ಗದಗ: ನಾಡಿನ ಪುಣ್ಯದ ಫಲವಾಗಿ ಕನಕದಾಸರು ಜನಿಸಿ ಬಂದಿದ್ದಾರೆ. ನೂರಾರು ದಾರ್ಶನಿಕರಲ್ಲಿ ಕನದಾಸರು ಎದ್ದು ಕಾಣುತ್ತಾರೆ ಎಂದು ಕನಕಶ್ರೀ ಪ್ರಶಸ್ತಿ ಪುರಸ್ಕೃತ, ಸಾಹಿತಿ ಡಾ. ಲಿಂಗದಳ್ಳಿ ಹಾಲಪ್ಪ ಬಣ್ಣಿಸಿದರು.
ನಗರದ ಕನಕಭವನದಲ್ಲಿ ಬೆಂಗಳೂರಿನ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಆಯೋಜಿಸಿದ್ದ ಶ್ರೀಕನಕ ಸಾಹಿತ್ಯ ಸಂಭ್ರಮದ 100ನೇ ಉಪನ್ಯಾಸದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನಕದಾಸರ ಸಾಹಿತ್ಯ ಕುರಿತು ಅವರ 500ನೇ ಜಯಂತಿವರೆಗೂ ಬಗ್ಗೆ ಅಷ್ಟೊಂದು ಪ್ರಚಾರವಿರಲಿಲ್ಲ. ಕನಕದಾಸದ ಬಗ್ಗೆ ಹೆಚ್ಚಿನ ಓದನ್ನು ಪಠ್ಯದಲ್ಲಿ ಇಟ್ಟಿರಲಿಲ್ಲ. 500ನೇ ಜಯಂತಿ ನಂತರ ಕನಕದಾಸರ ಕೀರ್ತನೆಗಳು, ಮುಂಡಿಗೆಗಳು ಬೆಳಕಿಗೆ ಬಂದವು ಎಂದರು.
ಪ್ರೊ. ಎಫ್.ಟಿ. ಹಳ್ಳಿಕೇರಿ ಮಾತನಾಡಿ, ಸಂಘಟನೆ ಶ್ರದ್ಧೆ, ಶ್ರಮದಿಂದ 100ನೇ ಮಾಲಿಕೆ ಸಾಧ್ಯವಾಗಿದೆ. ಜಿಲ್ಲೆ ಹಾಲುಮತ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. 1920ರಲ್ಲಿ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರಿನಲ್ಲಿ ಟ್ರೇನಿಂಗ್ ಸೆಂಟರ್ ತೆರೆದಿದ್ದರು. ಹಾಲುಮತ ಚರಿತ್ರೆಯನ್ನು ಬೆಳಕಿಗೆ ತಂದ ವಿ.ಆರ್. ಹನುಮಂತಯ್ಯ ಅವರನ್ನು ಹಾಲುಮತ ಪಿತಾಮಹ ಎಂದು ಕರೆಯಬಹುದು ಎಂದರು.ಪ್ರೊ. ಸುಧಾ ಕೌಜಗೇರಿ ಮಾತನಾಡಿ, ಕನಕದಾಸರು ಸಾಹಿತ್ಯ ಕ್ಷೇತ್ರದಲ್ಲಿ ನಕ್ಷತ್ರವಾಗಿ ಬೆಳೆದವರು. 12ನೇ ಶತಮಾನದಲ್ಲಿ ಶರಣ ಸಾಹಿತ್ಯ ಬಂತು. ಕನಕದಾಸರು ಏಕಾಂಗಿಯಾಗಿ ಬೆಳೆದವರು. ಸಂತ, ಭಕ್ತ, ಕವಿ ಅಲ್ಲದೆ ಅವರೊಬ್ಬ ಮಹಾನ್ ಹೋರಾಟಗಾರರಾಗಿದ್ದಾರೆ. ಅವರ ಮುಂಡಿಗೆಗಳನ್ನು ಇವರೆಗೂ ಉತ್ತರಿಸಲು ಸಾಧ್ಯವಾಗಿಲ್ಲ ಎಂದರು.ರುದ್ರಣ್ಣ ಗುಳಗುಳಿ, ಸಮಾಜದ ಚಿಂತಕ ಮಂಜುನಾಥ ಹೊನ್ನನವರ, ಡಾ. ಹನುಮಗೌಡ ಪಾಟೀಲ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಕೊಪ್ಪದ ಮಾತನಾಡಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ವಾಸಣ್ಣ ಕುರಡಗಿ, ರವಿ ದಂಡಿನ, ಪ್ರಕಾಶ ಕರಿ, ರಾಜಶೇಖರ ಕಲ್ಲೂರ, ಡಿಡಿಪಿಐ ಆರ್.ಎಸ್. ಬುರಡಿ, ರಾಮಕೃಷ್ಣ ರೊಳ್ಳಿ, ನಿಂಗಪ್ಪ ಸವಣೂರ, ಮಹಾಂತೇಶ ನಿಟ್ಟಾಲಿ ಸೇರಿದಂತೆ ಮುಂತಾದವರು ಇದ್ದರು.
ನಂತರ ಶ್ರದ್ಧಾ ಕಬಾಡಿ, ಇಷಾ ಗಣಾಚಾರಿ ಅವರಿಂದ ಭರತನಾಟ್ಯ ಜರುಗಿತು. ಪಪೂ ಕಾಲೇಜು ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕನಕದಾಸರ ಸಾಹಿತ್ಯ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ 76ರಿಂದ 100ನೇ ಆನ್‌ಲೈನ್ ಗೂಗಲ್ ಮೀಟ್‌ನಲ್ಲಿ ಕನಕದಾಸರ ಸಾಹಿತ್ಯದ ಉಪನ್ಯಾಸ ನೀಡಿದವರನ್ನು ಸನ್ಮಾನಿಸಲಾಯಿತು.
ಸಮಿತಿಯ ರಾಜ್ಯ ಸಮನ್ವಯಾಧಿಕಾರಿ ಕೃಷ್ಣ ಖಾನಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಮಾರುತಿ ಮಡ್ಡಿ ಸ್ವಾಗತಿಸಿದರು. ಆರ್.ಜಿ. ಕೊರ್ಲಹಳ್ಳಿ ನಿರೂಪಿಸಿದರು. ಬಸವರಾಜ ಕೆರಿ ವಂದಿಸಿದರು.