ಪ್ರಾಥಮಿಕ ಹಾಗೂ ಪ್ರೌಢ ಹಂತದ ಶಿಕ್ಷಣ ಸಂಪೂರ್ಣ ಉಚಿತವಾಗಿದ್ದು, ಗುಣಮಟ್ಟದ ಶಿಕ್ಷಣವನ್ನು ಎಲ್ಲ ಮಕ್ಕಳಿಗೆ ನೀಡಲಾಗುತ್ತಿದೆ. ಸ್ವಯಂಸೇವಾ ಮನೋಭಾವನೆಯನ್ನು ಅಲ್ಲಿಯ ಎಲ್ಲ ನಾಗರಿಕರು ಹೊಂದಿದ್ದು, ಸರ್ವ ರೀತಿಯಿಂದಲೂ ಸ್ವಾವಲಂಬಿಗಳಾಗಿದ್ದಾರೆ.

ಗದಗ: ದೇಶ ಎಂದರೆ ಅಲ್ಲಿಯ ಜನಗಳು ಸ್ವಚ್ಛತೆ, ಸೌಂದರ್ಯಪ್ರಜ್ಞೆ, ಶಿಸ್ತು, ಕಾನೂನು ಪಾಲನೆಯಂಥ ವಿಷಯಗಳಲ್ಲಿ ಜಾಗೃತರಾಗಿ ಸ್ವಯಂಪ್ರೇರಣೆಯಿಂದ ಕಾರ್ಯೋನ್ಮುಖರಾದಾಗ ದೇಶದ ಏಳ್ಗೆ ಸಾಧ್ಯ ಎಂಬುದು ಅಮೆರಿಕ ಪ್ರವಾಸದಲ್ಲಿ ನನಗೆ ಕಂಡುಬಂದ ಅನುಭವವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ತಿಳಿಸಿದರು.ನಗರದ ತೋಂಟದ ಸಿದ್ಧಲಿಂಗ ಶ್ರೀ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಸಾಹಿತ್ಯ ಸಿಂಚನ ಮಾಲಿಕೆಯಲ್ಲಿ ವಿದೇಶ ಪ್ರವಾಸ ಒಳನೋಟಗಳು ವಿಷಯವಾಗಿ ಮಾತನಾಡಿದರು.

ಪ್ರಾಥಮಿಕ ಹಾಗೂ ಪ್ರೌಢ ಹಂತದ ಶಿಕ್ಷಣ ಸಂಪೂರ್ಣ ಉಚಿತವಾಗಿದ್ದು, ಗುಣಮಟ್ಟದ ಶಿಕ್ಷಣವನ್ನು ಎಲ್ಲ ಮಕ್ಕಳಿಗೆ ನೀಡಲಾಗುತ್ತಿದೆ. ಸ್ವಯಂಸೇವಾ ಮನೋಭಾವನೆಯನ್ನು ಅಲ್ಲಿಯ ಎಲ್ಲ ನಾಗರಿಕರು ಹೊಂದಿದ್ದು, ಸರ್ವ ರೀತಿಯಿಂದಲೂ ಸ್ವಾವಲಂಬಿಗಳಾಗಿದ್ದಾರೆ. ಸಾರಿಗೆ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ವಿಷಯಗಳಲ್ಲಿ ಸ್ವಲ್ಪ ಮಟ್ಟಿನ ಅಧ್ಯಯನವನ್ನು ಮಾಡಲು ಸಹಾಯಕವಾಯಿತು. ನಮ್ಮಲ್ಲೂ ಮೂಲ ಶಿಕ್ಷಣದ ಹಂತದಲ್ಲಿಯೇ ಈ ಎಲ್ಲ ಅಂಶಗಳನ್ನು ಕಲ್ಪಿಸಿಕೊಡುವ ವ್ಯವಸ್ಥೆಯಾಗಬೇಕು ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ದೇಶ ಸರ್ವಾಂಗ ಸುಂದರವಾಗಿ ಬೆಳವಣಿಗೆ ಹೊಂದುವ ಹಿನ್ನೆಲೆಯಲ್ಲಿ ಪತ್ರಕರ್ತರು ಮತ್ತು ಪತ್ರಿಕೆಗಳ ಕಾರ್ಯ ಮಹತ್ವದ್ದಾಗಿದೆ. ಜನರ ಮತ್ತು ಸರ್ರಕಾದ ಮಧ್ಯೆ ಕೊಂಡಿಯಾಗಿ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ, ಸಂಸ್ಕೃತಿಯ ವಿಚಾರಗಳನ್ನು ಪಸರಿಸುವ ಕಾರ್ಯವನ್ನು ಮಾಡಿ ನಾಡಿನ ಗಮನ ಸೆಳೆದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರವಾಸ ಕಥನಗಳು ಗಮನ ಸೆಳೆದಿವೆ. ವಿದೇಶದ ವಿಭಿನ್ನ ವಿಚಾರಗಳನ್ನು ಬರಹದ ಮೂಲಕ ಓದುಗನಲ್ಲಿ ವಿಶಿಷ್ಠ ಅನುಭೂತಿಯನ್ನು ಉಂಟು ಮಾಡುವಲ್ಲಿ ಪ್ರವಾಸ ಸಾಹಿತ್ಯ ಯಶಸ್ವಿಯಾಗಿವೆ. ಆಚಾರ, ವಿಚಾರ, ಆಹಾರ, ವಿಹಾರ, ಸಂಸ್ಕೃತಿ, ಪರಂಪರೆಯನ್ನು ಅರಿಯಲು ಸಹಾಯ ಮಾಡುತ್ತವೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಅನಿಲ ತೆಂಬದಮನಿ, ವಿ.ಡಿ. ಕಣವಿ, ಶರಣು ದೊಡ್ಡೂರ, ಸಂಗಪ್ಪ ವ್ಯಾಪಾರಿ, ಬನೇಶ ಕುಲಕರ್ಣಿ, ರಾಮಣ್ಣ ವಗ್ಗಿ, ಅರುಣಕುಮಾರ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಡಾ. ರಾಜಶೇಖರ ಬಳ್ಳಾರಿ ಅವರು ತಮ್ಮ ಅಜ್ಜನವರ ಸ್ಮರಣಾರ್ಥವಾಗಿ ಪರಿಷತ್ತಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿದರು.ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕ ಎಂ.ಎಚ್. ಸವದತ್ತಿ ಇದ್ದರು. ಚಂದ್ರಶೇಖರ ವಸ್ತ್ರದ, ಕೆ.ಎಚ್. ಬೇಲೂರ, ರತ್ನಕ್ಕ ಪಾಟೀಲ, ಡಾ. ಜಿ.ಬಿ. ಪಾಟೀಲ, ಡಾ. ಧನೇಶ ದೇಸಾಯಿ, ಎಸ್.ಯು. ಸಜ್ಜನಶೆಟ್ಟರ, ಬಿ.ಜಿ. ಗಿರಿತಮ್ಮಣ್ಣವರ, ಜಿ.ಎ. ಪಾಟೀಲ, ಬಸವರಾಜ ತೋಟಗೇರಿ, ವಿ.ಎಸ್. ದಲಾಲಿ, ಬಿ.ಬಿ. ಹೊಳಗುಂದಿ, ರಾಜಶೇಖರ ಕರಡಿ, ಅಶೋಕ ಸತ್ಯರಡ್ಡಿ, ಶಕುಂತಲಾ ಗಿಡ್ನಂದಿ, ಜಯನಗೌಡ ಪಾಟೀಲ, ಅಮರೇಶ ರಾಂಪೂರ, ರತ್ನಾ ಪುರಂತರ, ಶಶಿಕಾಂತ ಕೊರ್ಲಹಳ್ಳಿ, ಸಿ.ಕೆ.ಎಚ್. ಕಡಣಿ ಶಾಸ್ತ್ರೀ ಸೇರಿದಂತೆ ಇತರರು ಇದ್ದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ಪರಿನಿರ್ವಾಣದಿನದ ಅಂಗವಾಗಿ ಮಂಜುಳಾ ವೆಂಕಟೇಶಯ್ಯ ಅವರಿಂದ ಕವನವಾಚನ ಜರುಗಿತು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡ್ರ ವಂದಿಸಿದರು.