ಸಾರಾಂಶ
ರಾಣಿಬೆನ್ನೂರು: ನಗರದ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.ಇಲ್ಲಿಯ ನಗರಸಭೆ ಆವರಣದಲ್ಲಿ ಶನಿವಾರ 2022-23ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ನಗರಸಭೆ ಒಳಚರಂಡಿ ನಿರ್ವಹಣೆಗಾಗಿ 6 ಸಾವಿರ ಲೀಟರ್ ಸಾಮರ್ಥ್ಯವುಳ್ಳ ಜೆಟ್ಟಿಂಗ್ ಮತ್ತು ಸೆಕ್ಷನ್ ಯಂತ್ರೋಪಕರಣ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೆಳೆಯುತ್ತಿರುವ ನಗರದ ಸ್ವಚ್ಛತೆ ಮುಖ್ಯವಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಒಳಚರಂಡಿಯ ನಿರ್ವಹಣೆಗಾಗಿ ಈ ಮಶಿನ್‌ನ್ನು ಖರೀದಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಸಣ್ಣ ಪ್ರದೇಶದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಇನ್ನೊಂದು ಜಟ್ಟಿಂಗ್ ಮಶಿನ್ ಖರೀದಿಸಲಾಗುವುದು ಎಂದರು.ಇದೇ ಸಮಯದಲ್ಲಿ ನಗರದ ಹೊರವಲಯದ ದೇವರಗುಡ್ಡ ರಸ್ತೆಯಲ್ಲಿ 2023-24ನೇ ಸಾಲಿನ ನಗರಸಭೆ ಅನುದಾನ ರು. 68ಲಕ್ಷ ವೆಚ್ಚದಲ್ಲಿ ಒಳಚರಂಡಿ ಪೈಪ್‌ಲೈನ್ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿಗೆ ಶಾಸಕ ಪ್ರಕಾಶ ಕೋಳಿವಾಡ ಭೂಮಿ ಪೂಜೆ ನೆರವೇರಿಸಿದರು.ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಮಲ್ಲಿಕಾರ್ಜುನ ಅಂಗಡಿ, ಶಶಿಧರ ಬಸೇನಾಯ್ಕರ್, ಮಲ್ಲೇಶಪ್ಪ ಮದ್ಲೇರಿ, ಮಧು ಕೋಳಿವಾಡ, ನಗರಸಭೆ ಆಯುಕ್ತ ಫಕ್ಕಿರಪ್ಪ ಇಂಗಳಗಿ ಹಾಗೂ ನಗರಸಭೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.