ಸಾರಾಂಶ
ಉದಯ ಕೊಳೆಕರ
ಕನ್ನಡಪ್ರಭ ವಾರ್ತೆ ಬೈಲಹೊಂಗಲಬೈಲಹೊಂಗಲ ಮತಕ್ಷೇತ್ರಕ್ಕೆ ಒಳಪಡುವ ಸವದತ್ತಿ ತಾಲೂಕಿನ ಹಾರುಗೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಂತಮಾರ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಗ್ರಾಮದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ.ಸುಮಾರು 150 ಜನವಸತಿ ಹೊಂದಿರುವ ಈ ಗ್ರಾಮದಲ್ಲಿ ಸುಮಾರು 700 ಜನಸಂಖ್ಯೆ ಇದ್ದು, 480 ಮತದಾರರಿದ್ದಾರೆ. ಇಬ್ಬರು ಗ್ರಾಪಂ ಸದಸ್ಯರಿದ್ದಾರೆ. ಗೊಂತಮಾರ ಎನ್ನುವ ಈ ಊರಿನಲ್ಲಿ ಸೌಲಭ್ಯಗಳು, ಆಡಳಿತ ವ್ಯವಸ್ಥೆ ಎಂದರೇನು ಎಂಬುದೇ ಗೊತ್ತಿಲ್ಲದಂತಾಗಿದೆ. ಮೂಲ ಸೌಕರ್ಯ ಇಲ್ಲದೆ ಜನರು ಪರದಾಡುವಂತಾಗಿದೆ.
ಗ್ರಾಮದಲ್ಲಿ ಕೇವಲ 1 ರಿಂದ 5ನೇ ತರಗತಿಯವರೆಗೆ ಮಾತ್ರ ಶಾಲೆ ಇದ್ದು, ಮಾಧ್ಯಮಿಕ ವ್ಯಾಸಂಗಕ್ಕಾಗಿ ದೂರದ ಪರ ಊರುಗಳಿಗೆ ಕಾಲ್ನಡಿಯಲ್ಲೇ ಹೋಗಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ. ಗ್ರಾಪಂ ಕಚೇರಿ, ಅಂಚೆ ಕಚೇರಿ, ಪಿಕೆಪಿಎಸ್ ಸೊಸೈಟಿ ಹಾರುಗೊಪ್ಪ ಗ್ರಾಮದಲ್ಲಿದ್ದರೆ, ಬ್ಯಾಂಕ್ ಸೇವೆಗಳು ಚಚಡಿ, ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ, ಪೊಲೀಸ್ ಸ್ಟೇಶನ್, ಕಂದಾಯ ನೀರೀಕ್ಷಕರ ಕಚೇರಿ ಮುರಗೋಡದಲ್ಲಿವೆ, ಇನ್ನು ಪಿಎಚ್‌ಸಿ ಹಾಗೂ ಪಶು ಆಸ್ಪತ್ರೆಯ ಸಂಬಂಧಿತ ಸೇವೆಗಳು ಇಂಚಲದಲ್ಲಿವೆ. ಹಿರಿಯ ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ವ್ಯಾಸಂಗಕ್ಕಾಗಿ ಚಚಡಿ, ಇಂಚಲ, ಬೈಲಹೊಂಗಲ, ನೇಸರಗಿ ಮುಂತಾದ ಊರುಗಳನ್ನು ಅವಲಂಬಿಸಬೇಕಾಗಿದೆ. ಶಾಸಕರ ಕಚೇರಿ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಘಟಕದ ಸೇವೆ ಇವೆರಡನ್ನು ಹೊರತುಪಡಿಸಿ ಇನ್ನುಳಿದೆಲ್ಲ ಸೇವೆಗಳು ಸವದತ್ತಿಗೆ ಒಳಪಡುವುದರಿಂದ ಗ್ರಾಮಸ್ಥರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.ಸಮೀಪದಲ್ಲಿ ಗ್ರಾಮ ಪಂಚಾಯತಿ ಕಚೇರಿ ಇದ್ದರೂ ಸಹ ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈ ಕುರಿತು ಮಾಹಿತಿ ಕೇಳಲು ಗ್ರಾಮಸ್ಥರು ಪಿಡಿಒಗೆ ಸಂಪರ್ಕಿಸಲು ಪ್ರಯತ್ನಿಸಿದರೆ ಫೋನ್ ರಿಸೀವ್ ಮಾಡುವುದಿಲ್ಲ ಎಂಬ ಗಂಭೀರ ಆರೋಪವಿದೆ. ಇಂಚಲದಿಂದ ಗ್ರಾಮಕ್ಕೆ ಸಂಪರ್ಕಿಸುವ ಸುಮಾರು 2 ಮೀ ರಸ್ತೆ ತೀರಾ ಹದಗೆಟ್ಟಿದ್ದರಿಂದ ಸಂಚಾರ ದುಸ್ತರವಾಗಿದೆ. ಗ್ರಾಮದಲ್ಲಿ ಮೊಬೈಲ್ ನೆಟವರ್ಕ್ ಇಲ್ಲದ ಕಾರಣ ತುರ್ತು ಸಂದರ್ಭಗಳಲ್ಲಿ ಸಮಸ್ಯೆ ಅನುಭವಿಸಬೇಕಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.
ರಸ್ತೆಯ ಮೇಲೆಯೇ ಕೊಳಚೆ ನೀರು:ಗ್ರಾಮದ ಕೆಲವೊಂದು ಓಣಿಗಳಲ್ಲಿ ಗಟಾರ ನಿರ್ಮಿಸದ ಕಾರಣ ಕೊಳಚೆ ನೀರು ರಸ್ತೆಯ ತುಂಬೆಲ್ಲ ಹರಿದು ಜನರು ಅಡ್ಡಾಡಲು ತೊಂದರೆಯಾಗಿದೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಬಡ ಕುಟುಂಬಗಳು ಹೆಚ್ಚಾಗಿರುವ ಈ ಹಳ್ಳಿಗಳಲ್ಲಿ ಸಮಸ್ಯೆಗಳಿಂದ ಜನರು ರೋಸಿ ಹೋಗುವಂತಾಗಿದೆ. ರಾಷ್ಟ್ರೀಯ ಜನಜೀವನ್ ಮಿಷನ್ ಅಡಿಯಲ್ಲಿ ಮನೆ-ಮನೆಗೆ ಕುಡಿಯುವ ನೀರು ಪೂರೈಸುವ ಯೋಜನೆ ಇಲ್ಲಿ ಹಳ್ಳ ಹಿಡಿದಿದೆ. ಯೋಜನೆಯಡಿ ನಿರ್ಮಿಸಿದ ನೀರು ಸಂಗ್ರಹದ ಟ್ಯಾಂಕ್ ಬಳಕೆಯಾಗದೆ ಹಾಗೆಯೇ ಇದೆ. ಮನೆ-ಮನೆಗೆ ನಳ ಜೋಡಣೆ ಮಾಡಿದ್ದು, ಇನ್ನುಳಿದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹಾಗಾಗಿ ಜನರ ಪಡಿಪಾಟಲನ್ನು ಕೇಳುವವರೇ ಇಲ್ಲದಂತಾಗಿದೆ.
ವಿದ್ಯಾರ್ಥಿಗಳ ಪರದಾಟ;ಚಚಡಿ ಗ್ರಾಮದಿಂದ ಬರುವ ಬಸ್‌ಗಳೆಲ್ಲ ಪುಲ್ ರಶ್ ಆಗಿ ಬರುವುದರಿಂದ ಗ್ರಾಮದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ವಿಶೇಷ ಬಸ್ ಬಿಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಮುಖ್ಯ ರಸ್ತೆಯಿಂದ ಒಂದು ಕಿಮೀ ಅಂತರದ ಒಳಗೆ ಗ್ರಾಮವಿದ್ದು, ಬಸ್ ಚಾಲಕರು ಕ್ರಾಸ್‌ನಲ್ಲಿಯೇ ಇಳಿಸಿ ಹೋಗುತ್ತಿರುವುದರಿಂದ ವಿದ್ಯಾರ್ಥಿನಿಯರು ಭಯ ಪಡುವಂತಾಗಿದೆ. ದೂರದ ಇಂಚಲದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದನಗಳ ಆಸ್ಪತ್ರೆಯ ಸೇವೆಗಳನ್ನು ಸಮೀಪದ ಚಚಡಿ ಗ್ರಾಮಕ್ಕೆ ಸ್ಥಳಾಂತರಿಸಿ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸವದತ್ತಿ ತಾಲೂಕಿನ ಕೊನೆಯ ಹಳ್ಳಿಯಾದ ಗೊಂತಮಾರ ಗ್ರಾಮದ ಸಮಸ್ಯೆಗಳ ಕುರಿತು ಗಮನಕ್ಕೆ ಬಂದಿದ್ದು. ಕೂಡಲೇ ಭೇಟಿ ನೀಡಿ ಪರಿಶೀಲಿಸಿ ಜನರಿಗಾಗುತ್ತಿರುವ ತೊಂದರೆ ನಿವಾರಿಸುವಲ್ಲಿ ಪ್ರಯತ್ನಿಸಲಾಗುವುದು. ಈಗಾಗಲೇ ಪಿಡಿಒಗೆ ಈ ಕುರಿತು ತಿಳಿಸಲಾಗಿದ್ದು, ನಾಗರಿಕ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
-ಯಶವಂತಕುಮಾರ, ತಾಪಂ ಇಒ ಸವದತ್ತಿ ಗ್ರಾಮದಲ್ಲಿ ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿವೆ. ಮತಕ್ಷೇತ್ರ ಮಾತ್ರ ಬೈಲಹೊಂಗಲ ಆಗಿದ್ದು, ಸರ್ಕಾರಿ ಕಚೇರಿಗಳೆಲ್ಲ ದೂರದ ಸವದತ್ತಿಯಲ್ಲಿ ಇರುವುದರಿಂದ ಗ್ರಾಮದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಗೊಂತಮಾರದಿಂದ ಹಾರುಗೊಪ್ಪ ಗ್ರಾಪಂಗೆ ಹೋಗಬೇಕಾದರೆ ಸರಿಯಾದ ರಸ್ತೆಯಿಲ್ಲ. ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಬರುತ್ತಿಲ್ಲ. ಸುತ್ತುವರಿದು ಕಚೇರಿಗಳು ಇರುವುದರಿಂದ ವಯೋವೃದ್ಧರು, ಅಂಗವಿಕಲರು, ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿವಿಧ ಇಲಾಖೆಗಳು ಪ್ರಯತ್ನಿಸಬೇಕು.-ಗೋರೆಸಾಬ್ ಶಿಲ್ಲೇದಾರ, ಗ್ರಾಮಸ್ಥ