ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ಕಲೆ ದೈವಿಕ ಕಲೆಗಳಾಗಿದ್ದು, ಹಿರಿಯ ಕಲಾವಿದರು ಕಿರಿಯ ತಲೆಮಾರಿಗೆ ವರ್ಗಾಯಿಸುವ ಕಾರ್ಯ ಮಾಡಬೇಕು ಎಂದು ಚೆನ್ನೈಯ ಹಿರಿಯ ಸಂಗೀತ ಕಲಾವಿದ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಹೇಳಿದರು.
ಮಂಗಳೂರು: ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ಕಲೆ ದೈವಿಕ ಕಲೆಗಳಾಗಿದ್ದು, ಹಿರಿಯ ಕಲಾವಿದರು ಕಿರಿಯ ತಲೆಮಾರಿಗೆ ವರ್ಗಾಯಿಸುವ ಕಾರ್ಯ ಮಾಡಬೇಕು ಎಂದು ಚೆನ್ನೈಯ ಹಿರಿಯ ಸಂಗೀತ ಕಲಾವಿದ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಹೇಳೀದರು.ಸುರತ್ಕಲ್‌ನ ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸಹಯೋಗದಲ್ಲಿ ಸುರತ್ಕಲ್‌ನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತ ನಾಟ್ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕಳೆದ ಕೆಲವು ದಶಕಗಳಿಂದ ಪ್ರತಿಭಾವಂತ ಯುವ ಕಲಾವಿದರು ಪ್ರಕಾಶಕ್ಕೆ ಬರುತ್ತಿದ್ದು, ಸಂಗೀತ ಮತ್ತು ನೃತ್ಯ ಕಲಾ ಸಂಘಟಕರ ಪಾತ್ರ ಹಿರಿದಾಗಿದೆ. ಪ್ರತಿಭಾವಂತ ಯುವ ಕಲಾವಿದರಿಗೆ ಅವಕಾಶಗಳನ್ನು ನೀಡುವ ಮೂಲಕ ಸಾಂಸ್ಕೃತಿಕ ಸಂಘಟನೆಗಳು ಸಂಸ್ಕೃತಿ ಪ್ರಚಾರದ ಕಾರ್ಯ ಮಾಡಬಹುದಾಗಿದೆ ಎಂದರು.ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಕರ್ಮಯೋಗಿ ಡಾ.ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಶ್ರೀ ಕ್ಷೇತ್ರ ಎಡನೀರು ಮಠದ ರಾಜೇಂದ್ರ ಕಲ್ಲೂರಾಯ ಅವರು ಕಲಾವಿದ ಶ್ರೀಕಾಂತ್ ಗೋಪಾಲಕೃಷ್ಣನ್ ಅವರನ್ನು ಗೌರವಿಸಿದರು.ಹಿರಿಯ ಕಲಾವಿದ ವಿದ್ವಾನ್ ಚಂದ್ರಶೇಖರ ನಾವಡ, ನಾಗರಿಕ ಸಲಹಾ ಸಮಿತಿಯ ಸದಸ್ಯ ಕೃಷ್ಣಮೂರ್ತಿ ಪಿ., ನೃತ್ಯ ವಿದುಷಿ ಪ್ರವಿತಾ ಅಶೋಕ್, ಜಯಶ್ರೀ ಆರ್.ಭಟ್, ವಿಭು ರಾವ್ ಇದ್ದರು.ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಸ್ವಾಗತಿಸಿದರು.ಶೋಭಿತ ಭಟ್ ಕಿನ್ನಿಗೋಳಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಮಹತೀ ಕೆ. ಕಾರ್ಕಳ ವಯಲಿನ್ ನಲ್ಲಿ, ಸಂದೀಪ್ ರಾಮಮೂರ್ತಿ ಮೃದಂಗದಲ್ಲಿ, ವಿದ್ವತ್ ರಾವ್ ತಂಬೂರದಲ್ಲಿ ಸಹಕರಿಸಿದರು. ಗಾರ್ಗಿದೇವಿ ಕುಂದಾಪುರ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.