ಅವೈಜ್ಞಾನಿಕ ರೋಡ್‌ ಹಂಪ್‌ ತೆರವುಗೊಳಿಸಿ

| Published : Jul 03 2024, 12:15 AM IST

ಸಾರಾಂಶ

ಅವಳಿ ನಗರದಲ್ಲಿ ಅನಧಿಕೃತ ಆಟೋಗಳ ಓಟಾಟ ಹೆಚ್ಚಾಗಿದ್ದು ಜನರಿಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರುಗಳು ಕೇಳಿ ಬಂದಿವೆ. ಸಾರಿಗೆ ಹಾಗೂ ಪೊಲೀಸರು ಅಧಿಕಾರಿಗಳು ಈ ಕುರಿತು ಪರಿಶೀಲಿಸಿ ತುರ್ತು ಕ್ರಮವಹಿಸಬೇಕು.

ಧಾರವಾಡ:

ಅವೈಜ್ಞಾನಿಕವಾಗಿ ರಾಜ್ಯ-ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರೋಡ್‌ ಹಂಪ್‌ ತೆರವುಗೊಳಿಸಬೇಕು. ಈ ಕುರಿತು ಜಿಲ್ಲೆಯಲ್ಲಿ ರಸ್ತೆ ಸಮೀಕ್ಷೆ ನಡೆಸಲು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷೆ, ಜಿಲ್ಲಾಧಿಕಾರಿ ದಿವ್ಯಪ್ರಭು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಮತ್ತು ಜಿಲ್ಲಾ ರಸ್ತೆ ಸಾರಿಗೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಅನುಮತಿ ಇಲ್ಲದೆ ಅನೇಕರು ರಸ್ತೆಗಳ ಮೇಲೆ ಅವೈಜ್ಞಾನಿಕವಾಗಿ ಹಾಕಿರುವ ರೋಡ್‌ ಹಂಪ್‌ನಿಂದ ಅಪಘಾತಗಳಾಗಿ ಸಾವು ಹೆಚ್ಚುತ್ತಿವೆ. ಈ ಕುರಿತು ರಸ್ತೆ ಸಮೀಕ್ಷೆ ಮಾಡಿ ಅನುಮತಿ ಇಲ್ಲದ ರೋಡ್‌ ಹಂಪ್‌ ತೆರವುಗೊಳಿಸಬೇಕು ಎಂದರು.

ಕಳೆದ ಸಭೆಯಲ್ಲಿ ಹುಬ್ಬಳ್ಳಿಯ ಐದು ಸ್ಥಳಗಳಲ್ಲಿ ಆಟೋ ನಿಲ್ದಾಣ ಸ್ಥಾಪಿಸಲು ಸೂಚಿಸಲಾಗಿತ್ತು. ಕೆಲವು ನಿರ್ಮಾಣ ಹಂತದಲ್ಲಿದ್ದು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ, ಅವಳಿ ನಗರದಲ್ಲಿ ಅನಧಿಕೃತ ಆಟೋಗಳ ಓಟಾಟ ಹೆಚ್ಚಾಗಿದ್ದು ಜನರಿಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರುಗಳು ಕೇಳಿ ಬಂದಿವೆ. ಸಾರಿಗೆ ಹಾಗೂ ಪೊಲೀಸರು ಅಧಿಕಾರಿಗಳು ಈ ಕುರಿತು ಪರಿಶೀಲಿಸಿ ತುರ್ತು ಕ್ರಮವಹಿಸಬೇಕು. ಪರವಾನಗಿ ಇಲ್ಲದ ಆಟೋ ಜಪ್ತಿ ಮಾಡಿ ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಉಪ ಪೊಲೀಸ್‌ ಆಯುಕ್ತ ರವೀಶ ಸಿ.ಆರ್. ಮಾತನಾಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ಮಾತನಾಡಿ, 2023ರ ಏ. 1ರಿಂದ 2024ರ ಮಾರ್ಚ್ 31ರ ವರೆಗೆ ಸಂಚಾರ ಹಾಗೂ ಸಾರಿಗೆ ನಿಯಮ ಉಲ್ಲಂಘಿಸಿದ ಒಟ್ಟು 6,941 ಪ್ರಕರಣ ದಾಖಲಿಸಿ ₹ 4.44 ಕೋಟಿ ಹಾಗೂ ಅವಳಿನಗರ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದ ಆಟೋಗಳಿಗೆ ಸಂಬಂಧಿಸಿದಂತೆ ಒಟ್ಟು 1,681 ಪ್ರಕರಣ ದಾಖಲಿಸಿ ₹ 48.08 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಧಿಕಾರಿಗಳಾದ ಭೀಮನಗೌಡ ಪಾಟೀಲ, ಪ್ರಶಾಂತ ಪಿ.ಕೆ., ಪರುಶರಾಮ ರಾಠೋಡ ಇದ್ದರು. ಸಭೆಯಲ್ಲಿ ರಸ್ತೆ ಸುರಕ್ಷತೆ ಕುರಿತ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.