ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದಲ್ಲಿ ಆರು ಎಕರೆ ಪ್ರದೇಶದಲ್ಲಿ ಬೆಸ್ಕಾಂ ಕಚೇರಿ ಇದ್ದರೂ ಅದರ ಆವರಣದ ಸುತ್ತಮತ್ತಲ ಸ್ಥಳ ಪಾರ್ಥೇನಿಯಂ, ಗಿಡಗಂಟಿಗಳಿಂದ ಆವರಿಸಿದೆ. ಇಡೀ ಪ್ರದೇಶವನ್ನು ಮೊದಲು ಸ್ವಚ್ಛಗೊಳಿಸುವ ಅಗತ್ಯವಿದೆ.ಕಚೇರಿ ಸುತ್ತಮುತ್ತ ಗಿಡಗಂಟಿಗಳಿಂದಾಗಿ ಹಾವುಗಳು, ಹಂದಿಗಳ ತಾಣವಾಗಿದ್ದು ಕಚೇರಿಗೆ ಬರುವ ನೌಕರರು ಮತ್ತು ಸಾರ್ವಜನಿರಿಗೆ ಭೀತಿ ಹುಟ್ಟಿಸುವಂತಿದೆ. ಅಲ್ಲದೆ ಬೆಸ್ಕಾಂ ಕಚೇರಿ ಪ್ರದೇಶದಲ್ಲಿರುವ ವಸತಿಗೃಹಗಳು 50 ವರ್ಷಕ್ಕೂ ಹಿಂದೆ ನಿರ್ಮಾಣವಾಗಿದ್ದು ಸಂಪೂರ್ಣ ಶಿಥಿಲಗೊಂಡಿವೆ. ಇಲ್ಲಿ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ವಾಸಿಸುತ್ತಿಲ್ಲ. ಪಾಳುಬಿದ್ದ ವಸತಿಗೃಹಗಳಲ್ಲಿ ರಾತ್ರಿವೇಳೆ ಕುಡುಕರ ದರ್ಬಾರ್ ಅಡೆಯುತ್ತದೆ. ಕುಡಿದ ಬಾಟಲಿಗಳನ್ನು ಅಲ್ಲಯೇ ಎಸೆಯುತ್ತಾರೆ. ಒಮ್ಮೊಮ್ಮೆ ಕುಡುಕರು ದಾಂದಲೆ ಮಾಡುವುದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತದೆ.ಸಿಬ್ಬಂದಿಗೆ ಮನೆ ನಿರ್ಮಿಸಲಿ
ಎಲ್ಲ ಸಿಬ್ಬಂದಿ ಸ್ವಂತ ಅಥವಾ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಕರೆ ನೀಡಿದ ತಕ್ಷಣ ಬರಲು ಕಷ್ಟವಾಗುತ್ತದೆ. ನಿಗಮದ ಸಾಕಷ್ಟು ಭೂಮಿ ಇದೆ, ಒಂದು ಬಹುಮಹಡಿ ಕಟ್ಟಡ ನಿರ್ಮಾಣವಾದರೆ ಅಧಿಕಾರಿಗಳು, ಸಿಬ್ಬಂದಿ ಒಂದೆಡೆ ಉಳಿದು ಜನರಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತಿತ್ತು.ಪಾಳುಬಿದ್ದ ಗಣೇಶನದೇವಾಲಯಬೆಸ್ಕಾಂ ಕಚೇರಿ ಆವಣದಲ್ಲಿರುವ ಗಣೇಶನ ದೇವಸ್ಥಾನ ಪಾಳುಬಿದ್ದಿದೆ. ಹಲವು ವರ್ಷಗಳಿಂದ ಇಲ್ಲಿ ಗಣೇಶ ಪೂಜೆಯನ್ನೇ ಕಾಣದೆ ಅನಾಥನಾಗಿದ್ದಾನೆ. ಈ ದೇವಾಲಯವು ಕಳೆದ ಕೆಲವುವರ್ಷಗಳಿಂದ ಸರಿಯಾದ ನಿರ್ವಹಣೆಇಲ್ಲದೆ ಪಾಳುಬಿದ್ದಿದೆ. ಈ ದೇವಾಲಯವನ್ನು ೨೪ ವರ್ಷಗಳ ಹಿಂದೆ ಬೆಸ್ಕಾಂಯೂನಿಯನ್ ಕಾರ್ಯದರ್ಶಿಯಾದ ಗಂಗಾಧರಪ್ಪ,ವೆಂಕಟಪ್ಪ ರವರು ಪ್ರತಿಷ್ಠಾಪಿಸಿದ್ದರು. ಆದರೆ ನಿರ್ವಹಣೆ ಇಲ್ಲದೆ ದೇವಾಲಯ ಮೂಲೆಗುಂಪಾಗಿದೆ.
ಬೆಸ್ಕಾಂ ಕಚೇರಿ ಪ್ರದೇಶವನ್ನು ಸ್ವಚ್ಛಗೊಳಿಸಲು ಮತ್ತು ದೇವಾಲಯ ಅಭಿವೃದ್ಧಿಗೆ ಬೆಸ್ಕಾಂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟವರು ದೇವಾಲಯದ ಅಭಿವೃದ್ಧಿ ಮಾಡಬೇಕು ಎಂದು ಸ್ಥಳೀಯ ವಿಶ್ವ ಹಿಂದೂ ಪರಿಷತ್‌ನ ಹರೀಶ್ ಒತ್ತಾಯಿಸಿದ್ದಾರೆ.ಎಇ ಪರಮೇಶ್ವರ್ ಏನಂತಾರೆ?
ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಎಂಜಿನಿಯರ್(ಎಇ) ಪರಮೇಶ್ವರ್, ಪ್ರಸ್ತುತ ಈ ಶಾಖೆಯು ಉಪ-ವಿಭಾಗವಾಗಿದ್ದು, ವಿಭಾಗಕ್ಕೆ ಮೇಲ್ದರ್ಜೆಗೇರಿಸಲು ಪತ್ರವ್ಯವಹಾರನಡೆದಿದೆ. ಶಿಥಿಲಕಟ್ಟಡಗಳ ನೆಲಸಮಮಾಡಲು ಸಿವಿಲ್ ಇಂಜಿನಿಯರ್ ಅಧಿಕಾರಿಗಳ ಗಮನಕ್ಕೆತರುತ್ತೇವೆ. 2 ವರ್ಷಗಳ ಹಿಂದೆಯಷ್ಟೇ 3 ಅಂತಸ್ತಿನ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ದೊರೆತಿದೆ. 20 ದಿನಗಳ ಹಿಂದೆ ಮಣ್ಣಿನಪರೀಕ್ಷೆ ನಡೆದಿದೆ, ಆದಷ್ಟು ಬೇಗನೆ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ ಎಂದರು.