ಸತ್ಯ ಶೋಧನಾ ಸಮಿತಿ ವರದಿ ಆಧಾರದಲ್ಲಿ ತೆರವು: ಎಸಿ ದುರ್ಗಾಶ್ರೀ

| Published : Mar 12 2024, 02:01 AM IST

ಸಾರಾಂಶ

ಇತ್ತೀಚಿಗೆ ಭಾನುವಳ್ಳಿ ಗ್ರಾಮಸ್ಥರು, ಗ್ರಾಪಂ ಸದಸ್ಯರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಿಇಒ, ಎಸ್‌ಪಿ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು.ಸಭೆಯಲ್ಲಿ ಅನಗತ್ಯ ಗೊಂದಲಗಳಿಗೆ ಇತಿಶ್ರೀ ಹಾಡಲು ತಹಸೀಲ್ದಾರ್ ನೇತೃತ್ವದ ಸತ್ಯ ಶೋಧನಾ ಸಮಿತಿ ರಚಿಸಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸಂಗತಿ ವರದಿ ನೀಡಲು ಸೂಚನೆ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಹರಿಹರ

ಸತ್ಯಶೋಧನಾ ಸಮಿತಿ ವರದಿ ಅನ್ವಯ ಭಾನುವಳ್ಳಿ ಗ್ರಾಮದಲ್ಲಿನ ಅನಧಿಕೃತ ನಾಮಫಲಕಗಳು, ದ್ವಾರ ಬಾಗಿಲು ಹಾಗೂ ನಾಮಫಲಕ ತೆರವುಗೊಳಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಇತ್ತೀಚಿಗೆ ಭಾನುವಳ್ಳಿ ಗ್ರಾಮಸ್ಥರು, ಗ್ರಾಪಂ ಸದಸ್ಯರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಿಇಒ, ಎಸ್‌ಪಿ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು.

ಸಭೆಯಲ್ಲಿ ಅನಗತ್ಯ ಗೊಂದಲಗಳಿಗೆ ಇತಿಶ್ರೀ ಹಾಡಲು ತಹಸೀಲ್ದಾರ್ ನೇತೃತ್ವದ ಸತ್ಯ ಶೋಧನಾ ಸಮಿತಿ ರಚಿಸಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸಂಗತಿ ವರದಿ ನೀಡಲು ಸೂಚನೆ ನೀಡಲಾಗಿತ್ತು. ಈ ಸಮಿತಿ ಗ್ರಾಮದಲ್ಲಿ ಅಳವಡಿಸಿರುವ ವಿವಿಧ ಸಮುದಾಯಗಳ ಮಹನೀಯರ ಪುತ್ಥಳಿ ಹಾಗೂ ದ್ವಾರಬಾಗಿಲು ಮತ್ತು ನಾಮಫಲಕಗಳಿಗೆ ಸರ್ಕಾರದ ನಿಯಮದಂತೆ ಅನುಮತಿ ಪಡೆದಿದೆಯೋ ಇಲ್ಲವೋ ಎನ್ನುವುದು ಪರಿಶೀಲನೆ ನಡೆಸಿ ವರದಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿತ್ತು. ವರದಿ ಆಧಾರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ನಾಮಫಲಕ, ದ್ವಾರಬಾಗಿಲು, ಪುತ್ಥಳಿಗಳ ತೆರವುಗೊಳಿಸಲು ಸೂಚನೆ ನೀಡಿದ ಹಿನ್ನಲೆಯಲ್ಲಿ ಸೋಮವಾರ ಬೆಳಗ್ಗೆ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಮಾತನಾಡಿ ಸುಪ್ರೀಂ ಕೋರ್ಟ್ ಆದೇಶ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಠರಾವು ಆಗಿ ನಂತರ ಸಂಬಂಧಪಟ್ಟ ಇಲಾಖೆಗಳಿಂದಲೂ ಒಪ್ಪಿಗೆ ಪಡೆದು ನಾಮಫಲಕ ಅಥವಾ ಪುತ್ಥಳಿಗಳ ಅಳವಡಿಸಬೇಕು ಎನ್ನುವ ನಿಯಮವಿದೆ. ಆದರೆ ಮದಕರಿ ನಾಯಕ ದ್ವಾರಬಾಗಿಲು ಹಾಗೂ ವಾಲ್ಮೀಕಿ ನಾಮಫಲಕ್ಕೆ ಅನುಮೋದನೆ ಪಡೆದಿರುವ ದಾಖಲೆಗಳು ಗ್ರಾಮ ಪಂಚಾಯಿತಿಯಿಂದ ಸಿಕ್ಕಿಲ್ಲ ಹಾಗಾಗಿ ತೆರವುಗೊಳಿಸಲಾಗಿದೆ ಎಂದರು.

ಇತ್ತೀಚಿಗೆ ಕುರುಬ ಸಮುದಾಯದವರು ಗ್ರಾಮದಲ್ಲಿ ಅಳವಡಿಸಿರುವ ನಾಮಫಲಕ ಹಾಗೂ ಸಂಗೊಳ್ಳಿ ರಾಯಣ್ಣ ಪುತ್ಥಳಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿದ್ದರು. ಮುಂದಿನ ದಿನಗಳಲ್ಲಿ ತಮ್ಮ ಸ್ಥಳೀಯ ಆಡಳಿತ ಗ್ರಾಮ ಪಂಚಾಯಿತಿಯಲ್ಲಿ ಠರಾವು ಆದ ನಂತರ ಸಂಬಂಧಪಟ್ಟ ಇಲಾಖೆಯಿಂದ ಒಪ್ಪಿಗೆ ಪಡೆದು ನಾಮಪಲಕ ಹಾಗೂ ಪುತ್ಥಳಿಗಳ ಅಳವಡಿಸಿಕೊಳ್ಳಲು ಮನವಿ ಮಾಡಿದರು.