ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದಲ್ಲಿ ನಡೆದ ಸಂಕೀರ್ತನ ಯಾತ್ರೆ ವೇಳೆ ‘ಕಟ್ಟೆ ಕಟ್ಟುವೆವು ಮಂದಿರ ಕಟ್ಟುವೆವು’ ಎಂಬ ಘೋಷಣೆ ಕೂಗಿದ ವೇಳೆ ಹನುಮ ಮಾಲಾಧಾರಿಗಳು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಪೊಲೀಸರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.ಸಂಕೀರ್ತನಾ ಯಾತ್ರೆ ಪಟ್ಟಣದ ಪುರಸಭೆ ವೃತ್ತದ ಬಳಿ, ಜಾಮೀಯಾ ಮಸೀದಿ ಬಿಳಿ ಆಗಮಿಸಿದಾಗ ‘ಕಟ್ಟೆ ಕಟ್ಟುವೆವು ಮಂದಿರ ಕಟ್ಟುವೆವು’ ಎಂದು ಕೇಸರಿ ಬಾವುಟ, ಹನುಮ ಧ್ವಜ ಹಿಡಿದು ರಸ್ತೆಯಲ್ಲಿ ಕುಳಿತರು. ‘ಈ ವರ್ಷ ಬರ್ತೀವಿ, ಮುಂದಿನ ವರ್ಷ ಹೊಡಿತೀವಿ’ ಎಂದು ಘೋಷಣೆ ಹಾಕಿದರು.
ಈ ವೇಳೆ ಪೊಲೀಸರು ಹಿಂದೂ ಕಾರ್ಯಕರ್ತರು ಹಾಗೂ ಹನುಮ ಮಾಲಾಧಾರಿಗಳನ್ನು ತಡೆದು ಮುಖ್ಯ ರಸ್ತೆಯಲ್ಲಿ ತೆರಳಲು ಸೂಚಿಸಿ ತಳ್ಳುತ್ತಿದ್ದರು. ಇದರಿಂದ ಕೆಲಕಾಲ ಮಾತಿನ ಚಕಮಕಿ ನಡೆದು ಸ್ವಲ್ಪ ಹೊತ್ತು ನೂಕುನುಗ್ಗಲು ಉಂಟಾಯಿತು. ಇದರಿಂದ ಕೆರಳಿದ ಮಾಲಾಧಾರಿಗಳು ಮಸೀದಿ ಬಳಿಗೆ ನುಗ್ಗಲು ಯತ್ನಿಸಿದರು. ಮಸೀದಿ ಕಡೆ ತೆರಳದಂತೆ ಕೆಎಸ್‌ಆರ್‌ಪಿ ಹಾಗೂ ಪೊಲೀಸರ ತಂಡ ಬ್ಯಾರಿಕೇಡ್ ಹಾಕಿ ತಡೆದು ನಿಲ್ಲಿಸಿದರು.ಮಾಲಾಧಾರಿಗಳು ಉರಿಗೌಡ ಹಾಗೂ ನಂಜೇಗೌಡ ಪರ ಘೋಷಣೆ ಮೊಳಗಿಸಿ ‘ಟಿಪ್ಪು ಸುಲ್ತಾನ್ ಕೊಂದ ಉರಿಗೌಡ, ನಂಜೇಗೌಡರಿಗೆ ಜೈಕಾರ’ ಎಂದು ಕೂಗಿದರು. ಮಸೀದಿ ಪಕ್ಕದ ರಸ್ತೆಯಲ್ಲಿಯೇ ಜಮಾವಣೆಗೊಂಡರು. ಹನುಮ ಇರುವ ಟ್ರ್ಯಾಕ್ಟರ್ ನಿಲ್ಲಿಸಿ ಭಜನೆ ಮಾಡಿದರು. ನಂತರ ಮಸೀದಿ ವೃತ್ತದಲ್ಲಿಯೇ ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ಈಡುಗಾಯಿ ಪೂಜೆ ಸಲ್ಲಿಕೆ:ಮಸೀದಿ ಪಕ್ಕದ ಪುರಸಭೆ ವೃತ್ತದಲ್ಲಿ ಮಾಲಾಧಾರಿಗಳು ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದು, ಕರ್ಪೂರ ಹಚ್ಚಿ ಕೆಲ ಕಾಲ ರಸ್ತೆಯಲ್ಲೇ ಕುಳಿತು ರಾಮ ಹಾಗೂ ಆಂಜನೇಯಸ್ವಾಮಿ ಭಜನೆ ನಡೆಸಿದರು. ನಂತರ ‘ರಕ್ತದ ಕಣ ಕಣ ಕುದಿಯುತ್ತಿದೆ, ಹಿಂದೂ, ಹಿಂದೂ ಎನ್ನುತ್ತಿದೆ’, ‘ಹನುಮನ ಪಾದದ ಮೇಲಾಣೆ, ಮಂದಿರ ವಿಲ್ಲೆ ಕಟ್ಟುವೆವು,’ ‘ಕಟ್ಟುವೆವು ಮಂದಿರವಿಲ್ಲೆ ಕಟ್ಟುವೆವು’ ಎಂದು ಮತ್ತೊಮ್ಮೆ ಘೋಷಣೆ ಮೊಳಗಿಸಿದರು.
ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ:ಸಂಕೀರ್ತನಾ ಯಾತ್ರೆ ಹಿನ್ನಲೆಯಲ್ಲಿ ಜಾಮಿಯಾ ಮಸೀದಿಗೆ ಸಾರ್ವಜನಿಕರ ನಿರ್ಬಂಧ ವಿಧಿಸಲಾಗಿತ್ತು. ಪೊಲೀಸರು ಮುಂಜಾಗೃತ ಕ್ರಮವಾಗಿ ಅಹಿತಕರ ಘಟನೆ ನಡೆಯದಂತೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರು. ಬೆಳಗ್ಗೆಯಿಂದ ಯಾತ್ರೆ ಮುಗಿಯವರೆಗೂ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರಲಿಲ್ಲ.
ಅನಾಮಿಕ ವ್ಯಕ್ತಿಯಿಂದ ಕೆಲಕಾಲ ಗೊಂದಲ: ಸಂಕೀರ್ತನಾ ಯಾತ್ರೆ ವೇಳೆ ವಿಡಿಯೋ ಮಾಡುತ್ತಿದ್ದ ಅನಾಮಿಕ ವ್ಯಕ್ತಿ ಪ್ರವೇಶದಿಂದ ಕೆಲಕಾಲ ಗೊಂದಲ ಉಂಟಾಯಿತು.ಅನ್ಯಕೋಮಿನ ವ್ಯಕ್ತಿಯೊಂದಿಗೆ ಹನುಮ ಭಕ್ತರೊಂದಿಗೆ ವಾಗ್ವಾದಕ್ಕಿಳಿದರು. ಈ ವೇಳೆ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ರಾಜ್ಯ ಪ್ರವಾಸಕ್ಕೆ ಬಂದಿದ್ದ ಹೊರ ರಾಜ್ಯದ ವಿಶ್ವನಾರಾಯಣ್ ತಿವಾರಿ ಎಂಬುದು ಗೊತ್ತಾಯಿತು.