ಹಳಿಯಾಳ ತಾಲೂಕು ಮಟ್ಟದ ಸ್ವಚ್ಛ ಹಳಿಯಾಳ ಸ್ವಾಸ್ಥ್ಯ ಹಳಿಯಾಳ ಅಭಿಯಾನದ ಹಿನ್ನೆಲೆಯಲ್ಲಿ ಪಟ್ಟಣದ ಪುರಭವನದಲ್ಲಿ ಶುಕ್ರವಾರ ಸಂಜೆ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಮಾರ್ಗದರ್ಶನ ನೀಡಿದರು.

ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದಾದ್ಯಂತ ಗ್ರಾಮ ಮಟ್ಟದಿಂದ ಹಿಡಿದು, ಗ್ರಾಪಂ ಹಾಗೂ ಪಟ್ಟಣ ಮತ್ತು ನಗರದ ವರೆಗೂ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ಮಾದರಿ ಸ್ವಚ್ಛತಾ ಕಾರ್ಯ ನಡೆಯಬೇಕು ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.

ಪಟ್ಟಣದ ಪುರಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ ಹಳಿಯಾಳ ತಾಲೂಕು ಮಟ್ಟದ ಸ್ವಚ್ಛ ಹಳಿಯಾಳ ಸ್ವಾಸ್ಥ್ಯ ಹಳಿಯಾಳ ಅಭಿಯಾನದ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಒಳ್ಳೆಯ ವಿಚಾರಗಳು ಬರುತ್ತವೆ. ಸ್ವಚ್ಛತೆಯ ಇನ್ನೊಂದು ರೂಪವೇ ದೇವರು ಎಂದರು.

ಈ ಸ್ವಚ್ಛತಾ ಕಾರ್ಯವನ್ನು ಮೊದಲಿಗೆ ನಮ್ಮ ಮನೆಯಿಂದಲೇ ಆರಂಭಿಸೋಣ. ಮೊದಲು ನಮ್ಮ ಮನೆ, ನಮ್ಮ ಮನೆಯ ಪರಿಸರ, ನಮ್ಮ ಓಣಿ, ಬಡಾವಣೆ, ತದನಂತರ ನಮ್ಮ ಊರು... ಹೀಗೆ ಸ್ವಚ್ಛತಾ ಕಾರ್ಯವು ನಡೆಯಲಿ. ಅಧಿಕಾರಿಗಳು ತಮ್ಮ ಇಲಾಖೆಯ ಕಚೇರಿ ಕಟ್ಟಡ, ಪರಿಸರ, ಆವರಣವನ್ನು ಶುಚಿಯಾಗಿಡಬೇಕು. ಪಟ್ಟಣ ಹಾಗೂ ಗ್ರಾಮಾಂತರ ಮಟ್ಟದಲ್ಲಿ ನಡೆಯುವ ಸ್ವಚ್ಛತಾ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದರು.

ಮಾ. 30ರಂದು ಬೆಳಗ್ಗೆ 6 ಗಂಟೆಗೆ ಸ್ವಚ್ಛತಾ ಅಭಿಯಾನ ಆರಂಭಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಆರ್ಥಿಕ ನೆರವು: ಸ್ವಚ್ಛತಾ ಕಾರ್ಯಕ್ಕಾಗಿ ಬೇಕಾದ ಸಾಮಗ್ರಿಗಳಿಗಾಗಿ ₹1 ಲಕ್ಷದ ಒಂದು ಸಾವಿರ ನೀಡುವುದಾಗಿ ಆರ್‌.ವಿ. ದೇಶಪಾಂಡೆ ಘೋಷಿಸಿದರು. ಶಾಸಕರೊಂದಿಗೆ ಕೆಲವು ಮುಖಂಡರು ಆರ್ಥಿಕ ನೆರವು ಘೋಷಿಸಿದರು,

ಕ್ರಮವಾಗಲಿ: ಸಭೆಯಲ್ಲಿ ಪಾಲ್ಗೊಂಡ ಸಾರ್ವಜನಿಕರ ಸಲಹೆಯಂತೆ ಸಾರ್ವಜನಿಕ ಮಾರ್ಗದಲ್ಲಿ, ಸರ್ಕಾರಿ ಜಮೀನಿನಲ್ಲಿ ವರ್ಷಾನುಗಟ್ಟಲೇ ವಾಹನ ನಿಲುಗಡೆ ಮಾಡುವುದನ್ನು ನಿರ್ಬಂಧಿಸಬೇಕು. ಬಡಾವಣೆಯಲ್ಲಿ ಖಾಲಿಯಿರುವ ನಿವೇಶನಗಳನ್ನು ಶುಚಿಗೊಳಿಸದೇ ಇದ್ದರೆ ಅವರ ಮೇಲೆ ದಂಡ ಆಕರಿಸಬೇಕು ಎಂದು ಶಾಸಕರು ಪುರಸಭಾ ಮುಖ್ಯಾಧಿಕಾರಿಗೆ ಸೂಚಿಸಿದರು.

ನಿರ್ವಹಣೆ: ಸ್ವಚ್ಛತಾ ಕಾರ್ಯದ ನಿರ್ವಹಣೆಯ ಜವಾಬ್ದಾರಿಯನ್ನು ತಹಸೀಲ್ದಾರ್‌ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಅವರಿಗೆ ವಹಿಸಲಾಯಿತು. ಉಳಿದಂತೆ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು ಎಂದು, ಗ್ರಾಪಂ ಮಟ್ಟದಲ್ಲಿ ಪಿಡಿಒಗಳು ಸ್ವಚ್ಛತಾ ಕಾರ್ಯದ ನಿರ್ವಹಣೆ ಮಾಡಬೇಕು ಎಂದು ತೀರ್ಮಾನಿಸಲಾಯಿತು.

ಹಳಿಯಾಳ ತಾಲೂಕಿನ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳ ಮುಖ್ಯೋಧ್ಯಾಪಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸೊಸೈಟಿಗಳ ಕಾರ್ಯದರ್ಶಿಗಳು, ಸಂಘ-ಸಂಸ್ಥೆಗಳು, ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.