ಕನ್ನಡಪ್ರಭ ವಾರ್ತೆ ನಾಪೋಕ್ಲು
ರಾಷ್ಟ್ರೀಯ ಸ್ವಯಂಸೇವಕ ಸಂಘ ಇರುವುದೇ ಈ ದೇಶಕ್ಕೋಸ್ಕರ. ಈ ದೇಶದ ಹಿಂದೂ ಸಮಾಜಕ್ಕೋಸ್ಕರ. ದೇಶಾದ್ಯಂತ ಹಿಂದುಗಳು ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ, ನಗರಗಳಲ್ಲಿ ಈ ರೀತಿಯ ಹಿಂದೂ ಸಂಘಟನಾ ಮುಖಾಂತರ ಆ ಭಾಗದ ಹಿಂದುಗಳನ್ನು ಸೇರಿಸಿಕೊಂಡು ಹಿಂದೂ ಧರ್ಮ ನಮ್ಮ ಸಂಸ್ಕೃತಿ, ಸಂಪ್ರದಾಯ, ನಮ್ಮ ನಾಗರಿಕತೆ, ಪರಂಪರೆಯನ್ನು ಸ್ಮರಣೆ ಮಾಡಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿದರು.ಸಮೀಪದ ಚೆಯ್ಯಂಡಾಣೆ ಹಿಂದೂ ಸಂಗಮ ಆಯೋಜನಾ ಸಮಿತಿ ಯ ಮಂಡಲದ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು.
ಜೀವನ ಪದ್ಧತಿ: ಯುವ ಪೀಳಿಗೆಗೆ ನಮ್ಮ ಚಿಂತನೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದಕ್ಕಾಗಿ ಈ ರೀತಿಯಾಗಿ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ 3000ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ರೀತಿಯ ಕಾರ್ಯಕ್ರಮ ನಡೆದಿದೆ. ಹಿಂದುತ್ವ ಎನ್ನುವುದು ಜೀವನ ಪದ್ಧತಿ, ಸಹಬಾಳ್ವೆಯಿಂದ ಯಾವುದೇ ಧರ್ಮಭೇದವಿಲ್ಲದೆ ಸೌಹಾರ್ದತೆಯಿಂದ ಕೂಡಿರಬೇಕು. ನಾವು ಜಗತ್ತಿನಲ್ಲಿ ಶಾಂತಿ ಸಹ ಬಾಳ್ವೆಯ ಸಂದೇಶವನ್ನು ಕೊಡುವವರು ಜಗತ್ತಿಗೆ ಬೆಳಕು ಕೊಟ್ಟವರು ನಾವು ಅದಕ್ಕೆ ಜಗತ್ತು ಭಾರತವನ್ನು ಒಪ್ಪಿಕೊಳ್ಳುತ್ತಿದೆ ಎಂದರು.ಚೆಯ್ಯಂಡಾಣೆ ಹಿಂದೂ ಸಂಗಮ ಮಂಡಲ ಅಧ್ಯಕ್ಷ ಪೋಕ್ಕೊಳಂಡ್ರ ಧನೋಜ್ ಮಾತನಾಡಿ, ಮುಂದಿನ ಯುವ ಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿಯ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ಈ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಗ್ಗಟ್ಟಿನ ಸಂದೇಶ ಸಾರಿದ್ದಾರೆ ಎಂದರು .ಪ್ರತಿಭಟಿಸದಿದ್ದರೆ ಪ್ರಯೋಜನವಿಲ್ಲ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕ್ಯಾಪ್ಟನ್ ಬಿದ್ದಂಡ ನಾಣಿ ನಾಣಯ್ಯ ವಹಿಸಿ ಮಾತನಾಡಿ, ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ನಾವು ಪ್ರತಿಭಟಿಸಬೇಕು. ಪ್ರತಿಭಟಿಸದಿದ್ದರೆ ಪ್ರಯೋಜನವಿಲ್ಲ. ಯಾರಿಗೆ ಕಣ್ಣಿಲ್ಲ ಅವರಿಗೆ ಕನ್ನಡಿ ಕೊಟ್ಟು ಪ್ರಯೋಜನವಿಲ್ಲ. ನೂರು ವರ್ಷದಿಂದ ನಮ್ಮ ದೇಶ ನಮ್ಮ ಮಣ್ಣಿನ ರಕ್ಷಣೆಗಾಗಿ ಸ್ವಯಂಸೇವಕ ಸಂಘ ಸೇವೆ ಸಲ್ಲಿಸುತ್ತಾ ಬಂದಿದೆ. ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಿ ಸಾಮಾಜಿಕ ಸಾಮರ್ಥ್ಯಕ್ಕೆ ಒತ್ತು ನೀಡಬೇಕಾಗಿದೆ. ಗೋಮಾತೆಯ ರಕ್ಷಣೆಯನ್ನು ಮಾಡಬೇಕಿದೆ ಎಂದರು. ಸ್ಥಳೀಯ ಸಮಾಜ ಸೇವಕಿ ಹಾಗೂ ವಕೀಲೆ ಬಾಚಬಂಡ ಅನುಪಮಾ ಕಿಶೋರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೆ ಜಿ ಬೋಪಯ್ಯ, ತಳೂರು ಕಿಶೋರ್ ಕುಮಾರ್ , ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪುದಿಯೋಕ್ಕಡ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ
ಕಾವೇರಮ್ಮ, ಬಿದ್ದಂಡ ರಾಜೇಶ್ ಅಚ್ಚಯ್ಯ, ಚೇನಂಡ ಸಂಪ, ಐತಿಚಂಡ ಭೀಮಯ್ಯ, ಬಿಳಿಯಂಡ್ರ ಪ್ರಸಾದ್, ಹಿಂದೂ ಸಂಗಮ ಮಂಡಲದ ಪದಾಧಿಕಾರಿಗಳು ಇದ್ದರು.ಇದಕ್ಕೂ ಮುನ್ನ ಅದ್ದೂರಿ ಶೋಭಾ ಯಾತ್ರೆ ನಡೆಯಿತು. ಚೆಯ್ಯಂಡಾಣೆ-ಚೇಲಾವರರ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಶೋಭಾ ಯಾತ್ರೆಯ ಮೆರವಣಿಗೆಗೆ ಹಿಂದೂ ಸಂಘದ ಗಣ್ಯರು ಚಾಲನೆ ನೀಡಿದರು, ಮೆರವಣಿಗೆ ಲಕ್ಷ್ಮಿ ಮಹಿಳಾ ಸಮಾಜ ಸಮೀಪ ಸಮಾಪನಗೊಂಡಿತು. ವಿವಿಧ ವೇಷಧಾರಿ ಮಕ್ಕಳು ಭಾರತಾಂಬೆ ಭಾವಚಿತ್ರ ಒಳಗೊಂಡ ವಾಹನ , ಕಲಶ ಹೊತ್ತ ಮಹಿಳೆಯರು , ಕೊಡಗಿನ ವಾಲಗ ದೇಶಭಕ್ತಿ ಸಾರುವ ಪೋಸ್ಟರ್ಗಳು ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಶೋಭ ಯಾತ್ರೆಯ ಮೆರುಗನ್ನು ಹೆಚ್ಚಿಸಿದರು. ಅಧಿಕ ಸಂಖ್ಯೆ ಹಿಂದೂ ಬಾಂಧವರು ಕೇಸರಿ ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಉದ್ದಕ್ಕೂ ಮಕ್ಕಳಿಂದ ಸಾಂಪ್ರದಾಯಕ ಭಜನೆ ನೃತ್ಯ ಪ್ರದರ್ಶನ ನಡೆಯಿತು.