ಬ್ಯಾಡಗಿ: ವಿದ್ಯಾರ್ಥಿಗಳು, ಸಾರ್ವಜನಿಕರು ವಿವಿಧ ಸಂಘಟನೆಗಳು ಹಾಗೂ ವಯೋವೃದ್ಧ ಪ್ರಯಾಣಿಕರ ಒತ್ತಡಕ್ಕೆ ಮಣಿದ ಸಾರಿಗೆ ಘಟಕವು ಸೋಮವಾರದಿಂದ ನಗರ ಸಾರಿಗೆ ಬಸ್ ಸಂಚಾರ ಆರಂಭಿಸಿತು.
ಬಸ್ ಸಂಚಾರಕ್ಕೆ ಚಾಲನೆ ನೀಡಿದ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಮಾತನಾಡಿ, ಮುಖ್ಯರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಈಗಿರುವ ಬಸ್ ನಿಲ್ದಾಣಕ್ಕೆ ಘಟಕದ ಯಾವುದೇ ಬಸ್‌ಗಳು ಹೋಗುತ್ತಿರಲಿಲ್ಲ. ಹೀಗಾಗಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಬಸ್ ಸೌಕರ್ಯಕ್ಕಾಗಿ ಮನವಿ ಸಲ್ಲಿಸಿದ್ದವು. ಈ ಕುರಿತು ಶಾಸಕರೊಂದಿಗೆ ಚರ್ಚಿಸಿ ನಗರ ಸಾರಿಗೆ ಆರಂಭಿಸಿದ್ದು ಇದರಿಂದ ವಿದ್ಯಾನಗರ, ಗಾಂಧಿನಗರ, ಬಸವೇಶ್ವರ ನಗರ ಅಗಸನಹಳ್ಳಿ ಎಲ್ಲದಕ್ಕೂ ಹೆಚ್ಚಾಗಿ ಮಾರಕಟ್ಟೆಗೆ ಹಳ್ಳಿಗಳಿಂದ ಅಗಮಿಸುವ ಕೂಲಿ ಕಾರ್ಮಿಕರ ದೃಷ್ಟಿಯಿಂದ ನಗರ ಆರಂಭಿಸಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಶಿಡೇನೂರಿನಿಂದ ಮೋಟೆಬೆನ್ನೂರ: ಘಟಕ ವ್ಯವಸ್ಥಾಪಕ ಮಾತನಾಡಿ, ಸದರಿ ಬಸ್ ಹಳೇ ಶಿಡೇನೂರಿನಿಂದ ಮೋಟೆಬೆನ್ನೂರವರೆಗೆ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಹಾಗೂ ಮದ್ಯಾಹ್ನ 3ರಿಂದ ಸಂಜೆ 7ರ ವರೆಗೆ ಸಂಚರಿಸಲಿದ್ದು, ಬಳಿಕ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ನಗರದಲ್ಲಿಯೇ ರೈಲ್ವೆ ನಿಲ್ದಾಣದಿಂದ ಹೊರಟು ನೆಹರುನಗರ, ಕಾಕೋಳ ಕ್ರಾಸ್, ಸುಭಾಸ ಸರ್ಕಲ್, ಕದರಮಂಡಲಗಿ ಕ್ರಾಸ್ ಕಲಾಭವನ, ಅಂಬೇಡ್ಕರ್ ವೃತ್ತ, ಗುಮ್ಮನಹಳ್ಳಿ ಕ್ರಾಸ್ (ಎಪಿಎಂಸಿ ಬ್ಯಾಕ್ ಗೇಟ) ಬಳಸಿಕೊಂಡು ಅಗಸನಹಳ್ಳಿವರೆಗೆ ಸಂಚರಿಸುವುದಾಗಿ ತಿಳಿಸಿದರು, ಮಹಿಳಾ ಪ್ರಯಾಣಿಕರಿಗೆ ಉಚಿತ ಸೌಲಭ್ಯವಿದ್ದು ಪುರುಷರು ಮಾತ್ರ ಎಂದಿನಂತೆ ಹಣ ನೀಡಿ ಸಂಚರಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಈರಣ್ಣ ಮಲ್ಲಾಡದ, ಹನುಮಂತಪ್ಪ ಕಾಟೇನಹಳ್ಳಿ, ಮಂಜುನಾಥ ಹಂಜಿ, ಹೈದರಲಿ, ಮಾರುತಿ ಅಚ್ಚಿಗೇರಿ, ಮಾಲತೇಶ ಶಿಡ್ಲಣ್ಣನವರ, ಬಸವರಾಜ ಸಂಕಣ್ಣನವರ, ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ, ಬಾಬು ಒಲೇಕಾರ, ಪೀರಾಂಬಿ ಸೇರಿದಂತೆ ಸಾರಿಗೆ ಘಟಕದ ಸಿಬ್ಬಂದಿಗಳು ಉಪಸ್ತಿತರಿದ್ದರು.