ಮುಟ್ಟಿನ ಸಮಯದಲ್ಲಿ ಸ್ವಚ್ಛತೆಯಿಂದ ಸುಸ್ಥಿರ ಜೀವನ ಸಾಧ್ಯ

| Published : Mar 16 2024, 01:54 AM IST

ಸಾರಾಂಶ

ಮುಟ್ಟಿನ ಸಂದರ್ಭದಲ್ಲಿ ಬಟ್ಟೆ ನ್ಯಾಪ್‌ಕಿನ್ ಅಥವಾ ಮುಟ್ಟಿನ ಕಪ್ ಬಳಕೆ ಹೆಚ್ಚು ಸೂಕ್ತ. ಮುಟ್ಟಿನ ಕಪ್ ಬಳಸುವುದರಿಂದ ಆರೋಗ್ಯ ಹಾಗೂ ಪರಿಸರ ಕಾಪಾಡಬಹುದು.

ಹುಬ್ಬಳ್ಳಿ:

ಮುಟ್ಟಿನ ಸಂದರ್ಭದಲ್ಲಿ ಬಟ್ಟೆ ನ್ಯಾಪ್‌ಕಿನ್ ಅಥವಾ ಮುಟ್ಟಿನ ಕಪ್ ಬಳಕೆ ಹೆಚ್ಚು ಸೂಕ್ತ. ಮುಟ್ಟಿನ ಕಪ್ ಬಳಸುವುದರಿಂದ ಆರೋಗ್ಯ ಹಾಗೂ ಪರಿಸರ ಕಾಪಾಡಬಹುದು ಎಂದು ಗಂಗಮ್ಮ ಮೋದಿ ಅಭಿಪ್ರಾಯಪಟ್ಟರು.ಇಲ್ಲಿನ ಸರ್ಕಾರಿ ಕಿರಿಯ ತಾಂತ್ರಿಕ ಬಾಲಕಿಯರ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈರ್ಮಲ್ಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಟ್ಟೆ ನ್ಯಾಪಕಿನ್‌ನ ಬಳಕೆ ಮಾಡುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಬಾಲ್ಯಾವಸ್ಥೆ, ಪ್ರೌಢಾವಸ್ಥೆ, ಕಿಶೋರಾವಸ್ಥೆ ಮೂರು ಹಂತದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಬದಲಾವಣೆ ಹೊಂದುತ್ತಾರೆ. ಕಿಶೋರಾವಸ್ಥೆಯ ಹಂತದಲ್ಲಿ ದೇಹದಲ್ಲಾಗುವ ಬದಲಾವಣೆ, ಮುಟ್ಟಿನ ದಿನಗಳಲ್ಲಿ ಬಳಸುವ ವಸ್ತುಗಳು, ಅದರಿಂದಾಗುವ ಅನುಕೂಲ ಮತ್ತು ಅನನುಕೂಲತೆಗಳು, ಅದರ ಸುರಕ್ಷತೆ ಬಗ್ಗೆ ಹೆಣ್ಣು ಮಕ್ಕಳ ಜತೆಗೆ ಸಂವಾದ ನಡೆಸಿದರು.

ಮುಟ್ಟು ಒಂದು ನೈಸರ್ಗಿಕ ಪ್ರಕ್ರಿಯೆ ಮತ್ತು ಸಹಜ. ಈ ಸಂದರ್ಭದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಬಹುಮುಖ್ಯ. ಆದರೆ, ಪ್ರಸ್ತುತ ದಿನದಲ್ಲಿ ಹೆಣ್ಣು ಮಕ್ಕಳು ಅದರ ಬಗ್ಗೆ ಮಾತನಾಡಲು ಸಹ ಹಿಂಜರಿಯುತ್ತಾರೆ ಎಂದರು.

ಸ್ಯಾನಿಟರಿ ನ್ಯಾಪ್‌ಕಿನ್‌ಗಳಲ್ಲಿ ಪ್ಲಾಸ್ಟಿಕ್‌ ಅಂಶವಿದ್ದು, ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೆಣ್ಣು ಮಕ್ಕಳಲ್ಲಿ ಪಿಸಿಒಡಿ, ಪಿಸಿಒಸಿ ಎಂಬ ಮುಟ್ಟಿನ ಸಂಬಂಧಿತ ಕಾಯಿಲೆಗಳು, ಬಂಜೆತನ, ಶಿಲೀಂಧ್ರಗಳ ಸೋಂಕು ಉಂಟಾಗುತ್ತದೆ. ಹಾಗೆ ನ್ಯಾಪ್‌ಕಿನ್‌ಗಳನ್ನು ನಾಶ (ಡಿಸ್‌ಪೋಸ್) ಮಾಡುವುದು ಕಷ್ಟ, ಪರಿಸರಕ್ಕೂ ಹಾನಿಕಾರಕ ಹೌದು ಎಂದರು.

ಈ ವೇಳೆ ಶಾಲಾ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಯಾರೀ ಗಂಗಮ್ಮ?

ಹುಬ್ಬಳ್ಳಿಯ ಗಂಗಮ್ಮ ಮೋದಿ, ಬಿಎಸ್ಸಿ ಪದವೀಧರೆ. ಎಲ್ಲರಿಗೂ ಮುಟ್ಟಿನ ಅರಿವು ಮೂಡಿಸಲೆಂದೆ ಸರ್ಕಾರಿ ಉದ್ಯೋಗ ತ್ಯಜಿಸಿ, ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.