ಸಾರಾಂಶ
ದೇವರಹಳ್ಳಿ ಸಭೆಯಲ್ಲಿ ಸಂತಸ ಹಂಚಿಕೊಂಡ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ
ಕನ್ನಡಪ್ರಭ ವಾರ್ತೆ ಹಾರೋಹಳ್ಳಿತಾಲೂಕಿನ ಮರಳವಾಡಿ ಹೋಬಳಿಯ ದೇವರಹಳ್ಳಿ ದಲಿತರ ನೂರಾರು ಎಕರೆ ಭೂಮಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದ್ದಾರೆ. ಈ ವಿಚಾರವಾಗಿ ರಾಮನಗರದಲ್ಲಿ ನಡೆಸಿದ ಹೋರಾಟದ ಫಲವಾಗಿ ನ್ಯಾಯ ದೊರಕಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ದೇವರಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಕಲೆಕ್ಟರ್, ತಹಸೀಲ್ದಾರ್, ಜಿಲ್ಲಾಧಿಕಾರಿ ಅಥವಾ ಪೊಲೀಸ್ ಇಲಾಖೆ ಅಧಿಕಾರಿಗಳು ಬಡವರಿಗೆ ನ್ಯಾಯ ಒದಗಿಸುವುದಿಲ್ಲ. ಹೋರಾಟದ ಮೂಲಕ ನ್ಯಾಯ ದಕ್ಕಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ, ಉದ್ಯಮಿಗಳಿಗೆ, ರಾಜಕೀಯ ಪ್ರಭಾವಿಗಳಿಗೆ ಖಾತೆ, ಸರ್ವೆಯಂತಹ ಕೆಲಸ ಮಾಡುತ್ತಿದ್ದಾರೆಯೇ ಹೊರತು ಬಡ ರೈತನಿಗಾಗಲಿ, ಮಧ್ಯಮವರ್ಗದ ಸಾರ್ವಜನಿಕರಾಗಲಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಕಿಡಿಕಾರಿದರು.ಬಿಜೆಪಿ ಸರ್ಕಾರದ ಬೆಲೆ ಏರಿಕೆ, ಜಾತಿ ರಾಜಕೀಯ, ಮುಸ್ಲಿಂ ಮತ್ತು ಕ್ರೈಸ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದ್ದರೂ ಕಂಡು ಕಾಣದಂತೆ ಕುಳಿತಿದ್ದೇ ಅವರ ಸೋಲಿಗೆ ಕಾರಣ, ಇಂದು ರಾಜ್ಯ ಕಾಂಗ್ರೆಸ್ ಉಚಿತ ಅಕ್ಕಿ, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ ಹಣ ಎಂದು ಕೇವಲ ಐದು ಗ್ಯಾರಂಟಿಗಳ ಆಮಿಷ ತೋರಿಸಿ ಗೆಲುವು ಸಾಧಿಸಿ ಸರ್ಕಾರ ಸ್ಥಾಪಿಸಿದೆ. ಆದರೆ, ಇಲ್ಲಿಯವರೆಗೂ ಕೇಂದ್ರದ ಬಿಜೆಪಿ ಆಗಲೀ, ರಾಜ್ಯದ ಕಾಂಗ್ರೆಸ್ ಸರ್ಕಾರವಾಗಲೀ ಜನರಿಗೆ ನೀಡಿದ ಭರವಸೆಗಳನ್ನು ಪೂರೈಸಲು ಸಾಧ್ಯವಾಗದೆ ಕುಂಟು ನೆಪಗಳನ್ನು ಹೇಳಿ ಕಾಲ ಕಳೆಯುತ್ತಿದ್ದಾರೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟರೆ, ರೈತರಿಗೆ ಭೂಮಿ ಹಂಚಿಕೆ ಮಾಡಿದರೆ ಅವರು ಗೌರವದಿಂದ ಜೀವನ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ನದಾನಪ್ಪ, ಜಿಲ್ಲಾಧ್ಯಕ್ಷ ಕೃಷ್ಣಪ್ಪ, ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್, ಜಿಲ್ಲಾ ಮುಖಂಡರಾದ ವೆಂಕಟಾಚಲ, ಮಹದೇವ, ಮುರುಗೇಶ್, ಕೃಷ್ಣಮೂರ್ತಿ, ರಮೇಶ್, ಭಯರಾಜು, ಪಾರ್ವತಮ್ಮ, ಬಸವಮಾದಮ್ಮ, ದೇವರಳ್ಳಿ ಸ್ವಾಮಿ, ಚಂದ್ರಕಾಂತೆ, ಗ್ರಾಮದ ಮುಖಂಡರಾದ ಶಶಿ, ತಮ್ಮಯ್ಯ, ಜವರಪ್ಪ, ಪ್ರದೀಪ, ಉಳ್ಳಯ್ಯ, ರಾಜು ಇದ್ದರು.ಹಾರೋಹಳ್ಳಿ ತಾಲೂಕು ದೇವರಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿದರು.