Civic workers are like soldiers guarding the nation: Nooral's view
- ಪೌರ ಕಾರ್ಮಿಕರ ದಿನಾಚರಣೆ, ಸನ್ಮಾನ, ಬಹುಮಾನ ವಿತರಣೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರದೇಶ ಕಾಯುವ ಸೈನಿಕರಂತೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಪಟ್ಟಣವನ್ನು ಸ್ವಚ್ಛಗೊಳಿಸಿ ನಾಗರಿಕರ ಆರೋಗ್ಯ ಕಾಪಾಡುತ್ತಾರೆ ಎಂದು ತಹಸೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಡಾ.ನೂರಲ್ ಹುದಾ ತಿಳಿಸಿದರು.
ಅವರು ಬುಧವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಜನರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ತಮ್ಮ ಆರೋಗ್ಯ ಸಹ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, 2004 ರಿಂದ ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಪೌರ ಕಾರ್ಮಿಕರು ಹೆಚ್ಚು ಶಿಕ್ಷಣ ಪಡೆಯದಿದ್ದರೂ ಪ್ರಾಮಾಣಿಕತೆ, ನಿಷ್ಠೆಯಿಂದ ತಮ್ಮ ಕೆಲಸ ನಿರ್ವಹಿಸಿ ಆರೋಗ್ಯ ರಕ್ಷಕರಾಗಿದ್ದಾರೆ. ಪೌರ ಕಾರ್ಮಿಕರಿಗೆ ಶೀಘ್ರದಲ್ಲೇ ನಿವೇಶನ ದೊರೆಯಲಿದೆ. ಪೌರ ಕಾರ್ಮಿಕರ ಸಮ್ಮೇಳನದಲ್ಲಿ ಹೊರ ಗುತ್ತಿಗೆ ನೌಕರರನ್ನು ಖಾಯಂ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸಭೆಯ ಅಧ್ಯಕ್ಷತೆ ಸುರೇಶ್ ವಹಿಸಿದ್ದರು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಎಲ್ಲಾ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು.ಆಡಳಿತಾಧಿಕಾರಿ ಡಾ.ನೂರಲ್ ಹುದಾ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಕುಮಾರ್ ಅವರನ್ನು ಪೌರ ಕಾರ್ಮಿಕರ ಸಂಘದವರು ಗೌರವಿಸಿದರು.
ಪೌರ ಕಾರ್ಮಿಕರಿಗಾಗಿ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.ಉಷಾ ಪ್ರಾರ್ಥಿಸಿದರು. ಮಮತ ಸ್ವಾಗತಿಸಿದರು. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.