4ನೇ ದಿನವೂ ಮುಂದುವರಿದ ಪೌರಕಾರ್ಮಿಕರ ಧರಣಿ

| Published : Jul 22 2024, 01:18 AM IST

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರು ಇಲ್ಲಿನ ಪಾಲಿಕೆ ಎದುರು ನಡೆಸುತ್ತಿರುವ ಧರಣಿ ಭಾನುವಾರ 4ನೇ ದಿನವೂ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರು ಇಲ್ಲಿನ ಪಾಲಿಕೆ ಎದುರು ನಡೆಸುತ್ತಿರುವ ಧರಣಿ ಭಾನುವಾರ 4ನೇ ದಿನವೂ ಮುಂದುವರಿಯಿತು. ಸುರಿಯುತ್ತಿದ್ದ ಮಳೆಯಲ್ಲಿ ನೂರಾರು ಪೌರಕಾರ್ಮಿಕರು ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡರೆ ಇನ್ನೂ ಕೆಲವರು ಬಾಯಿ ಬಡಿದುಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ, ಪಪಂಗಳಲ್ಲಿ ಮೊದಲನೇ ಹಂತದ ಹಾಗೂ 2ನೇ ಹಂತದ ಪೌರಕಾರ್ಮಿಕರ ನೇರ ನೇಮಕಾತಿ ಪೂರ್ಣಗೊಂಡು ಆದೇಶ ಪತ್ರಗಳನ್ನು ನೀಡಿದ್ದಾರೆ. ಆದರೆ, ಸರ್ಕಾರ ಆದೇಶ ಹೊರಡಿಸಿ 8 ವರ್ಷ ಕಳೆದರೂ ಪಾಲಿಕೆಯಲ್ಲಿ 134 ಹಾಗೂ 252 ಪೌರಕಾರ್ಮಿಕರ ನೇರ ನೇಮಕಾತಿಯಾಗಿಲ್ಲ. ಅಲ್ಲದೇ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿ ಸರ್ಕಾಕ್ಕೆ ಪ್ರಸ್ತಾವನೆ ಸಲ್ಲಿಸಿ 9 ತಿಂಗಳು ಕಳೆದರೂ ಈ ವರೆಗೂ ಅನುಮೋದನೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಆಯುಕ್ತರನ್ನು ವರ್ಗಾವಣೆ ಮಾಡಿ ಪೌರಕಾರ್ಮಿಕರ ಹಕ್ಕೋತ್ತಾಯಗಳನ್ನು ಈಡೇರಿಸಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಸ್ವಚ್ಛತಾ ಕೆಲಸವನ್ನು ಸ್ಥಗಿತಗೊಳಿಸಿ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ನಿಂಗಪ್ಪ ರಾಮ್ಮಯ್ಯನವರ, ಕನಕಪ್ಪ ಕೊಟಬಾಗಿ, ಅನಿತಾ ಈನಗೊಂಡ, ಲಕ್ಷ್ಮೀ ವಾಲಿ, ಪರಶುರಾಮ ಕಡಕೋಳ, ನಿಂಗಮ್ಮ ಕಂದಳ್ಳಿ, ನೀಲವ್ವ ಬೆಳವಟಗಿ, ಪಾರವ್ವ ಹೊಸಮನಿ, ಕಿರಣಕುಮಾರ ಸೋಮರಡ್ಡಿ, ನಾಗರಾಜ ದೊಡ್ಡಮನಿ, ತಾಯಪ್ಪ ಕಣೆಕಲ್ ಸೇರಿದಂತೆ ನೂರಾರು ಪೌರಕಾರ್ಮಿಕರು ಪಾಲ್ಗೊಂಡಿದ್ದರು.

21ಎಚ್‌ಯುಬಿ34, 35

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರು ಭಾನುವಾರ ಹು-ಧಾ ಮಹಾನಗರ ಪಾಲಿಕೆ ಎದುರು ಬಾಯಿಬಡಿದುಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.