ಪೌರ ಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಿ: ಗುಡದರಿ

| Published : Sep 24 2024, 01:48 AM IST

ಸಾರಾಂಶ

ಪ್ರತಿ ದಿನ ಮಳೆ ಚಳಿ ಲೆಕ್ಕಿಸದೆ ಪೌರ ಕಾರ್ಮಿಕರು ಪಟ್ಟಣವನ್ನು ಸ್ವಚ್ಛವಾಗಿ ಇಟ್ಟಿದ್ದರಿಂದ ಇಂದು ನಾವು ಆರೋಗ್ಯವಾಗಿರಲು ಸಾಧ್ಯವಾಗಿದೆ

ನರಗುಂದ: ಪಟ್ಟಣವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ಆರೋಗ್ಯ ಮುಖ್ಯವಾಗಿದೆ. ಯಾವುದೇ ದುಶ್ಚಟಕ್ಕೆ ಬಲಿಯಾಗದೇ ನಿಮ್ಮ ಆರೋಗ್ಯ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಬೇಕು. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕಡೆ ಗಮನ ಹರಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದರಿ ಹೇಳಿದರು.

ಅವರು ಪಟ್ಟಣದ ಪುರಸಭೆ ಕಲಾಭವನದಲ್ಲಿ ಸೋಮವಾರ ಪೌರ ಕಾರ್ಮಿಕರ ಸಂಘದಿಂದ ಆಚರಿಸಲಾದ 13ನೇ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರಿಗೆ ವಿಶೇಷ ವೇತನ ಭತ್ಯೆ ಚೆಕ್‌ ವಿತರಿಸಿ ಮಾತನಾಡಿ, ಪ್ರತಿ ದಿನ ಮಳೆ ಚಳಿ ಲೆಕ್ಕಿಸದೆ ಪೌರ ಕಾರ್ಮಿಕರು ಪಟ್ಟಣವನ್ನು ಸ್ವಚ್ಛವಾಗಿ ಇಟ್ಟಿದ್ದರಿಂದ ಇಂದು ನಾವು ಆರೋಗ್ಯವಾಗಿರಲು ಸಾಧ್ಯವಾಗಿದೆ ಎಂದರು.

ಸಮುದಾಯ ಸಂಘಟನಾಧಿಕಾರಿ ವಿಜಯಲಕ್ಷ್ಮೀ ಹಿರೇಮಠ ಮಾತನಾಡಿ, ಪೌರಕಾರ್ಮಿಕರ ಸೇವೆ ಸ್ಥಗಿತಗೊಂಡರೆ ಪಟ್ಟಣದ ಪ್ರದೇಶಗಳು ರೋಗ ರುಜಿನುಗಳಿಂದ ತುಂಬಿಕೊಳ್ಳುತ್ತವೆ. ಸಾರ್ವಜನಿಕರ ಆರೋಗ್ಯದ ಹಿಂದೆ ಪೌರಕಾರ್ಮಿಕರ ಸೇವೆ ಅಡಗಿದೆ. ದುಶ್ಚಟ ಕಲಿಯದೇ ಉತ್ತಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು.

ಪ್ರೊ. ಆರ್.ಬಿ. ಚಿನಿವಾಲರ ಮಾತನಾಡಿ, ರಾಜ್ಯದಲ್ಲಿಯೇ ನರಗುಂದ ಪುರಸಭೆ ಸ್ವಚ್ಛತೆಯಲ್ಲಿ 8ನೇ ಸ್ಥಾನದ ಪ್ರಶಸ್ತಿ ಪಡೆದಿದೆ.ಇದಕ್ಕೆಲ್ಲ ಪೌರಕಾರ್ಮಿಕರ ಶ್ರಮದಾನವೇ ಮುಖ್ಯ ಕಾರಣವಾಗಿದೆ. ಸ್ವಚ್ಛತಾ ಕಾರ್ಯವೇ ನಿಜವಾದ ದೇಶ ಸೇವೆ ಎಂದು ಹೇಳಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ, ಪೌರ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಚಲವಾದಿ, ಉಪಾಧ್ಯಕ್ಷ ರಾಚಪ್ಪ ಕೆರೂರ, ಪುರಸಭೆ ಸದಸ್ಯರಾದ ಭಾವನಾ ಪಾಟೀಲ, ರಾಚನಗೌಡ ಪಾಟೀಲ, ನೀಲವ್ವ ವಡ್ಡಿಗೇರಿ, ದಿವಾನಸಾಬ್‌ ಕಿಲೇದಾರ, ಫಕೀರಪ್ಪ ಸವದತ್ತಿ, ಆರ್.ಎಚ್. ತಹಸೀಲ್ದಾರ್‌, ಹಸನ ಗೋಟೂರ, ವಿಠ್ಠಲ ಹಡಗಲಿ ಹಾಗೂ ಪೌರ ಕಾರ್ಮಿಕರು ಇದ್ದರು.