ಶಿರಹಟ್ಟಿಯಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಘರ್ಷ: ಆರು ಜನರಿಗೆ ಗಾಯ

| Published : Oct 03 2025, 01:07 AM IST

ಸಾರಾಂಶ

ಎಗ್‌ ರೈಸ್ ಅಂಗಡಿಯಲ್ಲಿ ಬಾಕಿ ಮಾಡಿದ್ದ ವ್ಯಕ್ತಿಯು ಬಾಕಿ ಹಣ ಕೊಡದೇ ಪಕ್ಕದ ಮತ್ತೊಂದು ಅಂಗಡಿಗೆ ಹೋಗಿದ್ದ ಎಂಬ ಕಾರಣದಿಂದ ಮೊದಲು ನಮ್ಮ ಅಂಗಡಿ ಬಾಕಿ ಹಣ ನೀಡುವಂತೆ ಕೇಳಿದ್ದರಿಂದ ಮಾತಿನ ಚಕಮಕಿ ನಡೆದು ಘರ್ಷಣೆಗೆ ತಿರುಗಿದೆ. ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಬಡಿದಾಡಿದ್ದಾರೆ.

ಶಿರಹಟ್ಟಿ: ಎಗ್‌ ರೈಸ್ ಅಂಗಡಿಯೊಂದರಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ ಘಟನೆ ಇಲ್ಲಿಯ ಸೊರಟೂರ ರಸ್ತೆಯ ತಳಗೇರಿ ಓಣಿ ಪೆಟ್ರೋಲ್ ಬಂಕ್ ಹತ್ತಿರ ಗುರುವಾರ ಬೆಳಗ್ಗೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಪರಿಸ್ಥಿತಿ ತಿಳಿಯಾಗಿದೆ. ಎಗ್‌ ರೈಸ್ ಅಂಗಡಿಯಲ್ಲಿ ಬಾಕಿ ಮಾಡಿದ್ದ ವ್ಯಕ್ತಿಯು ಬಾಕಿ ಹಣ ಕೊಡದೇ ಪಕ್ಕದ ಮತ್ತೊಂದು ಅಂಗಡಿಗೆ ಹೋಗಿದ್ದ ಎಂಬ ಕಾರಣದಿಂದ ಮೊದಲು ನಮ್ಮ ಅಂಗಡಿ ಬಾಕಿ ಹಣ ನೀಡುವಂತೆ ಕೇಳಿದ್ದರಿಂದ ಮಾತಿನ ಚಕಮಕಿ ನಡೆದು ಘರ್ಷಣೆಗೆ ತಿರುಗಿದೆ. ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಬಡಿದಾಡಿದ್ದಾರೆ.ಘಟನೆಯಲ್ಲಿ ಗಾಯಗೊಂಡಿದ್ದ ಪರಶುರಾಮ ಡೊಂಕಬಳ್ಳಿ, ದೇವಪ್ಪ ಪೂಜಾರ, ಶ್ರೀಕಾಂತ ಕಪ್ಪಣ್ಣವರ, ರವಿ ಕಪ್ಪಣ್ಣವರ, ವಿರುಪಾಕ್ಷಯ್ಯ ಹಿರೇಮಠ, ಅಬ್ದುಲ ಘನಿ ಮಕಾನದಾರ (ಎಗ್‌ ರೈಸ್‌ ಅಂಗಡಿ ಮಾಲಿಕ) ಇವರುಗಳನ್ನು ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ವಿಡಿಯೋ ವೈರಲ್:ಘಟನೆಯಲ್ಲಿ ಎರಡು ಕೋಮಿನವರು ಪಾಲ್ಗೊಂಡಿದ್ದರಿಂದ ಪರಿಸ್ಥಿತಿ ಸ್ವಲ್ಪ ಬಿಗಡಾಯಿಸಿತು. ಘಟನೆ ನಡೆದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೂರಾರು ಜನರು ಜಮಾವಣೆಯಾದ್ದಾರೆ. ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ರೋಹನ್ ಜಗದೀಶ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಆತಂಕ ಮೂಡಿಸಿದ ಘಟನೆ: ಗುರುವಾರ ದಸರಾ ಹಬ್ಬದ ಪ್ರಯುಕ್ತ ವಿಜಯದಶಮಿ ಕಾರ‍್ಯಕ್ರಮವು ಫಕೀರ ಸಿದ್ದರಾಮ ಸ್ವಾಮಿಗಳ ಬನ್ನಿ ಮುಡಿಯುವ ಕಾರ‍್ಯಕ್ರಮ ಅತ್ಯಂತ ಸಡಗರ, ಸಂಭ್ರಮದಿಂದ ಪ್ರತಿವರ್ಷವೂ ಜರುಗುತ್ತಾ ಬರುತ್ತಿದೆ. ಈ ವರ್ಷ ಶಿರಹಟ್ಟಿಯ ಹಜರತ್ ಮೆಹಬೂಬ ಸುಬ್ಹಾನಿ ದರ್ಗಾದ ಉರೂಸ್ ಒಂದೇ ದಿನ ಬಂದಿರುವುದರಿಂದ ಬೆಳಗಿನ ಜಾವ ನಡೆದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಪೊಲೀಸರ ಹರಸಾಹಸ: ಪಟ್ಟಣದಲ್ಲಿ ವಿಜಯದಶಮಿ ಮತ್ತು ಉರೂಸ್ ಒಂದೇ ದಿನದಲ್ಲಿ ಬಂದಿರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಅದಕ್ಕಾಗಿ ಎಎಸ್‌ಪಿ, ಡಿಎಸ್‌ಪಿ, ಜಿಲ್ಲಾ ಮೀಸಲು ಸಶಸ್ತ್ರ ಪಡೆ, ಹೋಮಗಾರ್ಡ್ಸ್ ಮತ್ತು ಸ್ಥಳೀಯ ಸಿಬ್ಬಂದಿ ಸೇರಿದಂತೆ ವಿವಿಧ ಸ್ಥಳಗಳಿಂದ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಆತಂಕ ಬೇಡ: ಶಿರಹಟ್ಟಿ ಪಟ್ಟಣದಲ್ಲಿ ನಡೆದ ಘಟನೆ ವೈಯಕ್ತಿಕ ಕಾರಣಕ್ಕೆ ಸಂಬಂಧಿಸಿದ್ದು. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಗದುಗಿನ ಜಿಮ್ಸ್‌ಗೆ ರವಾನಿಸಲಾಗಿದೆ. ಸಾರ್ವಜನಿಕರು ಯಾವುದೇ ಭಯಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಪಟ್ಟಣದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.