ಶಾಸ್ತ್ರೀಯ ಸಂಗೀತಕ್ಕಿರುವ ವಿಶಿಷ್ಟ ಶಕ್ತಿ, ಇಂಪು ಮತ್ತು ಸೊಗಸು ಸಹೃದಯರಲ್ಲಿ ಭಾವನಾತ್ಮಕ ಅನುಭೂತಿಯನ್ನು ಸೃಷ್ಟಿಸುತ್ತದೆ. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಸಂಗೀತ ವರ್ಧನೆಯ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮೀಜಿ ಜಿತಕಾಮಾನಂದಾಜಿ ಮಹಾರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಶಾಸ್ತ್ರೀಯ ಸಂಗೀತಕ್ಕಿರುವ ವಿಶಿಷ್ಟ ಶಕ್ತಿ, ಇಂಪು ಮತ್ತು ಸೊಗಸು ಸಹೃದಯರಲ್ಲಿ ಭಾವನಾತ್ಮಕ ಅನುಭೂತಿಯನ್ನು ಸೃಷ್ಟಿಸುತ್ತದೆ. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಸಂಗೀತ ವರ್ಧನೆಯ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮೀಜಿ ಜಿತಕಾಮಾನಂದಾಜಿ ಮಹಾರಾಜ್ ಹೇಳಿದರು.

ಅವರು ಶ್ರೀ ರಾಮಕೃಷ್ಣ ಮಠದ ಅಮೃತ ಭವನ ಸಭಾಂಗಣದಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ ) ಆಯೋಜಿಸಿದ ‘ರಾಗ ಸುಧಾರಸ- 2026’ರ ಉದ್ಘಾಟನಾ ಸಮಾರಂಭದಲ್ಲಿ ಆರ್ಶೀವಚನ ನೀಡಿ ಮಾತನಾಡಿದರು.

ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿಯವರು ಯಕ್ಷ - ಸಂಗೀತ - ನೃತ್ಯೋತ್ಸವವನ್ನು ಉದ್ಘಾಟಿಸಿ, ಭಾರತೀಯ ಶಾಸ್ತ್ರೀಯ ಕಲೆಗಳು ಆದರ್ಶಯತ ಜೀವನ ಮೌಲ್ಯಗಳನ್ನು ತಿಳಿಯಪಡಿಸುತ್ತಿವೆ ಎಂದರು.

ಚೆನ್ನೈನ ಡಾ. ಮಣಿ ಕೃಷ್ಣಸ್ವಾಮಿ ಫೌಂಡೇಶನ್ ಆಡಳಿತ ಟ್ರಸ್ಟಿ ಎಂ. ಕೆ. ಸುದರ್ಶನ್ ಮತ್ತು ಕುಲೊಂತ್ತುಂಗನ್ ರಾಜಶೇಖರನ್ ಶುಭ ಹಾರೈಸಿದರು.

ಮಣಿ ಕೃಷ್ಣಸ್ವಾಮಿ ಫೌಂಡೇಶನ್ (ರಿ ) ಚೆನ್ನೈ ಕೊಡ ಮಾಡುವ ಮಣಿ ಮತ್ತು ಎಂ. ಕೆ. ವಾರ್ಷಿಕ ಪ್ರಶಸ್ತಿ -2026 ನ್ನು ಯುವ ಕಲಾವಿದೆ ತನ್ಮಯಿ ಉಪ್ಪಂಗಳ ಪುತ್ತೂರು ಇವರಿಗೆ ಪ್ರದಾನ ಮಾಡಲಾಯಿತು.

ಡಾ. ಮಣಿ ಕೃಷ್ಣಸ್ವಾಮಿಯವರ ಶಿಷ್ಯೆಯಾಗಿ 30 ವರ್ಷ ಪೂರೈಸಿದ ನೆನಪಿಗಾಗಿ ಸಂಗೀತ ಕಲಾವಿದೆ ಪ್ರಾರ್ಥನ ಸಾಯಿ ನರಸಿಂಹನ್ ಅವರನ್ನು ಅವರ ಶಿಷ್ಯ ಬಳಗ ಸಮ್ಮಾನಿಸಿತು.

ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಅಧ್ಯಕ್ಷ ಕ್ಯಾ.ಗಣೇಶ್ ಕಾರ್ಣಿಕ್, ಕೋಶಾಧಿಕಾರಿ ವಿಭು ರಾವ್, ಸಲಹಾ ಸಮಿತಿ ಸದಸ್ಯರಾದ ವಿದ್ವಾನ್ ನಾಗೇಶ್ ಎ. ಬಪ್ಪನಾಡು, ವಿದುಷಿ ಗೀತಾ ಸರಳಾಯ, ಚಂದ್ರಶೇಖರ ಶೆಟ್ಟಿ ಇದ್ದರು.

ಕಲಾ ಪೋಷಕ ಎಂ.ಕೃಷ್ಣಸ್ವಾಮಿಯವರ ಜನ್ಮ ಶತಾಬ್ಧಿ ಪ್ರಯುಕ್ತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಆರಂಭದ ಸಂಗೀತ ಕಛೇರಿಯಲ್ಲಿ ವಿದ್ವಾನ್ ಪ್ರಾರ್ಥನಾ ಸಾಯಿ ನರಸಿಂಹನ್ ಅವರ ಶಿಷ್ಯೆಯರಿಂದ ಸಂಗೀತ ಪ್ರಸ್ತುತಿ ನಡೆಯಿತು. ಅನಂತರದಲ್ಲಿ ಪ್ರಾರ್ಥನಾ ಸಾಯಿ ನರಸಿಂಹನ್, ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಸುಮೇಧ ಸಾಯಿ ಚೆನ್ನೈ ಸಹ ಗಾಯನ, ತನ್ಮಯಿ ಉಪ್ಪಂಗಳ ವಯಲಿನ್, ಪಲ್ಲಡಂ ರವಿ ಮೃದಂಗ ಮತ್ತು ಆಲತ್ತೋರು ರಾಜಶೇಖರ್ ಖಂಜಿರದಲ್ಲಿ ಸಹಕರಿಸಿದರು.