ಸಾರಾಂಶ
ಕನಕಪುರ: ನಗರದಾದ್ಯಂತ ಪುಟ್‌ಪಾತ್ ಅಂಗಡಿಗಳಿಂದ ಪಾದಚಾರಿಗಳು ಹಾಗೂ ಕಚೇರಿಗೆ ಬರುವ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸುವಂತೆ ಇಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಸದಸ್ಯರಾದ ವಿಜಯಕುಮಾರ್, ಜಯರಾಮು, ಚಂದ್ರು ಆಗ್ರಹಿಸಿದರು.
ನಗರದಾದ್ಯಂತ ಹೆದ್ದಾರಿ ಹಾಗೂ ತಾಲೂಕು ಕಚೇರಿಗಳ ಮುಂಭಾಗದಲ್ಲಿ ಮಳೆಗಾಲದ ಅಣಬೆಗಳಂತೆ ಫುಟ್‌ಪಾತ್ ಅಂಗಡಿಗಳು ತಲೆಯೆತ್ತಿವೆ. ಇದರಿಂದಾಗಿ ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಈ ಅಕ್ರಮ ಅಂಗಡಿಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.ಸಂಚಾರಿ ಠಾಣೆ ಎಸ್‌ಐ ಮಮತಾ ನಗರಸಭೆ ಸದಸ್ಯರು ನಮ್ಮೊಂದಿಗೆ ಸಹಕರಿಸಿದರೆ ನಾಳೆಯಿಂದಲೇ ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸುವುದಾಗಿ ತಿಳಿಸಿದರು. ನಗರ ಪ್ರದೇಶ ಹಾಗೂ ಬೈಪಾಸ್ ರಸ್ತೆಗಳಲ್ಲಿ ಹೆಚ್ಚಾಗಿರುವ ಪುಂಡರ ಹಾವಳಿ ನಿಯಂತ್ರಿಸಬೇಕು. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಂತಾನಹರಣ ಚಿಕಿತ್ಸೆ ನಡೆಸಿದರೂ ಪ್ರಯೋಜನವಾಗದೇ ನಾಯಿಗಳ ಸಂಖ್ಯೆ ಮಿತಿಮೀರಿದೆ. ಇದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಭಯದಿಂದ ಓಡಾಡುವಂತಾಗಿದೆ. ಇದಕ್ಕೆ ಶಾಶ್ವತವಾದ ಪರಿಹಾರ ಕಂಡುಹಿಡಿಯಬೇಕು. ಇ-ಖಾತೆ ವಿಷಯದಲ್ಲಿ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತ ಒಂದು ವರ್ಷ ಕಳೆದರೂ ಜನತೆಯ ಆಸ್ತಿಯ ದಾಖಲಾತಿಯನ್ನು ಮಾಡದೆ ಕಾಲಹರಣ ಮಾಡುತ್ತಿರುವುದಕ್ಕೆ ಎಲ್ಲಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಕುರುಪೇಟೆ ವಾರ್ಡಿನ ಸದಸ್ಯ ಲೋಕೇಶ್ ಮಾತನಾಡಿ, ನಮ್ಮ ವಾರ್ಡಿನಲ್ಲಿ ಬೀದಿದೀಪ ನಿರ್ವಹಣೆ, ನೀರು ಸರಬರಾಜು ಹಾಗೂ ಕಸ ವಿಲೇವಾರಿ ಕೆಲಸಗಳು ಆಗದೇ ಜನರು ನಮಗೆ ಛೀಮಾರಿ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಜೆಡಿಎಸ್ ಪಕ್ಷದ ಸದಸ್ಯ ಎಂದು ಕೆಲಸ ಮಾಡುತ್ತಿಲ್ಲ ಎಂದು ದೂರಿದರು.ನಗರಸಭೆ ಆಯುಕ್ತ ಎಂ.ಎಸ್.ಮಹದೇವ್ ಮಾತನಾಡಿ, ಕರೋನಾ, ಡೆಂಘೀಯಂತಹ ಸಾಂಕ್ರಾಮಿಕ ರೋಗಗಳ ಸಮಯದಲ್ಲೂ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಪೌರಕಾರ್ಮಿಕರು ಹಗಲಿರುಳು ಉತ್ತಮ ಸೇವೆ ಮಾಡಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರುವುದು ನಮ್ಮ ಕಣ್ಣ ಮುಂದಿದೆ. ಸರ್ಕಾರದಿಂದ ಬರುವ ಅನುದಾನದಲ್ಲಿ ಯಾವುದೇ ತಾರತಮ್ಯವಿಲ್ಲದೆ ನಗರದ ಎಲ್ಲಾ ವಾರ್ಡ್‌ಗಳಲ್ಲೂ ಸಮನಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದು, ಸಣ್ಣ-ಪುಟ್ಟ ದೋಷಗಳಿದ್ದರೆ ನಮ್ಮ ಗಮನಕ್ಕೆ ತಂದರೆ ಅದರ ಕಡೆ ಗಮನ ಹರಿಸುವುದಾಗಿ ಭರವಸೆ ನೀಡಿದರು.
ನಗರಸಭೆ ಉಪಾಧ್ಯಕ್ಷ ಸೈಯದ್ ಸಾಧಿಕ್, ಸದಸ್ಯರಾದ ಮಾಲತಿ ಆನಂದ್, ಸರಳಾ ಶ್ರೀನಿವಾಸ್,ಶೋಭಾ ಹೇಮರಾಜು, ಸುನೀತಾ, ಮೋಹನ್, ಪದ್ಮಮ್ಮ, ಉಮಾ ಪುಟ್ಟಲಕ್ಷ್ಮಮ್ಮ, ಸುಲ್ತಾನ ಭಾನು, ಕಿರಣ್, ವೆಂಕಟೇಶ್, ಮಕ್ಬೂಲ್ ಪಾಷಾ, ನಾಗರಾಜು ಹಾಜರಿದ್ದರು.