ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಂಶೋಧಕರಾಗಿ ನಿಮ್ಮ ಶೈಕ್ಷಣಿಕ ಪಯಣವನ್ನು ಬಲಪಡಿಸುವ ಮತ್ತು ಶೈಕ್ಷಣಿಕ ಜಗತ್ತಿನಲ್ಲಿ ಛಾಪು ಮೂಡಿಸುವ ಮಹತ್ವದ ಅವಕಾಶವಾಗಿದೆ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಮತ್ತು ವ್ಯವಹಾರ ನಿರ್ವಹಣೆ ಅಧ್ಯಯನ ವಿಭಾಗಗಳು ಹಾಗೂ ನವದೆಹಲಿಯ ಐಸಿಎಸ್‌ಎಸ್‌ಆರ್ ಪ್ರಾಯೋಜಕತ್ವದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಶೈಕ್ಷಣಿಕ ಸಂಶೋಧನಾ ಬರವಣಿಗೆ ಎಂಬ ವಿಷಯದ ಕುರಿತು ಎರಡು ವಾರಗಳ ಸಾಮರ್ಥ್ಯ ವೃದ್ಧಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾತನಾಡಿದ ಅವರು, ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ನಿಮ್ಮ ಕೆಲಸದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ನೀವು ಹೊಂದಲಿದ್ದೀರಿ ಎಂದು ತಿಳಿಸಿದರು.
ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಸಂಶೋಧಕರು ಮತ್ತು ಅಧ್ಯಾಪಕರ ಸಾಮರ್ಥ್ಯ ವೃದ್ಧಿಯ ವಿಚಾರ ಇಂದಿನ ಶೈಕ್ಷಣಿಕ ಮತ್ತು ಸಂಶೋಧನಾ ಪ್ರಪಂಚದಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಇಂತಹ ಕಾರ್ಯಾಗಾರಗಳು ಅಧ್ಯಾಪಕರು ಮತ್ತು ಸಂಶೋಧಕರಿಗೆ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಬೇಕಾದ ಕುಶಲತೆ ಮತ್ತು ಹೊಸ ಕೌಶಲ್ಯಗಳನ್ನು ನೀಡಲು ನೆರವಾಗುತ್ತವೆ ಎಂದರು.ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಸುಂದರರಾಜ ಅರಸ ದಿಕ್ಸೂಚಿ ಭಾಷಣ ಮಾಡಿ, ಬರವಣಿಗೆಯು ಕೇವಲ ಕೌಶಲ್ಯವಲ್ಲ. ಇದು ಆಲೋಚನೆಗಳನ್ನು ನಿಮ್ಮ ಕ್ಷೇತ್ರಕ್ಕೆ ಪ್ರಭಾವಶಾಲಿ ಕೊಡುಗೆಗಳಾಗಿ ಪರಿವರ್ತಿಸುವ ಅಗತ್ಯ ಸಾಧನವಾಗಿದೆ. ನಿಮ್ಮ ಸಂಶೋಧನಾ ವಿಧಾನವನ್ನು ಸುಧಾರಿಸಲು, ಸಂಶೋಧನೆ ಕೈಗೊಳ್ಳಲು ಮತ್ತು ಜಾಗತಿಕ ಶೈಕ್ಷಣಿಕ ವಲಯದಲ್ಲಿ ಕೊಡುಗೆ ನೀಡಲು ಅಗತ್ಯವಿರುವ ಪರಿಕರಗಳೊಂದಿಗೆ ನಿಮಗೆ ಸೂಕ್ತ ಸಾಮರ್ಥ್ಯ ನೀಡಲು ಈ ಕಾರ್ಯಾಗಾರ ಆಯೋಜಿಸಲಾಗಿದೆ. ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಇಂತಹ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವುದು ಪ್ರಾಧ್ಯಾಪಕರ ಶೈಕ್ಷಣಿಕ ಪಯಣವನ್ನು ಅರ್ಥಪೂರ್ಣಗೊಳಿಸುವ ಅಮೂಲ್ಯ ಅವಕಾಶವಾಗಿದೆ. ಸಂಶೋಧನಾ ಬರವಣಿಗೆಯು ನಿಮ್ಮ ಪಾಂಡಿತ್ಯಪೂರ್ಣ ಉತ್ಪಾದನೆ ಮತ್ತು ವೃತ್ತಿಪರ ಬೆಳವಣಿಗೆಯ ಮೇಲೆ ಮಹತ್ವದ ಪರಿಣಾಮ ಬೀರುವ ಕೌಶಲವಾಗಿದೆ ಎಂದು ತಿಳಿಸಿದರು.ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಮಾತನಾಡಿ, ಅಧ್ಯಾಪಕರಿಗೆ ಮತ್ತು ಸಂಶೋಧಕರಿಗೆ ಸಂಶೋಧನಾ ಬರವಣಿಗೆಯಲ್ಲಿ ಅಗತ್ಯ ಕೌಶಲಗಳನ್ನು ಪಡೆದುಕೊಳ್ಳಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.
ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ಪ್ರೊ.ಮಲ್ಲಿಕಾರ್ಜುನ.ಎನ್.ಎಲ್ ಮಾತನಾಡಿ, ಕಾರ್ಯಾಗಾರದಲ್ಲಿ ಅಧ್ಯಾಪಕರು ಮತ್ತು ಸಂಶೋಧಕರು ಕೌಶಲ, ಜ್ಞಾನ ಹಾಗೂ ಮಾಹಿತಿ ಪಡೆಯುವುದರಿಂದ ನವೀನ ತಂತ್ರಜ್ಞಾನ, ಆಧುನಿಕ ಉಪಕರಣಗಳ ಬಳಕೆ, ಮತ್ತು ವೈಜ್ಞಾನಿಕ ಪಠ್ಯಗಳ ಬೋಧನೆ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟರು.ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾರ್ಯಗಾರದ ನಿರ್ದೇಶಕ ಪ್ರೊ.ರಾಜಕುಮಾರ ಮಾಲಿಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊ.ಜ್ಯೋತಿ ಉಪಾಧ್ಯ ಹಾಗೂ ಸಂಶೋಧನಾ ವಿದ್ಯಾರ್ಥಿನಿ ನಿಖಿತಾ ಚಿತವಾಡಗಿ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅಶ್ವಿನಿ ಕೆ.ಎನ್ ನಿರೂಪಿಸಿದರು. ಸಹ-ಕೋರ್ಸ್ ನಿರ್ದೇಶಕ ಡಾ.ಚಂದ್ರಶೇಖರ ಮಠಪತಿ ವಂದಿಸಿದರು.ಸಂಶೋಧಕರಾಗಿ ನಿಮ್ಮ ಶೈಕ್ಷಣಿಕ ಪಯಣವನ್ನು ಬಲಪಡಿಸುವ ಮತ್ತು ಶೈಕ್ಷಣಿಕ ಜಗತ್ತಿನಲ್ಲಿ ಛಾಪು ಮೂಡಿಸುವ ಮಹತ್ವದ ಅವಕಾಶವಾಗಿದೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ನಿಮ್ಮ ಕೆಲಸದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ನೀವು ಹೊಂದಲಿದ್ದೀರಿ.
-ಪ್ರೊ.ಸಿ.ಎಂ.ತ್ಯಾಗರಾಜ, ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಕುಲಪತಿ.