ಸಂಘಟಿತರಾದರೆ ಮಾತ್ರ ಹಕ್ಕು ಪಡೆಯಲು ಸಾಧ್ಯ

| Published : Feb 18 2025, 12:31 AM IST

ಸಾರಾಂಶ

ಪುರುಷರೊಂದಿಗೆ ದಲಿತ ಮಹಿಳೆಯರು ತಮ್ಮ ಮನೆಗಳಿಂದ ಹೊರಬಂದು ತಮ್ಮ ಮಕ್ಕಳ ಹಕ್ಕುಗಳಿಗಾಗಿ ಹೋರಾಡಬೇಕು. ಇಂದಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆ, ಜಾತಿ ತಾರತಮ್ಯಗಳು ಕಣ್ಣಿಗೆ ರಾಚುವಂತಿದ್ದು, ದಲಿತರ ಮೇಲಿನ ದೌರ್ಜನ್ಯಗಳು ಮಿತಿಮೀರಿವೆ. ಎಸ್ಸಿ, ಟಿಎಸ್ಪಿ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸರ್ಕಾರ ಬಳಸಿಕೊಳ್ಳುತ್ತಿದೆ,

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಸಮ ಸಮಾಜದಲ್ಲಿ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಬೇಕಾದರೆ ಡಾ.ಬಿ.ಆರ್. ಅಂಬೇಡ್ಕರ್‌ ಹಾಕಿಕೊಟ್ಟಿರುವ ಹೋರಾಟದ ಮಾರ್ಗದಲ್ಲಿ ನಂಬಿಕೆಯಿಟ್ಟು ಮುನ್ನಡೆದರೆ ಮಾತ್ರ ಸಾಧ್ಯ ಎಂದು ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನ್ ರಾಮ್ ಜನಪರ ಹೋರಾಟಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಿ. ನಂಜುಂಡಪ್ಪ ತಿಳಿಸಿದರು. ಜಿಲ್ಲೆಯ ಮಂಚೇನಹಳ್ಳಿ ತಾಲೂಕು ಬೈಲ್‌ಬಸಪ್ಪ ಅಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದಲಿತರಪರ ಸಂಘಟನೆಗಳು ಹತ್ತು ಹಲವಾಗಿದ್ದರೂ ನಮ್ಮಗಳ ಮಾರ್ಗ ಒಂದೇ, ಅದು ಬಾಬಾ ಸಾಹೇಬರು ಹಾಕಿಕೊಟ್ಟ ಮಾರ್ಗವಾಗಿದೆ. ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ಎಂಬುದು ಕಾರ್ಯರೂಪಕ್ಕೆ ಬರುವುದು ಕನಸಿನ ಮಾತಾಗಿದೆ ಎಂದರು.

ದಮನಿತರ ಹಕ್ಕು ದಮನ

ಸ್ವಾತಂತ್ರ್ಯ ಬಂದು 78ವರ್ಷಗಳಾದರೂ ದಮನಿತರ ಹಕ್ಕುಗಳು ಅರಣ್ಯರೋದನವಾಗಿವೆ. ಇಂದಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆ, ಜಾತಿ ತಾರತಮ್ಯಗಳು ಕಣ್ಣಿಗೆ ರಾಚುವಂತಿದ್ದು, ದಲಿತರ ಮೇಲಿನ ದೌರ್ಜನ್ಯಗಳು ಮಿತಿಮೀರಿದೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರಗಳು ಎಗ್ಗಿಲ್ಲದೆ ನಿರಂತರ ನಡೆಯುತ್ತಲೇ ಇವೆ. ಆಳುವ ಸರ್ಕಾರಗಳು ದಲಿತರ ಬದುಕನ್ನು ಹಸನಾಗಿಸುವ ಬದಲು, ಕಾನೂನಾತ್ಮಕವಾಗಿ ಅವರಿಗೆ ಮೀಸಲಿಟ್ಟಿ ಎಸ್ಸಿಪಿ,ಟಿಎಸ್ಪಿ ಹಣವನ್ನು ದುರ್ಬಳಕೆ ಮಾಡಿಕೊಂಡು, ಅವರ ಬದುಕಿನ ಬಗ್ಗೆ ಚೆಲ್ಲಾಟವಾಡುತ್ತಿವೆ ಎಂದರು.

ಎಲ್ಲ ದಮನಿತ ವರ್ಗಗಳಿಗೆ ಶಿಕ್ಷಣ, ಆಂದೋಲನ ಮತ್ತು ಸಂಘಟಿತರಾಗಿ ಎಂಬ ಅಂಬೇಡ್ಕರ್ ರವರ ಸ್ಪಷ್ಟ ಕರೆ ಈಗ ಇನ್ನಷ್ಟು ಪ್ರಸ್ತುತವಾಗಿದೆ. ಪುರುಷರೊಂದಿಗೆ ದಲಿತ ಮಹಿಳೆಯರು ತಮ್ಮ ಮನೆಗಳಿಂದ ಹೊರಬಂದು ತಮ್ಮ ಮಕ್ಕಳ ಹಕ್ಕುಗಳಿಗಾಗಿ ಹೋರಾಡಬೇಕು ಎಂದರು.

ಸಮುದಾಯದ ಹಿತಕ್ಕೆ ಶ್ರಮಿಸಿ

ನಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಸಂಘಟನೆಯಲ್ಲಿ ನಂಬಿಕೆಯಿಟ್ಟು ಒಗ್ಗೂಡುವುದು ಅಗತ್ಯ. ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನ್ ರಾಮ್ ಜನಪರ ಹೋರಾಟಗಳ ಒಕ್ಕೂಟದ ನೂತನ ಪದಾಧಿಕಾರಿಗಳು ಸ್ವಾರ್ಥವನ್ನು ಬಿಟ್ಟು ಸಮುದಾಯದ ಹಿತಾಸಕ್ತಿಗೆ ಶ್ರಮಿಸಬೇಕು ಎಂದರು.ತಾ. ಘಟಕದ ಪದಾಧಿಕಾರಿಗಳು

ಮಂಚೇನಹಳ್ಳಿ ತಾಲೂಕು ಅಧ್ಯಕ್ಷರಾಗಿ ಬಾಲಪ್ಪ, ಉಪಾಧ್ಯಕ್ಷರಾಗಿ ಗಂಗಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಎಂ.ಎನ್, ಸಹ ಕಾರ್ಯದರ್ಶಿಯಾಗಿ ಜಯಸಿಂಹ, ಖಜಾಂಚಿಯಾಗಿ ಕೆ. ಎಂ.ರವಿ ಕುಮಾರ್, ಸಹ ಖಜಾಂಚಿಯಾಗಿ ನರಸಿಂಹಪ್ಪ, ಸಂಚಾಲಕರಾಗಿ ಲಕ್ಷ್ಮೀ ನರಸಪ್ಪ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸುಮಿತ್ರಾ, ಉಪಾಧ್ಯಕ್ಷರಾಗಿ ಗಾಯತ್ರಿ, ಚೈತ್ರ, ನಿರ್ದೇಶಕರಾಗಿ ನಾರಾಯಣಪ್ಪ, ಬಾಲಕೃಷ್ಣ ಅವರನ್ನು ನೇಮಿಸಲಾಗೆದು.