ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ಜಿ.ಎಸ್.ಮಂಜುನಾಥ್Civil servants should give their children a good education: G.S. Manjunath

| Published : Oct 30 2025, 01:02 AM IST

ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ಜಿ.ಎಸ್.ಮಂಜುನಾಥ್Civil servants should give their children a good education: G.S. Manjunath
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕರನ್ನು ಜನಸಂಖ್ಯೆ ಆಧಾರದ ಮೇಲೆ ನೇಮಕ‌ ಮಾಡಬೇಕು. ಆದರೆ, ದಿನಗೂಲಿ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಇವರಾದರೆ ಗುತ್ತಿಗೆದಾರನಿಗೆ ಹೆದರಿ ತಮ್ಮ ಕೆಲಸ ಮಾಡುತ್ತಾರೆ. ಕಾಯಂನವರು ಸೋಮಾರಿತನ ಮಾಡುತ್ತಾರೆ. ಅದಕ್ಕೆ ಹೊರಗುತ್ತಿಗೆಯವರನ್ನು ಕಾಯಂ ಮಾಡುತ್ತಿಲ್ಲ. ಕಾರ್ಮಿಕರು ಸೋಮಾರಿತನ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ರಾಮನಗರ

ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಬೇರೆ ಕೆಲಸಗಳಿಗೆ ಕಳುಹಿಸಬೇಕು. ಆಗ ಮಾತ್ರ ಈ ವೃತ್ತಿಗೆ ಅಂಟಿರುವ ಜಾತಿಯ ಲೇಬಲ್ ಹೋಗಲಿದೆ ಎಂದು ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಗರಸಭೆ ಹಾಗೂ ಕರ್ನಾಟಕ ಪೌರ ನೌಕರರ ಸಂಘದ ಸಹಯೋಗದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ಮಾಡುವ ಕೆಲಸವು ಜಾತಿ ಆಧಾರಿತವಲ್ಲ. ಆದರೂ, ಈ ವೃತ್ತಿಯಲ್ಲಿ ಶೋಷಿತ ಪರಿಶಿಷ್ಟ ಜಾತಿ ಸಮುದಾಯದವರೇ ಇದ್ದಾರೆ. ಇನ್ನಾದರೂ ಕಾರ್ಮಿಕರು ತಮ್ಮ‌ ಮಕ್ಕಳನ್ನು ಇದೇ ವೃತ್ತಿಯಲ್ಲಿ ಮುಂದುವರಿಸುವುದಿಲ್ಲ ಎಂದು ಶಪಥ ಮಾಡಬೇಕು ಎಂದರು.

ಸಮಾಜದಲ್ಲಿ ಬೇರೆ ಸಮುದಾಯಗಳಲ್ಲಿ ಎಸ್‌ಸಿ ಸಮುದಾಯಗಳಿಗಿಂತಲೂ ಕಡು ಬಡವರು ಇದ್ದಾರೆ. ಆದರೆ, ಅವರು ಬದುಕಿಗಾಗಿ ಪೌರ ಕಾರ್ಮಿಕರು ಮಾಡುವ ಸ್ವಚ್ಛತಾ ಕೆಲಸಗಳ ಬದಲು ಬೇರೆ ಕೆಲಸಗಳನ್ನು ಮಾಡುತ್ತಾರೆ. ಪರಿಶಿಷ್ಟರು ಈ ವೃತ್ತಿಗೆ ಅಂಟಿಕೊಳ್ಳಬಾರದು. ಆಗ ಸರ್ಕಾರ ಈ ಕೆಲಸಕ್ಕೆ ಸಾವಿರಾರು ರುಪಾಯಿ ಸಂಬಳ ಕೊಡುತ್ತದೆ. ಆಗ ಅವರಿವರೆನ್ನದೆ ಎಲ್ಲಾ ಜಾತಿಯವರೂ ಸ್ವಚ್ಛತಾ ಕೆಲಸಕ್ಕೆ ಓಡಿ ಬರುತ್ತಾರೆ ಎಂದು ತಿಳಿಸಿದರು.

ಕಾರ್ಮಿಕರನ್ನು ಜನಸಂಖ್ಯೆ ಆಧಾರದ ಮೇಲೆ ನೇಮಕ‌ ಮಾಡಬೇಕು. ಆದರೆ, ದಿನಗೂಲಿ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಇವರಾದರೆ ಗುತ್ತಿಗೆದಾರನಿಗೆ ಹೆದರಿ ತಮ್ಮ ಕೆಲಸ ಮಾಡುತ್ತಾರೆ. ಕಾಯಂನವರು ಸೋಮಾರಿತನ ಮಾಡುತ್ತಾರೆ. ಅದಕ್ಕೆ ಹೊರಗುತ್ತಿಗೆಯವರನ್ನು ಕಾಯಂ ಮಾಡುತ್ತಿಲ್ಲ. ಕಾರ್ಮಿಕರು ಸೋಮಾರಿತನ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ಸಂಸ್ಥೆಗಳ ಮಹತ್ವ ಮತ್ತು ಪೌರ ಕಾರ್ಮಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಮುಖ್ಯಮಂತ್ರಿಗಳಿಗೆ ವಿವರಿಸಿ ಹೇಳುವ ಸಚಿವ ಇದುವರೆಗೂ ನಮಗೆ ಸಿಕ್ಕಿಲ್ಲ. ಮುಂದಾದರೂ ಸಿಗಲಿ. ಪೌರ ಕಾರ್ಮಿಕರ ಮೇಲೆ‌ ಇದುವರೆಗೆ ಲೋಕಾಯುಕ್ತ ಅಥವಾ ಆದಾಯ ತೆರಿಗೆ ಇಲಾಖೆ ದಾಳಿಯಾಗಿಲ್ಲ. ಹಾಗಂತ ಅವರೇನು ಲಂಚ ತೆಗೆದುಕೊಳ್ಳುವುದಿಲ್ಲ ಅಂತಲ್ಲ. ಟೀ, ಕಾಫಿಗೆ ಚಿಲ್ಲರೆ ಹಣ ತೆಗೆದುಕೊಳ್ಳುತ್ತಾರೆ. ಅದು ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಪೌರ ಕಾರ್ಮಿಕನ ಮಗನಾಗಿರುವ ನಾನು ಪೌರಾಯುಕ್ತನಾಗಿ ಕೆಲಸ ಮಾಡಿರುವೆ. ಒಮ್ಮೆ ನಾನು ಮತ್ತು ನಮ್ಮ ಅಧಿಕಾರಿಗಳು ಒಂದು ತಿಂಗಳು ಕಾರ್ಮಿಕರು ಮಾಡುವ ಕೆಲಸ ಮಾಡಿ, ಏನೇನು ಕಷ್ಟಗಳಿವೆ ಎಂದು ಅರಿಯುವ ಪ್ರಯೋಗ ನಡೆಸಿದೆವು. ತಿಂಗಳ ಬಳಿಕ ಎಲ್ಲರೂ ಆಸ್ಪತ್ರೆಗೆ ದಾಖಲಾದೆವು. ಕೆಲವರ ಆರೋಗ್ಯ ಸುಧಾರಿಸಲು ತಿಂಗಳು ಬೇಕಾಯಿತು. ಅಂದರೆ, ಕಾರ್ಮಿಕರು ಮಹಾನಗರ, ನಗರ ಹಾಗೂ ಪಟ್ಟಣಗಳ ಸ್ವಚ್ಛತೆಗಾಗಿ ತಮ್ಮ ಜೀವವನ್ನೇ ಮುಡಿಪಿಟ್ಟು ಕಾಪಾಡುತ್ತಿದ್ದಾರೆ. ಕಾರ್ಮಿಕರ ಪೈಕಿ ಶೇ 37.5ರಷ್ಟು ಮಂದಿ ಸೇವಾವಧಿ ನಡುವೆಯೇ ಸಾಯುತ್ತಿದ್ದಾರೆ. ಬಹುತೇಕರು ನಿವೃತ್ತಿವರೆಗೆ ಬದುಕುವುದೇ ಹೆಚ್ಚಾಗಿದೆ. ಕಂಬ ಹತ್ತುವ ಲೈನ್‌ಮ್ಯಾನ್‌ಗಳಿಗೆ ವಿದ್ಯುತ್ ಇಲಾಖೆ 39 ಸಾವಿರ ಸಂಬಳ ಕೊಟ್ಟರೆ, ಸರ್ಕಾರ ನಮ್ಮ ಕಾರ್ಮಿಕರಿಗೆ ಬಿಡಿಗಾಸಿನ ಸಂಬಳ ಕೊಡುತ್ತಿದೆ. ನಮ್ಮ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ ಎಂದು ಜಿ.ಎಸ್. ಮಂಜುನಾಥ್ ಪ್ರಶ್ನಿಸಿದರು.

ಸ್ಥಳೀಯ ಸಂಸ್ಥೆಗಳ ಕತ್ತು ಹಿಸುಕುವ ಸರ್ಕಾರಗಳು:

ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಮಾತನಾಡಿ, ಅರೆ ಸರ್ಕಾರಿ ವ್ಯವಸ್ಥೆಯಾಗಿರುವ ಸ್ಥಳೀಯ ಸಂಸ್ಥೆಗಳು ಬಲಗೊಂಡರೆ ನಮ್ಮ ಶಕ್ತಿ ಕುಂದುತ್ತದೆಂದು ಎಲ್ಲಾ ಪಕ್ಷಗಳ ಸರ್ಕಾರಗಳು ಸ್ಥಳೀಯ ಸಂಸ್ಥೆಗಳ ಕತ್ತು ಹಿಸುಕಿಕೊಂಡು ಬಂದಿವೆ. ಎಲ್ಲದಕ್ಕೂ ಶಾಸಕರೇ ಮೊದಲು ಎಂಬ ನಿಯಮ ಮಾಡಿಕೊಂಡಿದ್ದಾರೆ. ಉತ್ತಮ ಆಡಳಿತಕ್ಕಾಗಿ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ‌ಈ ‌ನಿಟ್ಟಿನಲ್ಲಿ ಎಲ್ಲಾ ಶಾಸಕರು ಚಿಂತನೆ ನಡೆಸಬೇಕು ಎಂದು ತಿಳಿಸಿದರು.

ಪೌರಾಡಳಿತ ಇಲಾಖೆಯು ನಾಗರಿಕರೊಂದಿಗೆ ನಿಕಟ ಒಡನಾಟವಿರುವ ಇಲಾಖೆ. ಆದರೆ, ಇಲಾಖೆಯ ಸಚಿವ ರಹೀಂ ಖಾನ್ ಅವರಿಗೆ ಆ ಬಗ್ಗೆ ತಿಳಿವಳಿಕೆ ಇದ್ದಂತಿಲ್ಲ. ಇದ್ದಿದ್ದರೆ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದರು. ಹೋರಾಟದ ಹಿನ್ನೆಲೆಯ ಜಿ.ಎಸ್. ಮಂಜುನಾಥ್ ಅವರಂತಹವರ ಕೈಗೆ ಇಲಾಖೆ ಸಿಕ್ಕರೆ, ಅದರ ಕಥೆಯೇ ಬೇರಾಗುತ್ತದೆ. ಪೌರ ಕಾರ್ಮಿಕರು ಈ ಸಮಾಜದ ವೈದ್ಯರು. ಓದಿ ವೈದ್ಯರಾದವರು ಹಣ ಪಡೆದು ಚಿಕಿತ್ಸೆ ನೀಡುತ್ತಾರೆ. ಕಾರ್ಮಿಕರು ಹಣ ಪಡೆಯದೆ ಈ ಸಮಾಜವನ್ನು ರೋಗರುಜಿನಗಳಿಂದ ಕಾಪಾಡುತ್ತಾರೆ ಹೇಳಿದರು.

ನಗರಸಭೆಯ ಸ್ವಚ್ಛತಾ ರಾಯಭಾರಿಯಾಗಿ ನೇಮಕವಾಗಿರುವ ಚಿತ್ರಾ ರಾವ್ ಅವರನ್ನು ಸನ್ಮಾನಿಸಲಾಯಿತು.

ಸಂಘದ ರಾಜ್ಯಾಧ್ಯಕ್ಷ ಕೆ. ಪ್ರಭಾಕರ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಬಮೂಲ್ ನಿರ್ದೇಶಕ ಪಿ. ನಾಗರಾಜ್, ಗ್ಯಾರಂಟಿ ಯೋಜನೆಗಳ ಸಮಿತಿ ತಾಲೂಕು ಅಧ್ಯಕ್ಷ ವಿ.ಎಚ್. ರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಎಚ್. ಮಂಜು, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಯೋಜನಾ ನಿರ್ದೇಶಕ ಜಿ.ಡಿ. ಶೇಖರ್, ನಿವೃತ್ತ ಔಷಧ ನಿಯಂತ್ರಣಾಧಿಕಾರಿ ಶ್ರೀನಿವಾಸ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ, ಪಿಸಿಪಿಎಂಎಸ್ ಅಧ್ಯಕ್ಷ ‌ದೊಡ್ಡಿ ಸೂರಿ, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಪೌರಾಯುಕ್ತ ಡಾ. ಜಯಣ್ಣ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್ ,ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ಉಪಸ್ಥಿತರಿದ್ದರು.

ಗಮನ ಸೆಳೆದ ನಾಟಕಗಳು: ಪೌರಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಪೌರ ಕಾರ್ಮಿಕರು ಪ್ರದರ್ಶಿಸಿದ ಶ್ರೀ ಕೃಷ್ಣ ಸಂಧಾನ ಹಾಸ್ಯ ನಾಟಕ, ಕರ್ನಾಟಕ ವೈಭವ ನೃತ್ಯ ರೂಪಕ, ಇತರ ನೃತ್ಯ, ಪೌರಾಯುಕ್ತ ಡಾ. ಜಯಣ್ಣ ನೇತೃತ್ವದಲ್ಲಿ ನೌಕರರು, ಕಾರ್ಮಿಕರು ಹಾಗೂ ನಗರಸಭೆ ಸದಸ್ಯರಿಂದ ಸ್ವಚ್ಛತೆ ಕುರಿತು ಸಮೂಹ ಗಾಯನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮೋಡಿ ಮಾಡಿತು.

------

‘ನನ್ನ ನಾಯಕರೂ ಆದ ಬಿ. ಬಸವಲಿಂಗಪ್ಪ ಮಲ ಹೊರುವ ಪದ್ಧತಿ ನಿಷೇಧಿಸಿದರೂ, ಅಂತಹ ಪ್ರಕರಣಗಳು ಕೆಲವೆಡೆ ವರದಿಯಾಗುತ್ತಿವೆ. ಈ ಪದ್ಧತಿ ಸಂಪೂರ್ಣವಾಗಿ ತೊಲಗಬೇಕು. ಪೌರ ಕಾರ್ಮಿಕರ ಬಗ್ಗೆ ಅನುಕಂಪ ತೋರದೆ ಎಲ್ಲರಂತೆ ಸಮಾನವಾಗಿ ಕಾಣಬೇಕು’.

– ಸಿ.ಎಂ. ಲಿಂಗಪ್ಪ, ಮಾಜಿ ಶಾಸಕರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ತೋರಿಸಿರುವ ಪರಿವರ್ತನೆಯ ಮಾರ್ಗಗಳ ಅರಿವೇ ನಮಗಿಲ್ಲ. ನಾವು ನಿಂತ ನೀರಾಗಿರಲು ಅರಿವಿನ ಕೊರತೆ ಕಾರಣ. ಪರಿವರ್ತನೆಯಾಗಲು ನಾವು, ನಮ್ಮ ಮುಂದಿನ ತಲೆಮಾರು ಜಾಗೃತವಾಗಬೇಕು.’

– ಜನಾರ್ದನ ಜೆನ್ನಿ, ರಂಗಕರ್ಮಿ