ಸಾರಾಂಶ
ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ ನಡೆಯುತ್ತಿದ್ದಾಗ ಪಟ್ಟಣದಲ್ಲಿ ಉದ್ರಿಕ್ತ ವಾತಾವರಣ ಉಂಟಾಯಿತು. ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು
ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿದ್ದ ವಿಧಾನ ಪರಿಷತ್ ಚುನಾವಣೆ ಮತದಾನ ಮತಗಟ್ಟೆ ಕೇಂದ್ರಕ್ಕೆ ಮತದಾನ ಮಾಡಲು ಆಗಮಿಸುವ ಪದವಿಧರರಿಗೆ ಕಾಂಗ್ರೆಸ್ ಕಾರ್ಯಕರ್ತರು ಪ್ಯಾಕೇಟ್‌ನಲ್ಲಿ ಹಣ ನೀಡಿ ಮತ ಓಲೈಕೆ ಮಾಡುತ್ತಿರುವುದನ್ನು ಕಂಡು ಬಿಜೆಪಿ ಶಾಸಕ ಡಾ. ಅವಿನಾಶ ಜಾಧವ್ ಸ್ಥಳಕ್ಕೆ ಬಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ ಮುಖ್ಯರಸ್ತೆಯಲ್ಲಿ ಬಿಜೆಪಿ-ಕಾಂಗ್ರೆಸ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ವಾಗ್ವಾದ ನಡೆಯಿತು.ಶಾಸಕ ಡಾ. ಅವಿನಾಶ ಜಾಧವ್ ಪೊಲೀಸ್ ಇನ್ಸ್‌ಪೆಕ್ಟರ್ ಎಲ್.ಎಚ್. ಗೌಂಡಿ, ಪಿಎಸ್‌ಐ ಸಿದ್ದೇಶ್ವರ ಅವರೊಂದಿಗೆ ಮಾತನಾಡಿದ ಶಾಸಕರು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಅವರಿಗೆ ಮತ ಹಾಕುವಂತೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ಹಣದ ಪ್ಯಾಕೇಟ್ ನೀಡುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಆಕ್ಷೇಪಣೆ ಮಾಡಿದರು ಯಾಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸಿದರು.
ಹುಮನಾಬಾದ ತಾಲೂಕಿನಿಂದ ಆಗಮಿಸಿದ ಕಾರಿನಲ್ಲಿ ಹಣವನ್ನಿಟ್ಟುಕೊಂಡು ಮತದಾನ ಕೇಂದ್ರದ ಬಳಿಯೇ ಹಣ ಹಂಚಿಕೆ ನಡೆಸುತ್ತಿದ್ದಾರೆ.ನೀವೇನು ಕಾಂಗ್ರೆಸ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಿರಿ. ಕಾನೂನು ಪ್ರಕಾರವಾಗಿ ನ್ಯಾಯಯುತವಾಗಿ ಚುನಾವಣೆ ನಡೆಸಿರಿ ಎಂದು ಪೊಲೀಸರನ್ನು ಶಾಸಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ಬಿಜೆಪಿ ಕಾರ್ಯಕರ್ತರಾದ ಗೌತಮ ಪಾಟೀಲ, ಗೋಪಾಲರಾವ ಕಟ್ಟಿಮನಿ, ಭೀಮಶೆಟ್ಟಿ ಮುರುಡಾ, ಸಂತೋಷ ಗಡಂತಿ, ಕೆ.ಎಂ. ಬಾರಿ ಪೋಲಿಸರ ನಿರ್ಲಕ್ಷಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿದರು.ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ ನಡೆಯುತ್ತಿದ್ದಾಗ ಪಟ್ಟಣದಲ್ಲಿ ಉದ್ರಿಕ್ತ ವಾತಾವರಣ ಉಂಟಾಯಿತು. ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಜಟಾಪಟಿ:ನಮ್ಮ ಕಾಂಗ್ರೆಸ್ ಕಾರ್ಯಕರ್ತರ ಅಂಗಿಯನ್ನು ಹಿಡಿದು ತರಲು ನಿಮಗೆ ಅಧಿಕಾರ ಕೊಟ್ಟವರು ಯಾರು ಅವರು ಏನು ತಪ್ಪು ಮಾಡಿದ್ದಾರೆ.ಯಾರಾದರು ದೂರು ಸಲ್ಲಿಸಿದ್ದಾರೆ ಎಂದು ಸಂತೋಷ ಗುತ್ತೆದಾರ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದಾಗ ಸಿಪಿಐ ಎಲ್.ಎಚ್. ಗೌಂಡಿ. ಪಿಎಸೈಸಿದ್ದೇಶ್ವರ ಸಮಾಧಾನಪಡಿಸಿದರು.