ಮಂಗಳೂರು ವಿವಿಗೆ ಅತಿಥಿ ಉಪನ್ಯಾಸಕರ ತರಗತಿ ಬಹಿಷ್ಕಾರ ಬಿಸಿ

| Published : Mar 04 2024, 01:16 AM IST / Updated: Mar 04 2024, 01:10 PM IST

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅತಿಥಿ ಉಪನ್ಯಾಸಕರು ಕೊಡಗಿನ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಆರೇಳು ತಿಂಗಳಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ತರಗತಿ ಬಹಿಷ್ಕರಿಸಿ ನಡೆಸುತ್ತಿರುವ ಪ್ರತಿಭಟನೆ ಶನಿವಾರ ಐದನೇ ದಿನಕ್ಕೆ ತಲುಪಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು 

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅತಿಥಿ ಉಪನ್ಯಾಸಕರು ಕೊಡಗಿನ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಆರೇಳು ತಿಂಗಳಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ತರಗತಿ ಬಹಿಷ್ಕರಿಸಿ ನಡೆಸುತ್ತಿರುವ ಪ್ರತಿಭಟನೆ ಶನಿವಾರ ಐದನೇ ದಿನಕ್ಕೆ ತಲುಪಿದೆ. 

ಇದೇ ವೇಳೆ ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲೂ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. 

ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಕಾರ್ಯಪ್ಪ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ 43 ಉಪನ್ಯಾಸಕರಿಗೆ ಕಳೆದ ಐದು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. 

ಹಂಪನಕಟ್ಟೆ ವಿವಿ ಕಾಲೇಜು, ಕೊಣಾಜೆ ವಿವಿ ಪ್ರಥಮ ದರ್ಜೆ ಕಾಲೇಜು, ನೆಲ್ಯಾಡಿ ವಿವಿ ಘಟಕ ಕಾಲೇಜು, ಉಡುಪಿ ಬನ್ನಡ್ಕ ವಿವಿ ಘಟಕ ಕಾಲೇಜು, ಮಡಿಕೇರಿ ಎಫ್‌ಎಂಕೆ ಕಾಲೇಜು, ಚಿಕ್ಕಳುವಾರ ಪಿಜಿ ಸೆಂಟರ್‌ ಒಳನ್ನೊಳಗೊಂಡ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಒಟ್ಟು 387 ಅತಿಥಿ ಉಪನ್ಯಾಸಕರಿಗೂ ವಿವಿ ವೇತನ ಪಾವತಿಸಿಲ್ಲ.

ಈ ಮಧ್ಯೆ ಐದಾರು ತಿಂಗಳ ವೇತನ ಪಾವತಿಸಿದ ನಂತರವೇ ಕರ್ತವ್ಯಕ್ಕೆ ಹಾಜರಾಗುವ ಎಚ್ಚರಿಕೆಯನ್ನು ವಿವಿಗೆ ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜಿನ ಉಪನ್ಯಾಸಕರು ನೀಡಿರುವ ಬೆನ್ನಲ್ಲೆ ಒಂದು ತಿಂಗಳ ವೇತನ ಬಿಡುಗಡೆಗೆ ವಿವಿ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. 

ಆದರೆ ಏಕ ಕಾಲದಲ್ಲಿ ಪೂರ್ಣ ವೇತನ ಬಿಡುಗಡೆಗೆ ಉಪನ್ಯಾಸಕರು ಪಟ್ಟು ಹಿಡಿದಿದ್ದಾರೆ. ಇತ್ತ ಮಂಗಳೂರಿನಲ್ಲೂ ಬಾಕಿ ವೇತನ ನೀಡದಿದ್ದರೆ ತರಗತಿ ಬಹಿಷ್ಕರಿಸುವ ಎಚ್ಚರಿಕೆಯನ್ನೂ ಅತಿಥಿ ಉಪನ್ಯಾಸಕರು ನೀಡಿರುವುದು ವಿವಿಗೆ ತಲೆನೋವಾಗಿ ಪರಿಣಮಿಸಿದೆ.

ಕೋಟ್ಯಂತ ರು. ವೇತನ ಪಾವತಿಗೆ ಬಾಕಿ

ಕೊವಿಡ್‌ ವೇಳೆ ತರಗತಿ ನಡೆಸಿದ್ದ 400ಕ್ಕೂ ಅಧಿಕ ಅತಿಥಿ ಉಪನ್ಯಾಸಕರಿಗೆ ವೇತನ ನೀಡುವ ಬಗ್ಗೆ ಮೂರು ವರ್ಷದ ಹಿಂದೆ ಮಂಗಳೂರು ವಿವಿ ಸಿಂಡಿಕೇಟ್‌ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಈವರೆಗೆ ಕೇವಲ ಒಂದು ತಿಂಗಳ ವೇತನ ಮಾತ್ರ ಬಿಡುಗಡೆಗೊಳಿಸಲಾಗಿದೆ. ಬಾಕಿ ಉಳಿದ ಮೂರು ತಿಂಗಳದ ಮೊತ್ತ ಸುಮಾರು 4 ಕೋ.ರು. ವೇತನ ಈವರೆಗೂ ಪಾವತಿಯಾಗಿಲ್ಲ. 

ಅತಿಥಿ ಉಪನ್ಯಾಸಕರಿಗೆ ಭರ್ಜರಿಯಾಗಿ ಗೌರವಧನ ಏರಿಕೆ ಮಾಡಿದ್ದ ಮಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರಿಗೆ 3 ತಿಂಗಳ ವೇತನ, ಮಡಿಕೇರಿ ಮತ್ತು ಚಿಕ್ಕಳುವಾರು ಕಾಲೇಜಿನ ಅತಿಥಿ ಉಪನ್ಯಾಸಕರಿಗೆ 6 ತಿಂಗಳ ವೇತನ ವಿವಿ ಬಾಕಿ ಇರಿಸಿಕೊಂಡಿದೆ. ಲಭ್ಯ ಮಾಹಿತಿಯಂತೆ 13.7 ಕೋ. ರು.ಗಳಷ್ಟು ಮೊತ್ತ ಅತಿಥಿ ಉಪನ್ಯಾಸಕರಿಗೆ ಪಾವತಿಗೆ ಬಾಕಿ ಇದೆ. ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆ ಸಮೀಪಿಸುತ್ತಿದ್ದಂತೆ ಅತಿಥಿ ಉಪನ್ಯಾಸಕರ ಪ್ರತಿಭಟನೆ ವಿವಿ ಆಡಳಿತಕ್ಕೆ ಬಿಸಿ ತಟ್ಟಿದೆ.

ಪ್ರಸ್ತುತ ವಿವಿಯಲ್ಲಿ ಅನುದಾನದ ಕೊರತೆ ಇದೆ. ಅತಿಥಿ ಉಪನ್ಯಾಸಕರಿಗೆ ಈ ಹಿಂದಿನಂತೆ ಹಂತ ಹಂತವಾಗಿ ವೇತನ ಬಿಡುಗಡೆಗೊಳಿಸುವ ಭರವಸೆ ನೀಡಲಾಗಿದೆ. ತರಗತಿ ಬಹಿಷ್ಕರಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂಪಡೆಯಲು ಮನವಿ ಮಾಡಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ವಿವಿ ಪ್ರಭಾರ ಕುಲಪತಿ ಪ್ರೊ. ಜಯರಾಜ್‌ ಅಮೀನ್‌ ಹೇಳುತ್ತಾರೆ..