ಸಾರಾಂಶ
ಪುರಸಭೆಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಪೌರ ಕಾರ್ಮಿಕರು ಸೇರಿ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಿ ಕಸವನ್ನು, ಗಿಡಗಂಟಿಗಳನ್ನು ತೆರವುಗೊಳಿಸಿದರು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಪುರಸಭೆ ವತಿಯಿಂದ ಸ್ವಚ್ಛ ಭಾರತ್ ಅಭಿಯಾನದ ಪ್ರಯುಕ್ತ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.ಪುರಸಭೆಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಪೌರ ಕಾರ್ಮಿಕರು ಸೇರಿ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಿ ಕಸವನ್ನು, ಗಿಡಗಂಟಿಗಳನ್ನು ತೆರವುಗೊಳಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ವಿರಾಜಪೇಟೆ ಶಾಸಕ ಎ.ಎಸ್. ಪೊನ್ಬಣ್ಣ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಜನರ ಮನಸ್ಸು ಮತ್ತು ಅರೋಗ್ಯ ಸ್ವಚ್ಛವಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಸ್ವಚ್ಛತೆಯೇ ಸೇವೆ ಎಂಬ ಘೋಷ ವಾಕ್ಯದೊಂದಿಗೆ ಸ್ವಯಂಪ್ರೇರಿತವಾಗಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರಯತ್ನಪಡಬೇಕು ಎಂದು ತಿಳಿಸಿದರು.ನಂತರ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡು ಪಾಳು ಬಿದ್ದಿರುವ ಅಂಗಡಿ ಮಳಿಗೆಗಳು ಹಾಗೂ ಸಂಪೂರ್ಣವಾಗಿ ಶಿಥಿಲಗೊಂಡಿರುವ ತರಕಾರಿ ಮಾರುಕಟ್ಟೆ ಹಾಗೂ ಒಣ ಮೀನು ಮಾರುಕಟ್ಟೆಯನ್ನು ಪರಿಶೀಲಿಸಿದರು.
ಈ ಸಂದರ್ಭ ಪುರಸಭೆ ಅಧ್ಯಕ್ಷರಾದ ಮನೆಯಪಂಡ ದೇಚಮ್ಮ ಕಾಳಪ್ಪ, ವಿರಾಜಪೇಟೆ ತಹಸೀಲ್ದಾರ್ ರಾಮಚಂದ್ರ, ಪುರಸಭೆಯ ಮುಖ್ಯ ಅಧಿಕಾರಿ ಚಂದ್ರಕುಮಾರ್, ಉಪಾಧ್ಯಕ್ಷರಾದ ಪಸಿಯಾ ತಬಸ್ಸಂ, ಸದಸ್ಯರಾದ ಜಲೀಲ್ ಅಹ್ಮದ್, ರಜನಿಕಾಂತ್, ರಂಜಿ ಪೂಣಚ್ಚ, ರಾಜೇಶ್ ಪದ್ಮನಾಭ, ಮಹದೇವ್, ಮಹಮ್ಮದ್ ರಾಫಿ, ನಾಮ ನಿರ್ದೇಶನ ಸದಸ್ಯರಾದ ದಿನೇಶ್, ಹಮೀದ್, ಪುರಸಭೆ ಕಚೇರಿ ವ್ಯವಸ್ಥಾಪಕರಾದ ಸುಜಾತ, ಪ್ರಭಾರ ಆರೋಗ್ಯ ನಿರೀಕ್ಷಕರಾದ ಕೋಮಲ, ಪ್ರಥಮ ದರ್ಜೆ ಸಹಾಯಕರಾದ ಸುಲೇಖಾ ಸೇರಿದಂತೆ ಪುರಸಭೆಯ ಸಿಬ್ಬಂದಿ, ಪೌರ ಕಾರ್ಮಿಕರು ಹಾಜರಿದ್ದರು.