ಮೂಲಭೂತ ಸೌಕರ್ಯಗಳಿಗಾಗಿ ಹಕ್ಕೊತ್ತಾಯ ಮಂಡಿಸಿ

| Published : Jul 05 2024, 12:48 AM IST

ಸಾರಾಂಶ

ಕ್ಯಾದಿಗೆರೆ ಗ್ರಾಮದಲ್ಲಿ ನಡೆದ ಸರ್ಕಾರಿ ವಿಜ್ಞಾನ ಕಾಲೇಜಿನ ಎನ್‍ಎಸ್‍ಎಸ್ ವಾರ್ಷಿಕ ಶಿಬಿರದ ಸಭಾ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಉದ್ಘಾಟಿಸಿದರು.

ಎನ್‍ಎಸ್‍ಎಸ್ ವಾರ್ಷಿಕ ಶಿಬಿರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಅಭಿಮತ

ಕನ್ನಡಪ್ರಭ ವಾರ್ತೆ ಚಿತ್ರದುರ್ಗಗ್ರಾಮದ ಮೂಲಭೂತ ಸೌಕರ್ಯಗಳಿಗಾಗಿ ಹಕ್ಕೊತ್ತಾಯ ಮಾಡಬೇಕು. ನೀರು, ರಸ್ತೆ, ಆರೋಗ್ಯ ಸೌಲಭ್ಯ, ಮುಂತಾದ ಸಮಸ್ಯೆಗಳ ಎದುರಾದಾಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯ ಪಡೆದು, ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ ಹೇಳಿದರು.

ಸರ್ಕಾರಿ ವಿಜ್ಞಾನ ಕಾಲೇಜು ವತಿಯಿಂದ ಕ್ಯಾದಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸುವುದು ಶಿಬಿರದ ಉದ್ದೇಶವಾಗಿದ್ದು, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ, ಡೆಂಘೀ, ಮಲೇರಿಯ ಇನ್ನಿತರ ರೋಗಗಳಿಂದ ಜನರನ್ನ ರಕ್ಷಿಸಿ, ಮುಂಜಾಗ್ರತೆಯ ಕ್ರಮ ವಹಿಸುವುದನ್ನ ಜನರಿಗೆ ತಿಳಿಸಿ ಕೊಡಬೇಕು ಎಂದರು.

ವಿದ್ಯಾರ್ಥಿಗಳು ಸಹ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಾಗ ಸಮಸ್ಯೆಗಳನ್ನು ನಿವಾರಿಸಲು ಸೇವಾ ಪ್ರಾಧಿಕಾರವೂ ಸಹ ಪ್ರಯತ್ನಿಸುವುದು ಎಂದರು.

ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಪಿಡಿಒಗಳು ಗ್ರಾಮೀಣ ಜನರ ಕಷ್ಟಗಳನ್ನು ನಿವಾರಣೆ ಮಾಡಲು ಪ್ರಯತ್ನಿಸಬೇಕು ಎಂದರು.

ಕ್ಯಾದಿಗೆರೆ ಗ್ರಾಮದ ಶಿಕ್ಷಕ ವೈ.ಜಗದೀಶ್ ಮಾತನಾಡಿ, ಎನ್‍ಎಸ್‍ಎಸ್‌ನ ಮುಖ್ಯ ಉದ್ದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು, ಸೇವಾ ಮನೋಭಾವನೆಯಿಂದ ಉತ್ತಮ ಸಮಾಜ ಕಟ್ಟಲು ಪ್ರಯತ್ನಿಸಬೇಕು ಎಂದರು.

ಮಾಜಿ ಸೈನಿಕ ನಾಗರಾಜ್ ಮಾತನಾಡಿ, ಗ್ರಾಮಗಳಲ್ಲಿ ಸೌಹಾರ್ದತೆಯ ಜೀವನ ನಡೆಸುವ ಮೂಲಕ ಮನಸ್ತಾಪಗಳನ್ನು ಕಡಿಮೆ ಮಾಡಿಕೊಂಡು ಒಬ್ಬರಿಗೊಬ್ಬರು ಸಹಿಷ್ಣತೆಯಿಂದ ಉತ್ತಮ ಸಮಾಜ ನಿರ್ಮಿಸಿಕೊಳ್ಳಬೇಕು ಎಂದರು.

ತಾಪಂ ಮಾಜಿ ಸದಸ್ಯೆ ನಿಂಗಮ್ಮ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಜನರ ಜೊತೆ ಬದುಕನ್ನು ಸಾಗಿಸಿ, ಅವರ ಕಷ್ಟ ಸುಖಗಳನ್ನು ಹಂಚಿಕೊಂಡು ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವೇಳೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ಕೆಎಸ್ ಸ್ವಾಮಿ, ಪೊಲೀಸ್ ನಿರೀಕ್ಷಕ ವೈ ಮುತ್ತುರಾಜು, ಸಹಾಯಕ ಪೋಲೀಸ್ ಉಪನಿರೀಕ್ಷಕ ಹೊರಕೇರಪ್ಪ, ಡಾ.ಸತೀಶ್ ಗೌಡ, ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ರಮೇಶ್ ಐಯ್ಯನಹಳ್ಳಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಪ್ರೊ.ಲಾಲ್ ಸಿಂಗ್ ನಾಯಕ್, ಡಾ.ಮಹಮದ್ ಜಾಫರ್ ಇಕ್ಬಾಲ್ ನವಲಗುಂದ ಹಾಜರಿದ್ದರು.

ಈ ಸಂದರ್ಭದಲ್ಲಿ ಡಾಕ್ಟರ್ ಸಂದೀಪ್ ಐತಾಳ್ ಮತ್ತು ತಂಡದವರಿಂದ ಗ್ರಾಮಸ್ಥರಿಗೆ ಉಚಿತ ನೇತ್ರ ತಪಾಸಣೆ ಮತ್ತು ಸಲಹಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.