ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಶುದ್ಧ ಗಾಳಿ, ಶುದ್ಧ ನೀರು ಮತ್ತು ಮಿತ ಆಹಾರ ಸೇವನೆ ಆರೋಗ್ಯಪೂರ್ಣ ಜೀವನದ ರಹಸ್ಯ ಎಂದು ಧಾರವಾಡದ ಮನಗುಂಡಿಯ ಮಹಾಮನೆಯ ಬಸವಾನಂದ ಸ್ವಾಮಿಗಳು ಹೇಳಿದರು.ಸ್ಥಳೀಯ ಶ್ರೀ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಹುರಕಡ್ಲಿ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಹತ್ತು ದಿನಗಳ ಅರೋಗ್ಯ ಯೋಗ ಮತ್ತು ಕ್ಯಾನ್ಸರ ಚಿಕಿತ್ಸೆ ಶಿಬಿರದ 9ನೇ ದಿನದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಕಲುಷಿತ ನೀರು ಕುಡಿದು ಕೋಟ್ಯಂತರ ಜನ ಅನಾರೋಗ್ಯದಿಂದ ಬಳಲುತ್ತಾರೆ. ಸರ್ಕಾರ ಎಲ್ಲರಿಗೂ ಶುದ್ಧ ನೀರು ಕೊಡಲು ಕಷ್ಟಸಾಧ್ಯ. ಇದಕ್ಕೆ ಆತಿಯಾದ ಜನಸಂಖ್ಯೆ. ಜನಸಂಖ್ಯೆ ಹೆಚ್ಚಳದಿಂದ ಯಾವುದು ಸಾಲುತ್ತಿಲ್ಲ. ಸುರಕ್ಷಿತ ನೀರು ಸರಬರಾಜು ಆರೋಗ್ಯಕರ ಆರ್ಥಿಕತೆಯ ಬೆನ್ನೆಲು ಆಗಿದೆ ಎಂದು ನುಡಿದರು.
ಭಾರತದ 718 ಜಿಲ್ಲೆಗಳ ಮೂರನೇ ಎರಡರಷ್ಟು ಭಾಗವು ತೀವ್ರ ಸಾವಕಳಿಯಿಂದ (ಸವಳು ನೀರು ) ಪ್ರಭಾವಿತವಾಗಿದೆ. ಅಂತರ್‌ಜಲ ವೇಗವಾಗಿ ಕುಸಿಯುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಹೆಚ್ಚು ಗಿಡ - ಮರಗಳನ್ನು ಬೆಳೆಸಿ ಶುದ್ಧ ಗಾಳಿ, ಜಲಕ್ಕಾಗಿ ಮಳೆ ನೀರು ಕೊಯ್ಲು ಮಾಡಿ ಅಂತರ ಜಲ ಕಾಯ್ದುಕೊಳ್ಳಬೇಕು. ಮನೆ ಕಟ್ಟುವ ಮೊದಲು ಮರ ಬೆಳೆಸಿಕೊ. ಮಳೆ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಿ. ಆಹಾರದಲ್ಲಿ ಅರ್ಧಷ್ಟು ಬೆಯಿಸಿದ ಮತ್ತು ಅರ್ಧದಷ್ಟು ಹಸಿ ತರಕಾರಿ ಬಳಸಿ. ಅಡುಗೆ ಮನೆ ಆರೋಗ್ಯದ ಕೀಲಿ ಕೈ ಇದ್ದಂತೆ ಅದನ್ನು ಅರಿತು ಬಾಳಿದರೆ ಜೀವನ ಸ್ವರ್ಗಮಯವಾಗುತ್ತದೆ.ಕಳೆದ ಎರಡ ಮೂರು ದಶಕಗಳಲ್ಲಿ ಬೋರ್‌ವೆಲ್ ಕೊರೆಯುವುಕೆ ಹೆಚ್ಚುತ್ತಿದೆ. ಇದರಿಂದ ಅಂತರ್‌ಜಲ ಪಾತಾಳ ಸೇರುತ್ತಿದೆ. ಅಂತರ್ ಜಲ ಹೆಚ್ಚಿಸುವ ಮೂಲಗಳಾದ ಕೆರೆಗಳು ಒತ್ತುವರಿಯಾಗಿ ಮಾಯವಾಗಿವೆ. ಇದಕ್ಕೆ ಮನುಷ್ಯ ದುರಾಸೆಯೇ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜ ಯೋಗಿ ಸಹಜಾನಂದ ಸ್ವಾಮೀಜಿ ಮಾತನಾಡಿ, ಸರ್ಕಾರಗಳ ಮೇಲೆ ಎಲ್ಲ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರುತರ ಜವಾಬ್ದಾರಿ ಇದೆ. ಆದರೆ, ಅದನ್ನು ಯಾವುದೇ ಸರ್ಕಾರಗಳು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿವೆ. ಎಲ್ಲಿಯವರೆಗೆ ಶುದ್ಧ ನೀರು ಸಿಗುವುದಿಲ್ಲವೋ ಅಲ್ಲಿಯವರೆಗೆ ಜನರ ಅರೋಗ್ಯ ಸುಧಾರಣೆ ಕಷ್ಟ ಸಾಧ್ಯ ಎಂದು ಹೇಳಿದರು.ಶಿಕ್ಷಕ ಹುಮಾಯಿನ್ ಸುತಾರ ಮಾತನಾಡಿ, ನಾವು ಎಲ್ಲಿಯವರೆಗೆ ನಿಸರ್ಗ ಪ್ರಿತಿಸುವದಿಲ್ಲವೋ ಅಲ್ಲಿಯವರೆಗೆ ಅದರ ಮುನಿಸು ಎದುರಿಸಿ ಬದುಕುವ ಸ್ಥಿತಿ ತಪ್ಪಿದ್ದಲ್ಲ. ನಿಸರ್ಗಕ್ಕೆ ವಿರುದ್ಧವಾಗಿ ನಡೆದು ಬದುಕುವುದು ಬಹಳ ಕಷ್ಟ. ಶುದ್ಧ ಗಾಳಿ ಬೇಕಾದರೆ ಮರ ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶುದ್ಧ ನೀರು ಬೇಕಾದರೆ ಮಳೆ ನೀರು ಸಂಗ್ರಹ ಮಾಡುವ ವ್ಯವಸ್ಥೆ ಹೊಂದಬೇಕು. ಆದರೆ, ನಾವು ಅದಕ್ಕೆ ವಿರುದ್ಧ ನಡೆಯುತ್ತಿದ್ದೇವೆ. ಕಷ್ಟ ಬಂದಾಗ ಮಾತ್ರ ಎಲ್ಲವೂ ನೆನಪಾಗುತ್ತದೆ ಹೊರತು. ವಾಸ್ತವ ಅರಿತು ಜೀವಿಸಿದರೆ ನಿಸರ್ಗ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.
ಈ ವೇಳೆ ಸಿದ್ದಾನಂದ ಭಾರತಿ ಸ್ವಾಮಿಗಳು ವೇದಿಕೆ ಮೇಲಿದ್ದರು. ಮುಖಂಡರಾದ ಅಶೋಕ ಅಂಗಡಿ, ಮಹಾಲಿಂಗಪ್ಪ ಜಕ್ಕಣ್ಣವರ ಶಿವಾನಂದ ಕನ್ನಾಳ, ಮೆಹಬೂಬ ಸನದಿ, ಶ್ರೀಶೈಲಪ್ಪ ಉಳ್ಳೆಗಡ್ಡಿ, ಯಲ್ಲಣ್ಣಗೌಡ ಪಾಟೀಲ, ಚಂದ್ರು ಗೊಂದಿ, ಹಣಮಂತ ಮೇರಾಪಟ್ಟಿ, ಬಾಬುರಾವ್ ಅಂಬಲಜೇರಿ, ಹಣಮಂತ ಶಿರೋಳ, ಶಿವಲಿಂಗ ಜುಟ್ನಟ್ಟಿ, ವೀರೇಶ ಆಸಂಗಿ, ಮಹಾದೇವ ಮರೆಗುದ್ದಿ, ಸುರೇಶ ಗೊಲಬಾಂವಿ, ಶಿವಾನಂದ ಬಿದರಿ, ಮಹಾಂತೇಶ ಘಟ್ನಟ್ಟಿ, ಎಸ್.ಬಿ ಮಠಗಾರ, ಮಹಾದೇವ ದಡುತಿ, ಸಿದ್ದು ದಡುತಿ, ಸುರೇಶ ಕೋಲಾರ, ಸುರೇಶ ಹೊಸೂರ್, ಅರ್ಜುನ ಆನೆಪ್ಪಗೋಳ, ಪ್ರಭು ಖೋತ ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಮಹಾಂತೇಶ ಫನಸಲಕರ ನಿರೂಪಿಸಿ ವಂದಿಸಿದರು. ಫೌಂಡೇಶನ್ ವತಿಯಿಂದ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಕೋಟ್..ಪ್ರತಿ ವರ್ಷ ನನ್ನ ತಂದೆ - ತಾಯಿ ಪುಣ್ಯಾರಾಧನೆ ನಿಮಿತ್ತ ಬಡವರ ಸೇವೆ ಮಾಡುತ್ತಿದ್ದೇನೆ. ಬಡವರ ಸೇವೆ ಮಾಡಲು ನನಗೆ ದೇವರು ಕೊಟ್ಟ ಚಿಕ್ಕ ಅವಕಾಶಕ್ಕಾಗಿ ದೇವರಿಗೆ ಋಣಿಯಾಗಿರುವೆ.
ಚನಬಸು ಹುರಕಡ್ಲಿ, ಅಧ್ಯಕ್ಷರು ಹುರಕಡ್ಲಿ ಫೌಂಡೇಶನ ಮಹಾಲಿಂಗಪುರ.