ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಹೊಸ್ತಿಲಲ್ಲಿಯೇ ಜೆಡಿಎಸ್ ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು ಮತ್ತು ಬೆಂಬಲಿಗರ ನಡುವೆ ಫ್ಲೆಕ್ಸ್ ಹರಿದ ವಿಚಾರಕ್ಕೆ ಗಲಾಟೆ ನಡೆದಿರುವ ಘಟನೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ಜರುಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಹೊಸ್ತಿಲಲ್ಲಿಯೇ ಜೆಡಿಎಸ್ ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು ಮತ್ತು ಬೆಂಬಲಿಗರ ನಡುವೆ ಫ್ಲೆಕ್ಸ್ ಹರಿದ ವಿಚಾರಕ್ಕೆ ಗಲಾಟೆ ನಡೆದಿರುವ ಘಟನೆ ತಾಲೂಕಿನ ಹೆಮ್ಮನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಜರುಗಿದೆ.

ಕೆಸ್ತೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಹೆಮ್ಮನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿತ ಕೆ.ಆರ್.ಪ್ರವೀಣ್ ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತ ತಿಮ್ಮ ದಾಸ್ ಗ್ರೂಪ್ ಮಾಲೀಕ ಸಿ.ಟಿ.ಶಂಕರ್ ಸೇರಿದಂತೆ ಇಬ್ಬರು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾದ ಪರಿಣಾಮ ಸ್ಥಳದಲ್ಲಿದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು.

ಜೆಡಿಎಸ್ ಟಿಕೆಟ್ ಆಕಾಂಕ್ಷಿತ ಪ್ರವೀಣ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರ ಭಾವಚಿತ್ರಗಳ ಫ್ಲೆಕ್ಸ್ ನಲ್ಲಿ ದೀಪಾವಳಿ ಶುಭಾಶಯ ಕೋರಿ ಗ್ರಾಮದ ಮದ್ದೂರು- ತುಮಕೂರು ಹೆದ್ದಾರಿಯ ಇಕ್ಕೆಲಗಳಲ್ಲಿ ಫ್ಲೆಕ್ಸ್ ಅಳವಡಿಸಿದ್ದರು.

ಅದೇ ರೀತಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತ ಸಿ.ಟಿ.ಶಂಕರ್ ಸಹ ಶಾಸಕ ಕೆ.ಎಂ.ಉದಯ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ದೀಪಾವಳಿ ಶುಭಾಶಯ ಕೋರಿ ಚಿತ್ರವುಳ್ಳ ಫ್ಲೆಕ್ಸ್ ಹಾಕಿದ್ದರು. ಈ ಇಬ್ಬರು ಆಕಾಂಕ್ಷಿತರು ಹಾಕಿದ್ದ ಫ್ಲೆಕ್ಸನ್ನು ಕಳೆದ ಎರಡು ದಿನಗಳ ಹಿಂದೆ ಕೆಲವು ದುಷ್ಕರ್ಮಿಗಳು ಹರಿದು ಹಾಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ರಾತ್ರಿ 8 ಗಂಟೆ ವೇಳೆ ಬೆಂಬಲಿಗರ ನಡುವೆ ಗಲಾಟೆಯಾಗಿದೆ.

ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ್ ಮನೆ ಬಳಿ ಹಾಕಲಾಗಿದ್ದ ಸಿಸಿ ಟಿವಿಯಲ್ಲಿ ಈ ದೃಶ್ಯ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಸಿ.ಟಿ.ಶಂಕರ್ ಮತ್ತು ಪ್ರವೀಣ್ ಮತ್ತು ಬೆಂಬಲಿಗರ ನಡುವೆ ಗಲಾಟೆ ನಡೆದು ಮಾತಿನ ಚಕಮಕಿ ನಡೆದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ನಂತರ ತಮ್ಮ ಬೆಂಬಲಿಗರೊಂದಿಗೆ ಕೆಸ್ತೂರು ಠಾಣೆಗೆ ಧಾವಿಸಿದ ಪ್ರವೀಣ್ ಸಿಸಿಟಿವಿ ದೃಶ್ಯಾವಳಿ ಸಮೇತ ಹನುಮಂತಪುರದ ಭರತ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.ಜೆಡಿಎಸ್ ಟಿಕೆಟ್ ಆಕಾಂಕ್ಷಿತ ಪ್ರವೀಣ್ ಹಾಕಿದ್ದ ಫ್ಲೆಕ್ಸ್ ಹರಿದ ವ್ಯಕ್ತಿಗಳು ಕೈಲಾಗದವರು ಮೈ ಪರಚಿಕೊಂಡರು ಎನ್ನುವಂತಾಗಿದೆ. ತಾಕತ್ತಿದ್ದವರು ಚುನಾವಣೆಯಲ್ಲಿ ನೇರ ಹೋರಾಟಕ್ಕೆ ಇಳಿಯಬೇಕು. ಅದನ್ನು ಬಿಟ್ಟು ಫ್ಲೆಕ್ಸ್ ಮತ್ತು ಬ್ಯಾನರ್ ಹರಿದು ಹಾಕಿ ರಾಜಕೀಯ ಮಾಡುವುದು ನಾಚಿಕೆಗೇಡಿನ ಸಂಗತಿ.

- ಮಹೇಶ್ ಗೌಡ ಜೆಡಿಎಸ್ ವಕ್ತಾರಕೆಸ್ತೂರು ಜಿಪಂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೇವಲ ಫ್ಲೆಕ್ಸ್ ಹರಿದು ರಾಜಕೀಯ ಮಾಡಿ ಜೆಡಿಎಸ್ ನೈತಿಕ ಶಕ್ತಿಯನ್ನು ಕುಂದಿಸಲು ಸಾಧ್ಯವಿಲ್ಲ. ಜನರ ಮನಸ್ಸಿನಲ್ಲಿ ಪಕ್ಷ ಗಟ್ಟಿಯಾಗಿದೆ.

- ಕೆ.ಆರ್.ಪ್ರವೀಣ್, ಜೆಡಿಎಸ್ ಮುಖಂಡರ