ಸಿದ್ದಾಪುರ ಮುಖ್ಯರಸ್ತೆ ಫುಟ್‌ಪಾತ್‌ ಮೇಲಿನ ಅಂಗಡಿ ತೆರವು ಮಾಡಲು ಸೂಚನೆ

| Published : Jan 05 2025, 01:32 AM IST

ಸಿದ್ದಾಪುರ ಮುಖ್ಯರಸ್ತೆ ಫುಟ್‌ಪಾತ್‌ ಮೇಲಿನ ಅಂಗಡಿ ತೆರವು ಮಾಡಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರ ಪಟ್ಟಣದ ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳನ್ನು ತೆರವು ಮಾಡುವಂತೆ ಹಿರಿಯ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಸೂಚಿಸಿದ್ದಾರೆ. ಸಿದ್ದಾಪುರ ಪಪಂ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.

ಸಿದ್ದಾಪುರ: ಪಟ್ಟಣದ ಮುಖ್ಯರಸ್ತೆ ಸೇರಿದಂತೆ ರಾಜಮಾರ್ಗದ ಪುಟ್‌ಪಾತ್‌ನಲ್ಲಿ ಹಣ್ಣು, ಹೂವಿನ ಅಂಗಡಿಗಳು ಹಾಗೂ ಇನ್ನಿತರ ಅಂಗಡಿ ಸಾಮಾನುಗಳನ್ನು ಇಡುತ್ತಿದ್ದು, ಇದರಿಂದ ಸಂಚಾರ ಮಾಡುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಅವುಗಳನ್ನು ತೆರವುಗೊಳಿಸಿ ಎಂದು ಪಪಂ ಹಿರಿಯ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್ ಪಪಂ ಅಧಿಕಾರಿಗಳಿಗೆ ಸೂಚಿಸಿದರು.

ಪಪಂ ಸಭಾಭವನದಲ್ಲಿ ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಪಪಂ ಮುಖ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಪ್ರತಿ ಮಂಗಳವಾರ ಹಾಗೂ ವಾರದ ಸಂತೆಯ ದಿನವಾದ ಬುಧವಾರ ಮಾತ್ರ ಪುಟ್‌ಪಾತ್‌ನಲ್ಲಿ ಅಂಗಡಿ ಇಡುವುದಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಎಲ್ಲದಿನವೂ ಅಂಗಡಿಗಳನ್ನಿಟ್ಟುಕೊಳ್ಳುತ್ತಿದ್ದಾರೆ. ಈಗಾಗಲೇ ಈ ಕುರಿತು ಸಂಬಂಧಪಟ್ಟ ಅಂಗಡಿಕಾರರಿಗೆ ಸೂಚನೆ ನೀಡಲಾಗಿದ್ದರೂ ಏನೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಜನರ ಅನುಕೂಲಕ್ಕಾಗಿ ಮಾಡಿರುವ ಪುಟ್‌ಪಾತ್ ಇದ್ದೂ ಇಲ್ಲದಂತಾಗಿದೆ ಎಂದು ಕೆ.ಜಿ. ನಾಯ್ಕ ಹಣಜೀಬೈಲ್, ಮಾರುತಿ ಟಿ. ನಾಯ್ಕ, ರವಿಕುಮಾರ ನಾಯ್ಕ ಮತ್ತಿತರ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಎಲ್ಲೆಂದರೆಲ್ಲಿ ಪೋಸ್ಟರ್‌ಗಳನ್ನು ಕಟ್ಟಲಾಗುತ್ತಿದೆ. ಪಪಂ ಅನುಮತಿ ಪಡೆದುಕೊಂಡು ಕಟ್ಟುತ್ತಿದ್ದಾರೋ ಇಲ್ಲವೋ? ಪೋಸ್ಟರ್ ಕಟ್ಟಿದ ಜಾಹೀರಾತಿನ ಹಣ ಕಡಿಮೆ ಇದೆ. ಯಾಕೆ ಹೀಗಾಗುತ್ತಿದೆ? ಈ ಕುರಿತು ಪಪಂ ಮುಖ್ಯಾಧಿಕಾರಿ ಗಮನ ನೀಡಬೇಕು ಎಂದು ಮಾರುತಿ ಟಿ. ನಾಯ್ಕ ಹೊಸೂರು ಹೇಳಿದರು. ಅನುಮತಿ ಪಡೆಯದೇ ಕಟ್ಟಿರುವುದನ್ನು ಹಾಗೂ ಅನುಮತಿ ಪಡೆದು ಅವಧಿ ಮೀರಿರುವುದನ್ನು ತೆರವುಗೊಳಿಸುವಂತೆ ಕೆ.ಜಿ. ನಾಯ್ಕ ಹಣಜೀಬೈಲ್ ಅಧಿಕಾರಿಗಳಿಗೆ ಸೂಚಿಸಿದರು.

ಪಪಂನಿಂದ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳು ಕೆಟ್ಟಿದ್ದು, ಅವುಗಳನ್ನು ದುರಸ್ತಿ ಮಾಡುವುದಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ, ಕಳ್ಳತನ ನಡೆದಾಗ ತೊಂದರೆ ಉಂಟಾಗುತ್ತದೆ ಎಂದು ಗುರುರಾಜ ಶಾನಭಾಗ ಹಾಗೂ ಕೆ.ಜಿ. ನಾಯ್ಕ ಹೇಳಿದರು.

ವಾಹನ ನಿಲುಗಡೆ ಮಾಡುವುದಕ್ಕೆ ಈಗಾಗಲೇ ಜಾಗದ ಸರ್ವೆ ಮಾಡಿ ಟೆಂಡರ್ ಕರೆಯಲಾಗಿದ್ದು, ಒಂದೆರಡು ತಿಂಗಳಲ್ಲಿ ವ್ಯವಸ್ಥೆ ಸರಿಯಾಗಲಿದೆ ಎಂದು ಸದಸ್ಯ ಸುಧೀರ್ ನಾಯ್ಕ ಕೊಂಡ್ಲಿ ಅವರ ಪ್ರಶ್ನೆಗೆ ಮುಖ್ಯಾಧಿಕಾರಿ ಜೆ.ಆರ್. ನಾಯ್ಕ ಉತ್ತರಿಸಿದರು.

ಪಪಂ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್, ನಂದನ ಬೋರಕರ, ವೆಂಕೋಬ ಎನ್.ಜಿ., ಯಶೋದಾ, ಮುಬೀನಾ ಗುರುಕಾರ, ಮಂಜುಳಾ ನಾಯ್ಕ, ಕವಿತಾ ಪ್ರಕಾಶ ಹೆಗಡೆ, ರಾಧಿಕಾ ಕಾನಗೋಡ ಹಾಗೂ ನಾಮನಿರ್ದೇಶಿತ ಸದಸ್ಯರು, ಪಪಂ ಅಧಿಕಾರಿಗಳು ಉಪಸ್ಥಿತರಿದ್ದರು.