ಸಾರಾಂಶ
ರಾಮನಗರ: ಪೌರ ಸೇವಾ ನೌಕರರು ಒಗ್ಗಟ್ಟಿನಿಂದ ನನ್ನ ಜೊತೆ ನಿಂತಿದ್ದಾರೆ. ನಿಮ್ಮ ಜೊತೆ ನಾನಿದ್ದೇನೆ. ನಗರ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಪೌರಕಾರ್ಮಿಕರು ಮಾತ್ರವಲ್ಲ ನಮ್ಮೆಲ್ಲರ ಮೇಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಗರಸಭೆಯಲ್ಲಿ ಅಧಿಕಾರಿಗಳು, ಪೌರ ಕಾರ್ಮಿಕರೆಲ್ಲರೂ ನಮ್ಮ ಕುಟುಂಬವಿದ್ದಂತೆ. ಹಾಗಾಗಿ ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ಅರಿತು ಕೆಲಸ ಮಾಡಿದರೆ ಹಲವು ಸುಧಾರಣೆಗಳನ್ನು ತರಬಹುದು. ಆಗ ಸಮಾಜ ಮತ್ತು ನಗರದ ಜನರಿಗೆ ನಮ್ಮ ಮೇಲೆ ಹೆಚ್ಚು ವಿಶ್ವಾಸ ಮೂಡುತ್ತದೆ ಎಂದರು.ನಗರಸಭೆ ಸ್ಥಳೀಯ ಸರ್ಕಾರವಾಗಿದ್ದು, ಚುನಾವಣೆ ಸಮಯದಲ್ಲಿ ನಗರದ ಸಮಸ್ಯೆಗಳ ಬಗ್ಗೆ ಜನರ ಗಮನ ಸೆಳೆದಿದ್ದೆವು. ನಗರದಲ್ಲಿ ಶೇಕಡ 80ರಷ್ಟು ಶ್ರಮಿಕರಿದ್ದಾರೆ. ಅವರಿಗೆ ನಗರಸಭೆಯ ಸವಲತ್ತುಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಲಭ್ಯವಾಗುವ ಸಂಪನ್ಮೂಲದಲ್ಲಿ ಅಭಿವೃದ್ಧಿ, ಪಾರ್ಕ್, ಕುಡಿಯುವ ನೀರು ಸೇರಿದಂತೆ ಹಲವು ವಲಯವಾರು ಕೆಲಸ ಮಾಡಬೇಕಿದೆ. 1996 ರಿಂದಲು ಪೌರ ಸೇವಾ ನೌಕರರು ಒಗ್ಗಟ್ಟಿನಿಂದ ನನ್ನ ಜೊತೆ ನಿಂತಿದ್ದಾರೆ. ನಿಮಗೆ ನಾನು ಸದಾ ಬೆನ್ನೆಲುಬಾಗಿ ಇರುತ್ತೇನೆ. ನಾವಿಬ್ಬರು ಕೈಜೋಡಿಸಿ ನಗರದ ಸ್ವಚ್ಛತೆ ಕಾಪಾಡೋಣ. ಸರ್ಕಾರದ ವಿಶೇಷ ಅನುದಾನ ತಂದು ಪಕ್ಷಾತೀತವಾದ ನೆರವು ತಂದು ನಗರವನ್ನು ಅಭಿವೃದ್ಧಿ ಮಾಡೋಣ ಎಂದು ಕೆ.ಶೇಷಾದ್ರಿ ಹೇಳಿದರು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜು, ಸಮಾಜದ ಕಟ್ಟಕಡೆ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಕೆ.ಶೇಷಾದ್ರಿ ಮಾಡುತ್ತಾರೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಅವರು ನಗರಸಭೆಯ ಅಧ್ಯಕ್ಷರಾಗಿದ್ದಾರೆ. ನಮ್ಮೆಲ್ಲರ ಪ್ರೀತಿಯನ್ನು ಒಪ್ಪಿ ಅಭಿನಂದನೆ ಸ್ವೀಕರಿಸುತ್ತಿರುವುದು ಸಂತಸ ಎಂದರು.ನಗರಸಭೆ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಅಧ್ಯಕ್ಷರ ವೇಗಕ್ಕೆ ನಾವು ಕೆಲಸ ಮಾಡೋಣ, ಆಗ ರಾಮನಗರ ಅಭಿವೃದ್ಧಿ ಯಾಗಲು ಸಾಧ್ಯವಾಗಲಿದೆ. ಅಧ್ಯಕ್ಷರಿಗೆ ನಾವೆಲ್ಲರೂ ಬಲಕೊಡೋಣ, ವೃಂದ ಮತ್ತು ನೇರ ನೇಮಕಾತಿಗೆ ಅಧ್ಯಕ್ಷರು ಹೆಚ್ಚು ಒತ್ತು ನೀಡಿ ಅನ್ಯಾಯವಾಗುತ್ತಿರುವವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ನಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ನೆರವು, ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ನೇರ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಮಾತನಾಡಿ, ಶೇಷಾದ್ರಿ ಅವರು ಉತ್ತಮ ಆಡಳಿತ ಮಾರ್ಗದರ್ಶಕರು. ನಮ್ಮ ನೋವುಗಳಿಗೆ ಸ್ಪಂದಿಸುವ ವ್ಯಕ್ತಿ ಅಧ್ಯಕ್ಷರಾಗಿರುವುದು ನಮ್ಮೆಲ್ಲರ ಪುಣ್ಯ, ಅವರು ಇನ್ನೂ ಉನ್ನತ ಹುದ್ದೆ ಅಲಂಕರಿಸಲಿ. ಅವರ ಸೂಚನೆಯಂತೆ ನಾವೆಲ್ಲರು ಕೆಲಸ ಮಾಡುತ್ತೇವೆ ಎಂದು ಹೇಳಿದರು.ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ನರಸಿಂಹರಾಜು ಮಾತನಾಡಿ, ಅಧ್ಯಕ್ಷರ ಆಶಯ ಮತ್ತು ನಗರದ ಜನರು ನಿಮ್ಮ ಮೇಲೆ ಇಟ್ಟಿರುವ ನಿರೀಕ್ಷೆ ಯನ್ನು ಸಾಕಾರ ಮಾಡಲು ನಾವೆಲ್ಲರೂ ನಿಮ್ಮ ಕೈ ಜೋಡಿಸುವುದಾಗಿ ಅಧ್ಯಕ್ಷರಿಗೆ ನೌಕರರ ಪರವಾಗಿ ಭರವಸೆ ನೀಡಿದರು.
ನಗರಸಭೆಗೆ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಕೆ.ಶೇಷಾದ್ರಿ( ಶಶಿ) ಮತ್ತು ಉಪಾಧ್ಯಕ್ಷೆ ಆಯಿಷಾಬಾನು ಅವರನ್ನು ನಗರಸಭೆ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಗರಸಭಾ ಸದಸ್ಯ ಮೋಹಿನ್ ಖರೇಷಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕೊಲ್ಲಾಪುರಿ, ನೇರ ಪೌರ ನೌಕರರ ಸಂಘದ ಕಾರ್ಯದರ್ಶಿ ಲಕ್ಷ್ಮಿ, ಅಧಿಕಾರಿಗಳಾದ ನಿರ್ಮಲಾ, ನಟರಾಜುಗೌಡ, ನಗರಸಭೆ ಸಿಬ್ಬಂದಿಗಳಾದ ತಸ್ಲೀಂ, ಧನಲಕ್ಷ್ಮಿ, ಪುಟ್ಟಸ್ವಾಮಿ, ರಾಮಣ್ಣ, ದೇವೇಂದ್ರ, ಮೋಹನ, ಮಾರಪ್ಪ, ಗುರುಸ್ವಾಮಿ, ವೆಂಕಟರಮಣ, ನರಸಿಂಹ, ಚಂದ್ರು ಸೇರಿದಂತೆ ಪೌರ ಸೇವಾ ನೌಕರರು ಹಾಜರಿದ್ದರು.31ಕೆಆರ್ ಎಂಎನ್ 2.ಜೆಪಿಜಿ
ರಾಮನಗದ ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿದರು.