್ದರೇ, ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಪಥಸಂಚಲ ಸ್ವಾಗತಿಸಿದ್ದು ವಿಶೇಷವಾಗಿತ್ತು.ಪಥ ಸಂಚಲನ ಸಾಗುವ ಮಾರ್ಗದಲ್ಲಿ ಹಾಕಿದ್ದ ಸುಂದರ ರಂಗೋಲಿ ಗಮನ ಸೆಳೆಯಿತು. ಪ್ರಮುಖ ರಸ್ತೆಗಳಲ್ಲಿ ಅನೇಕರು ಪುಷ್ಪವೃಷ್ಟಿಗೈದು ಸ್ವಾಗತ ಕೋರಿದರು. ನಗರದ ಗಾಂಧಿವೃತ್ತದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತ ಕೋರಿದರೆ, ಮಾಜಿ ಶಾಸಕ ರಮೇಶ ಭೂಸನೂರ ಅಥಣಿ ರಸ್ತೆಯಲ್ಲಿ ಹೂಮಳೆಗೈದರ. ಕನಕದಾಸ ವೃತ್ತದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೂಮಳೆ ಸುರಿಸಿ ಸ್ವಾಗತ ಕೋರಿದರು.ಸಂಚಲನದ ಉದ್ದಕ್ಕೂ ಸ್ವಯಂ ಸೇವಕರು ತೋರಿದ ಶಿಸ್ತು ಗಾಂಭಿರ್ಯ ನೋಡುಗರ ಮನ ಸೆಳೆಯಿತು. ರಸ್ತೆಗಳ ಅಕ್ಕ-ಪಕ್ಕ, ತಿರುವು, ವೃತ್ತ ಹಾಗೂ ಕಟ್ಟಡಗಳ ಮೇಲೆ ನಿಂತಿದ್ದ ಮಹಿಳೆಯರು ಪುಷ್ಪಗಳನ್ನು ಅರ್ಪಿಸಿ ಘೋಷಣೆ ಮೊಳಗಿಸಿದರು. ಸಂಚಲನದ ಮಾರ್ಗವನ್ನು ತಳಿರು, ತೋರಣ, ರಂಗೋಲಿಯಿಂದ ಅಲಂಕರಿಸಲಾಗಿತ್ತು. ಅಲ್ಲಲ್ಲಿ ಆಳೆತ್ತರದ ಕೇಸರಿ ಧ್ವಜಗಳು, ಕಮಾನು, ಬಂಟಿಗ್ಸ್ ಹಾಕಲಾಗಿತ್ತು. ಕೆಲವು ಮನೆಗಳ ಎದುರು ಭಾರತ ಮಾತೆಯ ಭಾವಚಿತ್ರ ಇರಿಸಿ ವಿಶೇಷ ಪೂಜೆ ಸಲ್ಲಿಸಿದ್ದು ಕಂಡು ಬಂದಿತು. ಸ್ವಯಂ ಸೇವಕನೋರ್ವ ಹಿಡಿದು ಸಾಗಿದ ಭಗವಾಧ್ವಜಕ್ಕೆ ದಾರಿಯುದ್ದಕ್ಕೂ ಮಹಿಳೆಯರು ಆರತಿ ಬೆಳಗಿ ಗೌರವ ಸಲ್ಲಿಸಿದರು. ಹಿಂದೂಪರ ಸಂಘಟನೆಗಳ ಸದಸ್ಯರು ಭಗವಾಧ್ವಜದ ಮೇಲೆ ಪುಷ್ಪವಷ್ಟಿ ಸುರಿಸುವ ಮೂಲಕ ನಮನ ಸಲ್ಲಿಸಿದರು.ನಗರದ ಪ್ರಮುಖ ಕಡೆಗಳಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಹಿನ್ನೆಲೆ ಪೊಲೀಸ್ ಇಲಾಖೆ ಬಿಗಿ ಭದ್ರತೆಯನ್ನ ಕೈಗೊಳ್ಳಲಾಗಿತ್ತು. ಎರಡು ದಳಗಳಲ್ಲಿ ಪಥ ಸಂಚಲನೆ ನಡೆಯಿತು. ಸುಶ್ರಾವ್ಯ ಡ್ರಮ್ ಸೇರಿದಂತೆ ವಾದ್ಯಗಳಿಂದ ಮೊಳಗಿದ ಹಿಮ್ಮೇಳನ ಪಥ ಸಂಚಲನಕ್ಕೆ ಮೆರಗು ನೀಡಿತು. ತೆರೆದ ಹಾಗೂ ಪುಷ್ಪಗಳಿಂದ ಅಲಂಕೃತ ವಾಹನದಲ್ಲಿ ಆರ್‌ಎಸ್‌ಎಸ್ ಸ್ಥಾಪಕರಾದ ಡಾ.ಕೇಶವ ಹೆಗಡೆವಾರ ಹಾಗೂ ಶ್ರೀ ಸದಾಶಿವರಾವ ಗೊಲವಾಳಕರ ಅವರ ಭಾವಚಿತ್ರವನ್ನು ಪ್ರತಿಷ್ಠಾಪಿಸಲಾಗಿತ್ತು.ಸೆಟ್‌ಲೈಟ್ ಬಸ್ ನಿಲ್ದಾಣದಿಂದ ಆರಂಭವಾದ ಪಥ ಸಂಚಲನ ವಾಟರ್ ಟ್ಯಾಂಕ್, ಶಿವಾಜಿ ಮಹಾರಾಜ ವೃತ್ತ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಾಗಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಭೌದ್ದಿಕ ಆಯೋಜಿಸಿದ ದರಬಾರ ಹೈಸ್ಕೂಲ್ ಮೈದಾನಕ್ಕೆ ಆಗಮಿಸಿ ಸಂಪನ್ನಗೊಂಡಿತು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಸಿದ್ದರಾಮಪ್ಪ ಉಪ್ಪಿನ, ರಾಜಶೇಖರ ಮಗಿಮಠ, ಪ್ರಕಾಶ ಅಕ್ಕಲಕೋಟ, ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ರಾಮಸಿಂಗ್ ಹಜೇರಿ, ವಿಜಯ ಜೋಶಿ ಸೇರಿ ಮುಂತಾದವರು ಪಾಲ್ಗೊಂಡಿದ್ದರು.