ಸಾರಾಂಶ
ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ ಸಾಥ್ । ಎರಡು ಹಂತದಲ್ಲಿ 430 ಕಿಮೀ ಪಾದಯಾತ್ರೆ ಪೂರ್ಣ
ಕನ್ನಡಪ್ರಭ ವಾರ್ತೆ ಹೊಸಪೇಟೆತುಂಗಭದ್ರಾ ನದಿ ಕಲುಷಿತಗೊಳ್ಳುತ್ತಾ ಸಾಗಿದ್ದು, ನದಿ ನೀರಿನ ಸಂರಕ್ಷಣೆಗಾಗಿ ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೇ ಹಂತದ ಪಾದಯಾತ್ರೆ ಮಂತ್ರಾಲಯದವರೆಗೆ ನವೆಂಬರ್-ಡಿಸೆಂಬರ್‌ನಲ್ಲಿ ಆರಂಭಗೊಳ್ಳಲಿದ್ದು, ಆಂಧ್ರಪ್ರದೇಶದಲ್ಲಿ ಅಲ್ಲಿನ ಡಿಸಿಎಂ ಪವನ್ ಕಲ್ಯಾಣ ಮುಂದುವರೆಸಲಿದ್ದಾರೆ ಎಂದು ಪರ್ಯಾವರಣ ಟ್ರಸ್ಟ್ ಹಾಗೂ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಬಸವರಾಜ ಪಾಟೀಲ ವೀರಾಪುರ, ಮಾಜಿ ಶಾಸಕ ಮಹಿಮಾ ಪಟೇಲ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಶೃಂಗೇರಿ ಬಳಿ ವರಾಹ ಪರ್ವತದಲ್ಲಿ ಹುಟ್ಟುವ ತುಂಗಾ ಹಾಗೂ ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿ ಬಳಿ ಸಂಗಮವಾಗಿ ಮುಂದೆ ಸಾಗುತ್ತಾ ತುಂಗಭದ್ರಾ ಡ್ಯಾಂ ಸೇರಿ ಅಲ್ಲಿಂದ ಆಂಧ್ರಪ್ರದೇಶದ ಕೃಷ್ಣಾ ನದಿ ಸೇರುತ್ತದೆ. ಕರ್ನಾಟಕದ ಅತ್ಯಂತ ಉದ್ದವಾದ ನದಿ ನದಿ ಅಕ್ಕಪಕ್ಕದ ಊರುಗಳಿಗೆ ಕುಡಿಯುವ ನೀರು ಮತ್ತು ಲಕ್ಷಾಂತರ ರೈತರಿಗೆ ಜೀವನದಿ ಆಗಿದೆ. ಈಗ ಈ ನದಿ ಕಲುಷಿತಗೊಳ್ಳುತ್ತಿದೆ. ಹಾಗಾಗಿ ನಾವು ಜಾಗೃತಿಗಾಗಿ ಈಗಾಗಲೇ ಎರಡು ಹಂತದಲ್ಲಿ 430 ಕಿಮೀ ದೂರ ಪಾದಯಾತ್ರೆ ನಡೆಸಿದ್ದೇವೆ. ಮುಂದೆ ರಾಯಚೂರು, ಕೊಪ್ಪಳ, ಬಳ್ಳಾರಿ ಭಾಗದ ಮೂಲಕ ಮಂತ್ರಾಲಯದವರೆಗೆ ಪಾದಯಾತ್ರೆ ನಡೆಸಲಾಗುವುದು. ಆಂಧ್ರಪ್ರದೇಶದಲ್ಲಿ ಈ ಪಾದಯಾತ್ರೆಯನ್ನು ಅಲ್ಲಿನ ಡಿಸಿಎಂ ಪವನ್ ಕಲ್ಯಾಣ ಮುಂದುವರೆಸಲಿದ್ದಾರೆ. ಈಗಾಗಲೇ ಅವರ ಜೊತೆಗೆ ಚರ್ಚಿಸಲಾಗಿದೆ. ಕರ್ನಾಟಕದಲ್ಲಿ ಈ ನದಿಯನ್ನು ಉಳಿಸುವ ಕಾರ್ಯ ಮಾಡಲಾಗುತ್ತಿದ್ದು, ಜನ ಜಾಗೃತಿ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು.ಶೃಂಗೇರಿ, ತೀರ್ಥಹಳ್ಳಿ, ಶಿವಮೊಗ್ಗ, ಹೊನ್ನಾಳಿ, ದಾವಣಗೆರೆ, ಹರಿಹರ, ಹೂವಿನಹಡಗಲಿ ಸೇರಿದಂತೆ ಎಲ್ಲೂ ಕೂಡ ಚರಂಡಿ ನೀರು ಶುದ್ಧೀಕರಿಸಿ ಬಿಡುವ ವ್ಯವಸ್ಥೆ ಇಲ್ಲ. ಈಗಾಗಲೇ ನದಿ ನೀರಿನಲ್ಲಿ ಅಲ್ಯುಮಿನಿಯಂ ಪ್ರಮಾಣ ಅಗಾಧವಾಗಿದೆ. ಈ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ಪ್ರಯೋಗಾಲಯದಿಂದ ದೃಢಪಟ್ಟಿದೆ. ಚರ್ಮ ರೋಗಕ್ಕೂ ನದಿ ನೀರು ಕಾರಣವಾಗಲಿದೆ. ಶೃಂಗೇರಿಯಿಂದ ಆರಂಭಗೊಳ್ಳುವ ಮಲಿನ ನೀರು, ಹೊಸಪೇಟೆ ಡ್ಯಾಂವರೆಗೂ ಸಾಗಿ ಬರುತ್ತಿದೆ. ಮುಂದೆ ಈ ನೀರು ಆಂಧ್ರಪ್ರದೇಶಕ್ಕೂ ತೆರಳುತ್ತಿದೆ. ನಾವು ನದಿ ನೀರನ್ನು ಕಲುಷಿತಗೊಳ್ಳದಂತೆ ಅಭಿಯಾನ ಆರಂಭಿಸಿದ ಬಳಿಕ ಶೃಂಗೇರಿ ಶ್ರೀಗಳು 50 ಎಕರೆ ಜಾಗ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ನೀಡಲು ಮುಂದಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ₹30 ಕೋಟಿ ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಇನ್ನೂ ಶಿವಮೊಗ್ಗದಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಮರು ಆರಂಭಗೊಳ್ಳುತ್ತಿದೆ. ನದಿಗೆ ಕಲುಷಿತ ನೀರು ಬಿಡದಂತೆ ನಾವೆಲ್ಲರೂ ಒಗ್ಗಟ್ಟಾಗಿ ನೋಡಿಕೊಳ್ಳಬೇಕಿದೆ. ಇಡೀ ಮನುಕುಲವೇ ಪ್ಲಾಸ್ಟಿಕ್‌ನಿಂದ ನಶಿಸಿಹೋಗುತ್ತಿದೆ. ಇನ್ನೂ ಕಲುಷಿತ ನೀರು ನದಿ ಒಡಲು ಸೇರಿದರೆ, ಮಾನವ, ಪ್ರಾಣಿ, ಸಸ್ಯ, ಜೀವವೈವಿಧ್ಯಕ್ಕೆ ಭಾರಿ ಪೆಟ್ಟು ಬೀಳಲಿದೆ. ನಾವು ಮೊದಲು ನದಿ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದರು.ನದಿ ನೀರಿನಲ್ಲಿ ಪ್ಲಾಸ್ಟಿಕ್ ಸೇರಿ ಸಮುದ್ರ ಸೇರುತ್ತದೆ. ಭಾರತದ ಭೌಗೋಲಿಕ ವಿಸ್ತೀರ್ಣ ಮೀರಿ ಪ್ಲಾಸ್ಟಿಕ್, ತ್ಯಾಜ್ಯ ಸಮುದ್ರ ಸೇರುತ್ತಿದೆ. ಇದು ಇಡೀ ಮನುಕುಲಕ್ಕೆ ಅಪಾಯಕಾರಿಯಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲೂ ನದಿ ನೀರು ಕಲುಷಿತವಾಗಿರುವುದು ಬಯಲಾಗಿದೆ. ನಾವು ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಬೇಕಿದೆ. ಇದಕ್ಕಾಗಿ ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೇ ಹಂತದ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ಎರಡು ಪಾದಯಾತ್ರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಠಾಧೀಶರು, ರಾಜಕಾರಣಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶೃಂಗೇರಿಯಿಂದ ಗಂಗಾವತಿಯ ಆನೆಗುಂದಿವರೆಗೆ ನಾವು ಪಾದಯಾತ್ರೆ ನಡೆಸಿದ್ದೇವೆ. ಮುಂದೆ ಮಂತ್ರಾಲಯದವರೆಗೆ ನಡೆಸುತ್ತೇವೆ. ತುಂಗಭದ್ರಾ ನದಿ ಶೇ.88ರಷ್ಟು ಕರ್ನಾಕದಲ್ಲೇ ಹರಿಯುತ್ತದೆ ಎಂಬುದನ್ನು ಮರೆಯಬಾರದು ಎಂದರು.
ಮುಖಂಡರಾದ ಬಿ.ಎಂ. ಕುಮಾರಸ್ವಾಮಿ, ಡಾ. ಶ್ರೀಪತಿ ಎಲ್.ಕೆ., ಎಂ. ಶಂಕರ, ರಾಘವೇಂದ್ರ ತೂನಾ, ಗೋಣಿ ಬಸಪ್ಪ, ಪಿ. ವೆಂಕಟೇಶ, ಮಲ್ಲಿಕಾರ್ಜುನ ಮೆಟ್ರಿ, ಗುಜ್ಜಲ ಗಣೇಶ ಮತ್ತಿತರರಿದ್ದರು.