ಮಾಜಿ ಶಾಸಕರು-ಪೊಲೀಸರ ನಡುವೆ ಮಾತಿನ ಚಕಮಕಿ

| Published : Jul 01 2024, 01:45 AM IST

ಸಾರಾಂಶ

ಮಾಗಡಿ: ಪಟ್ಟಣದ ಸೋಮೇಶ್ವರ ಬಡಾವಣೆ ಬಳಿ ಮಾಗಡಿ ಪೊಲೀಸರು ವಾಹನ ಸವಾರರಿಗೆ ಸಂಚಾರ ನಿಯಮ ಪಾಲನೆ ಮಾಡದವರಿಗೆ ದಂಡ ವಿಧಿಸುವ ವೇಳೆ ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ಪೊಲೀಸರ ನಡುವೆ ದಂಡದ ವಿಚಾರವಾಗಿ ಮಾತಿನ ಚಕಮಕಿ ನಡೆಯಿತು.

ಮಾಗಡಿ: ಪಟ್ಟಣದ ಸೋಮೇಶ್ವರ ಬಡಾವಣೆ ಬಳಿ ಮಾಗಡಿ ಪೊಲೀಸರು ವಾಹನ ಸವಾರರಿಗೆ ಸಂಚಾರ ನಿಯಮ ಪಾಲನೆ ಮಾಡದವರಿಗೆ ದಂಡ ವಿಧಿಸುವ ವೇಳೆ ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ಪೊಲೀಸರ ನಡುವೆ ದಂಡದ ವಿಚಾರವಾಗಿ ಮಾತಿನ ಚಕಮಕಿ ನಡೆಯಿತು.ಮಾಜಿ ಶಾಸಕ ಎ.ಮಂಜುನಾಥ್ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸೋಮೇಶ್ವರ ಬಡಾವಣೆಯ ಮೂಲಕ ಹಾದು ಹೋಗುವಾಗ ದಂಡ ಹಾಕುತ್ತಿರುವ ಪೊಲೀಸರನ್ನು ಪ್ರಶ್ನೆ ಮಾಡಿ ಈ ರೀತಿ ರಜಾ ದಿನಗಳಲ್ಲಿ ದಂಡ ವಿಧಿಸಿದರೆ ಸಾರ್ವಜನಿಕರಿಗೆ ತೊಂದರೆ ಆಗೋದಿಲ್ಲವೇ? ದೂರದ ಊರುಗಳಿಂದ ತಮ್ಮ ಗ್ರಾಮಗಳಿಗೆ ತೆರಳಲು ಬಂದಿರುತ್ತಾರೆ. ಈ ವೇಳೆ ಅವರನ್ನು ನಿಲ್ಲಿಸಿ ದಂಡ ಹಾಕಿದರೆ ಹೇಗೆ? ಈ ರೀತಿ ಮಾಡುವುದರಿಂದ ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ತಾವೂ ಕೂಡ ಸ್ಥಳೀಯರು, ರೈತರು ಎಂಬುದನ್ನು ನೋಡಿಕೊಂಡು ದಂಡ ಹಾಕಬೇಕು. ಅವರಿಗೆ ಬುದ್ಧಿವಾದ ಹೇಳುವ ಕೆಲಸ ಮಾಡಬೇಕೆಂದು ಪೊಲೀಸರಿಗೆ ಹೇಳುವ ವೇಳೆ ಪೊಲೀಸರು ಮತ್ತು ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.

ನಾವು ನಮ್ಮ ಕರ್ತವ್ಯವನ್ನು ಮಾಡುತ್ತಿದ್ದೇವೆ. ಮೇಲಧಿಕಾರಿಗಳ ಆದೇಶದಂತೆ ನಾವು ಕೆಲಸ ಮಾಡುತ್ತಿದ್ದೇವೆ. ಯಾರಿಗೂ ಸುಮ್ಮನೆ ದಂಡ ಹಾಕುತ್ತಿಲ್ಲ. ಅಪಘಾತಗಳ ಸಂಖ್ಯೆ ಹೆಚ್ಚಾಗಿರುವುದರಿಂದ ರಸ್ತೆ ನಿಯಮ ಫಲಿಸುವಂತೆ ತಿಳಿಸಲಾಗುತ್ತಿದೆ ಎಂದು ಪೊಲೀಸರು ಏರು ಧ್ವನಿಯಲ್ಲಿ ಮಾತನಾಡಿದರು. ಇದಕ್ಕೆ ಮಾಜಿ ಶಾಸಕರು ನಿಮ್ಮ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ. ಈ ರೀತಿ ದೊಡ್ಡ ಪ್ರಮಾಣದಲ್ಲಿ ದಂಡ ಹಾಕಿದರೆ ಸಾರ್ವಜನಿಕರು ಯಾವ ರೀತಿ ಜೀವನ ಸಾಗಿಸುವುದು ಎಂದು ಹೇಳಿದರು.

ಸ್ವಲ್ಪ ಸಮಯದ ನಂತರ ಇಬ್ಬರನ್ನು ಸಮಾಧಾನಪಡಿಸಿ ಮಾಜಿ ಶಾಸಕ ಎ. ಮಂಜುನಾಥ್ ಅವರನ್ನು ಕಳಿಸಿಕೊಟ್ಟ ಘಟನೆ ನಡೆಯಿತು.