ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಭೈರವೇಶ್ವರ ಈಶ್ವರ ಸ್ವಾಮಿ ದೇವಾಲಯದ ಶ್ರದ್ಧಾಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಸ್ವಸಹಾಯ ಸಂಘದ ಸದಸ್ಯರು, ಊರಿನ ಮುಖಂಡರು, ಮೇಲ್ವಿಚಾರಕರಾದ ನವೀನ್ ಕುಮಾರ್ ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಗಳು ಉತ್ಸಾಹದಿಂದ ಭಾಗವಹಿಸಿದರು.ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ಸದಾ ಮುಂಚೂಣಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ಧಾರ್ಮಿಕ ಕೇಂದ್ರಗಳ ಸ್ವಚ್ಛತೆಯ ಮೂಲಕ ಸಮುದಾಯದಲ್ಲಿ ಶುಚಿತ್ವದ ಜಾಗೃತಿ ಮೂಡಿಸುವ ಗುರಿಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಪ್ರತಿ ವರ್ಷ ಆಗಸ್ಟ್ ತಿಂಗಳ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜನವರಿ ತಿಂಗಳ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮವನ್ನು ಎಸ್‌ಕೆಡಿಆರ್‌ಡಿಪಿ ನಡೆಸುತ್ತದೆ. ಈ ಬಾರಿ ಜಕ್ಕನಹಳ್ಳಿಯ ಬೈರವೇಶ್ವರ ಈಶ್ವರ ಸ್ವಾಮಿ ದೇವಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಗ್ರಾಮದ ಧಾರ್ಮಿಕ ಮತ್ತು ಸಾಮಾಜಿಕ ಪರಿಸರವನ್ನು ಶುದ್ಧಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಾಲಯದ ಆವರಣ, ಒಳಾಂಗಣ, ಗರ್ಭಗುಡಿ ಸುತ್ತಲಿನ ಪ್ರದೇಶವನ್ನು ಸ್ವಯಂಸೇವಕರು ಶ್ರದ್ಧೆಯಿಂದ ಸ್ವಚ್ಛಗೊಳಿಸಿದರು. ಗ್ರಾಮಸ್ಥರ ಸಹಭಾಗಿತ್ವದಿಂದ ಈ ಕಾರ್ಯಕ್ರಮವು ಜನರಲ್ಲಿ ಶುಚಿತ್ವದ ಮಹತ್ವವನ್ನು ಮನವರಿಕೆ ಮಾಡಿತು. ಸ್ವಸಹಾಯ ಸಂಘದ ಸದಸ್ಯರು ತಮ್ಮ ಒಗ್ಗಟ್ಟಿನ ಮೂಲಕ ಗ್ರಾಮದ ಧಾರ್ಮಿಕ ಕೇಂದ್ರವನ್ನು ಶುದ್ಧವಾಗಿಡುವಲ್ಲಿ ತಮ್ಮ ಕೊಡುಗೆಯನ್ನು ನೀಡಿದರು.ಮೇಲ್ವಿಚಾರಕರಾದ ಶ್ರೀ ನವೀನ್ ಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಶ್ರದ್ಧಾಕೇಂದ್ರಗಳ ಸ್ವಚ್ಛತೆಯ ಮೂಲಕ ಗ್ರಾಮದ ಜನರಲ್ಲಿ ಸಾಮಾಜಿಕ ಜಾಗೃತಿ ಮತ್ತು ಒಗ್ಗಟ್ಟನ್ನು ಬೆಳೆಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ತಿಳಿಸಿದರು. ಇನ್ನೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ರಮೇಶ್, ಶಾಂತರಾಜು ಸಂಘದ ಸದಸ್ಯರು ಒಕ್ಕೂಟದ ಅಧ್ಯಕ್ಷರು ಯಶೋಧ, ಮೇಲ್ವಿಚಾರಕರರು ನವೀನ್ ಕುಮಾರ್ ಮತ್ತು ಸೇವಾ ಪ್ರತಿನಿಧಿಗಳು ರಂಜಿತಾ, ಸೋಮೇಶ್, ಬೇಬಿ, ಅನಿತಾ ಹಾಜರಿದ್ದರು.