ಸಾರಾಂಶ
ಪಟ್ಟಣದ ಪುರಸಭೆಯ ಎದುರಿನಲ್ಲಿ ಶನಿವಾರ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಹೋರಾಟ ಪ್ರಾರಂಭಿಸಿದರು.
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ಎದುರಿನಲ್ಲಿ ಶನಿವಾರ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಹೋರಾಟ ಪ್ರಾರಂಭಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ರಾಜ್ಯ ಪರಿಷತ್ ಸದಸ್ಯ, ಲಕ್ಷ್ಮೇಶ್ವರ ಶಾಖಾ ಅಧ್ಯಕ್ಷ ಬಸವೆಣೆಪ್ಪ ನಂದೆಣ್ಣವರ ಮಾತನಾಡಿ, ಪೌರ ಕಾರ್ಮಿಕರು, ಡ್ರೈವರ್, ಕ್ಲೀನರ್ಸ್, ಲೋಡರ್ಸ್ ವಾಟರಸಪ್ಲೈ ಸೇರಿದಂತೆ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಎಲ್ಲರನ್ನು ಸರಕಾರ ಕಾಯಂಗೊಳಿಸಬೇಕು ಎನ್ನುವದು ಬಹುದಿನಗಳ ಬೇಡಿಕೆಯಾಗಿದ್ದು, ಸರಕಾರ ಇವರನ್ನು ನಿರ್ಲಕ್ಷಿಸುತ್ತಿದೆ. ಸರ್ಕಾರಿ ನೌಕರರಿಗೆ ಸಿಗುವ ಸವಲತ್ತು ಮುನ್ಸಿಪಲ್ ನೌಕರರಿಗೆ ಜಾರಿಯಾಗಬೇಕು, ದುಡಿಯುವ ಕಾರ್ಮಿಕರಿಗೆ ಸರಿಯಾಗಿ ಅನ್ನ ಸಿಗುತ್ತಿಲ್ಲ. ನೌಕರರ ಅನೇಕ ಬೇಡಿಕೆಗೆ ರಾಜ್ಯಾಧ್ಯಕ್ಷರ ಆದೇಶ ಮೇರೆಗೆ ಸರಕಾರಕ್ಕೆ ೪೫ ದಿನಗಳನ್ನು ಗಡುವು ನೀಡುತ್ತಿದ್ದು ಅಲ್ಲಿಯವರೆಗೆ ಕಪ್ಪು ಪಟ್ಟಿ ಧರಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕೆಲಸ ಮಾಡುತ್ತ ಹೋರಾಟ ಮಾಡುತ್ತೇವೆ. ಈಗಾಗಲೇ ಸರಕಾರಕ್ಕೆ ಅನೇಕ ಬಾರಿ ಮನವಿಗಳನ್ನು ಕೊಟ್ಟರೂ ಸ್ಪಂದನೆ ಸಿಕ್ಕಿಲ್ಲ. ಒಂದು ವೇಳೆ ಸರಕಾರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಪುರಸಭೆ ಎದುರು ಕೆಲಸವನ್ನು ಸ್ಥಗಿತಗೊಳಿಸಿ ಬೇಡಿಕೆಗಳು ಈಡೇರುವವರೆಗೂ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರುಈ ಸಂದರ್ಭದಲ್ಲಿ ದುರಗಪ್ಪ ಬಾಲಣ್ಣವರ, ಅಶೋಕ ನಡಗೇರಿ, ರಾಜು ನಂದೆಣ್ಣವರ, ನೀಲಪ್ಪ ನಂದೆಣ್ಣವರ, ರೇಣಪ್ಪ ಕಮತದ, ಲಕ್ಷಣ ಗುಡಗೇರಿ, ಮಹಾಂತೇಶ ತಂಡಿಗೇರ, ಯಲ್ಲಪ್ಪ ಗಡದವರ, ಫಕ್ಕೀರೇಶ ಕಮತದ, ಗೋಣೆಪ್ಪ ಗಡದವರ, ನಿಂಗವ್ವ ಬಸವನಾಯ್ಕರ, ಲಕ್ಷ್ಮವ್ವ ನಂದೆಣ್ಣವರ, ಪರಶುರಾಮ್ ಹಿತ್ತಲಮನಿ ಸೇರಿದಂತೆ ಅನೇಕ ಪೌರಕಾರ್ಮಿಕರು ಇದ್ದರು.