ಸಾರಾಂಶ
ರಕ್ತದಲ್ಲಿ ಬರೆದ ಪತ್ರದಲ್ಲಿ 134 ಪೌರಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರ ವಿತರಿಸುವಂತೆ ಹಾಗೂ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಐದನೇ ದಿನಕ್ಕೆ ಮುಂದುವರಿದಿದ್ದು, ಪೌರಕಾರ್ಮಿಕರು ಭಾನುವಾರ ಮುಖ್ಯಮಂತ್ರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ನಡೆಸಿದರು.ರಕ್ತದಲ್ಲಿ ಬರೆದ ಪತ್ರದಲ್ಲಿ 134 ಪೌರಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರ ವಿತರಿಸುವಂತೆ ಹಾಗೂ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ ಆಗ್ರಹಿಸಿದರು. ನೂರಾರು ಪೌರಕಾರ್ಮಿಕರು ತಮ್ಮ ರಕ್ತದಲ್ಲಿ ಪತ್ರ ಬರೆದರು.ಕಳೆದ 8 ವರ್ಷಗಳ ಹಿಂದೆ ಸರ್ಕಾರ ಹೊರಡಿಸಿದ ಆದೇಶವನ್ನು ಉಲ್ಲಂಘಿಸಿ 200 ಅರ್ಹ ಪೌರಕಾರ್ಮಿಕರ ಸಾವಿಗೆ ಪಾಲಿಕೆ ಆಯುಕ್ತರು ನೇರ ಹೊಣೆಯಾಗಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಅರ್ಹ ಪೌರಕಾರ್ಮಿಕರು ನಿವೃತ್ತಿ ಹೊಂದಿದ್ದಾರೆ. ಯಾವುದೇ ಪರಿಹಾರವಿಲ್ಲದೆ 300 ಕುಟುಂಬಗಳು ಬೀದಿ ಪಾಲಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೂಡಲೇ ಸರ್ಕಾರ ಪೌರ ಕಾರ್ಮಿಕರ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ತಪ್ಪಿದಲ್ಲಿ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಗಾಳೆಪ್ಪಾ ದ್ವಾಸಲಕೇರಿ, ತಾಯಪ್ಪ ಕಣೆಕಲ್, ಕನಕಪ್ಪ ಕೋಟಬಾಗಿ, ದತ್ತಪ್ಪ ಆಪುಸಪೇಟ್, ಸುಮಿತ್ರಾ ಹೊಸಳ್ಳಿ, ಶಾಂತವ್ವ ಚುರಮುರಿ, ಅನ್ನಪೂರ್ಣ ಜಂಗ್ಲಿ, ಮಂಜುನಾಥ್ ಶಿಕ್ಕಲಗಾರ, ಯಮನವ್ವ ಬೆನಸಮಟ್ಟಿ, ಪ್ರೇಮಾ ಕಣೆಕಲ್, ಲಕ್ಷ್ಮೀಬಾಯಿ ಶಟಗೇರಿ ಸೇರಿದಂತೆ ಹಲವರಿದ್ದರು.