ಅರಣ್ಯ ಒತ್ತುವರಿ ತೆರವು: ಸಂಸದರ ಆಕ್ರೋಶ

| Published : Oct 20 2023, 01:00 AM IST

ಸಾರಾಂಶ

ಬೃಹತ್ ಗಾತ್ರದ ಮಾವಿನ ಮರಗಳನ್ನು ನೆಲಸಮ ಮಾಡಿ ಜಮೀನು ಒತ್ತುವರಿ ತೆರವು ಮಾಡುತ್ತಿರುವ ಅರಣ್ಯ ಇಲಾಖೆಯವರು ಹಳ್ಳ ತೋಡಿ ತಮ್ಮ ಗಡಿ ಗುರುತು ಮಾಡುತ್ತಿದ್ದಾರೆ.
ಶ್ರೀನಿವಾಸಪುರ: ತಾಲೂಕಿನ ಏಡುಕೊಂಡಲು ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಗುರುವಾರ ನಸುಕಿನ ಜಾವ ೪ ಗಂಟೆಗೆ ಜೆಸಿಬಿಗಳೊಂದಿಗೆ ಆಗಮಿಸಿದ ಜಿಲ್ಲಾ ಅರಣ್ಯಾಧಿಕಾರಿಗೆ ಚಾಲನೆ ನೀಡಿದರು. ತಾಲೂಕಿನ ಕಸಬಾ ಹೋಬಳಿ ಆಲಂಬಗಿರಿ ಅರಣ್ಯ ಪ್ರದೇಶದ ವ್ಯಾಪ್ತಿಯ ಪಾತಪಲ್ಲಿ ಬಳಿ ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಕಾರ್ಯಚರಣೆ ನಡೆಯುತ್ತಿದ್ದು, ಬೃಹತ್ ಗಾತ್ರದ ಮಾವಿನ ಮರಗಳನ್ನು ನೆಲಸಮ ಮಾಡಿ ಜಮೀನು ಒತ್ತುವರಿ ತೆರವು ಮಾಡುತ್ತಿರುವ ಅರಣ್ಯ ಇಲಾಖೆಯವರು ಹಳ್ಳ ತೋಡಿ ತಮ್ಮ ಗಡಿ ಗುರುತು ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ಕಾರ್ಯಾಚರಣೆ ಮುಂದುವರಿಯಲಿದ್ದು ಶೆಟ್ಟಿಹಳ್ಳಿ, ಪಣಸಚೌಡನಹಳ್ಳಿ, ಆರಮಾಕಲಹಳ್ಳಿ ಸೇರಿದಂತೆ ಈಭಾಗಗಳಲ್ಲಿ ಒತ್ತುವರಿ ತೆರವು ಮುಂದುವರಿಯಲಿದೆ ಎನ್ನುತ್ತಾರೆ. ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭವಾಗುತ್ತಿದ್ದಂತೆ ಸುಮುತ್ತಲಿನ ಗ್ರಾಮಸ್ಥರು ಜಮಾವಣೆಗೊಂಡು ಜಿಲ್ಲಾ ಅರಣ್ಯಾಧಿಕಾರಿ ಬಳಿ ತಮ್ಮ ಅಳಲು ತೊಡಿಕೊಂಡಿದ್ದು, ಎಪ್ಪತ್ತು-ಎಂಬತ್ತು ವರ್ಷದಿಂದ ಸಾಗುವಳಿ ಮಾಡಿಕೊಂಡು ಜೀವನ ಮಾಡುತ್ತಿದ್ದು ಇದು ಹೋದರೆ ನಮಗೆ ಜೀವನ ಇಲ್ಲ ಎಂದು ತಿಳಿಸಿದ್ದಾರೆ. ಒತ್ತುವರಿ ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ: ಅರಣ್ಯ ಇಲಾಖೆಯ ಒತ್ತುವರಿ ಕಾರ್ಯಾಚರಣೆ ವಿರುದ್ಧ ಸಿ.ಟಿ.ರವಿ, ಸದಾನಂದಗೌಡ, ಸಂಸದ ಮುನಿಸ್ವಾಮಿ ಸೇರಿದಂತೆ ಹಲವಾರು ಜನ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಸ್ಥಗಿತಗೊಳಿಸಿದ ಅರಣ್ಯ ಇಲಾಖೆಯು ಇದೀಗ ಮತ್ತೆ ಗುರುವಾರ ಬೆಳ್ಳಂ ಬೆಳಗ್ಗೆ ೪ ಗಂಟೆಯಿಂದಲೇ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದರು. ಅರಣ್ಯ ಇಲಾಖೆಯ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಹೈಡ್ರಾಮ ನಡೆಯಿತು, ತೆರವು ಕಾರ್ಯಾಚರಣೆಯ ಸ್ಥಳಕ್ಕೆ ಸಂಸದ ಮುನಿಸ್ವಾಮಿ ಹಾಗೂ ಬೆಂಬಲಿಗರು ಭೇಟಿ ನೀಡಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದರು. ಸಂಸದ ಮುನಿಸ್ವಾಮಿ ಕಾರು ಇಳಿದು ತೆರವು ಕಾರ್ಯಾಚರಣೆಯ ಸ್ಥಳಕ್ಕೆ ಭೇಟಿ ನೀಡುವಾಗ ಸಂಸದ ಮುನಿಸ್ವಾಮಿರನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಲಾಠಿಗಳ ಮೂಲಕ ತಡೆದರು. ನಾನು ಹೋಗಲೇ ಬೇಕು ಎಂದು ಪಟ್ಟು ಹಿಡಿದು ಮುಂದಕ್ಕೆ ಬಂದ ಸಂಸದ ಮುನಿಸ್ವಾಮಿ, ನೀವು ಮನುಷ್ಯರಾ, ರೈತರು ನಮ್ಮದೇ ಜಮೀನು ಎಂದು ದಾಖಲೆ ತೋರಿಸುತ್ತಿದ್ದಾರೆ. ೨೦ ವರ್ಷಗಳ ಮಾವಿನ ಮರಗಳನ್ನು ತೆರವು ಮಾಡ್ತಿದೀರಾ, ಒತ್ತುವರಿ ಇದ್ರೆ ನೀವು ಹದ್ದುಬಸ್ತು ಮಾಡಿಕೊಳ್ಳಿ, ಈ ರೀತಿ ಏಕಾಏಕಿ ಮರಗಳನ್ನು ತೆರವು ಏಕೆ ಮಾಡ್ತಿದೀರಿ ದಾಖಲೆಗಳನ್ನೂ ತೋರಿಸುತ್ತಾ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ತಹಸೀಲ್ದಾರ್‌ ಆಗಮಿಸುವಂತೆ ಪಟ್ಟು ಹಿಡಿದ ಸಂಸದ ಸ್ಥಳದಲ್ಲೇ ಮುನಿಸ್ವಾಮಿ, ಶ್ರೀನಿವಾಸಪುರ ತಹಸೀಲ್ದಾರ್ ಷರೀನ್ ತಾಜ್‌ಗೆ ಕರೆ ಮಾಡಿ ನಾನು ಸ್ಪಾಟ್‌ನಲ್ಲಿ ಇದೀನಿ ಇಲ್ಲಿಗೆ ಬನ್ನಿ, ನಿಮ್ಮ ಕಂದಾಯ ಇಲಾಖೆಯಿಂದ ಕೋಳಿ ಫಾರಂ ಗೆ ಪರ್ಮಿಷನ್ ಕೊಟ್ಟಿದೀರಿ, ರೈತರ ಜಮೀನುಗಳಿಗೆ ಪರಿಹಾರ ಕೊಟ್ಟಿದೀರಿ, ಹೈ ಟೆನ್ಷನ್ ವೈರ್ ಹೋಗಿದಕ್ಕೆ ಪರಿಹಾರ ನೀಡಲಾಗಿದೆ. ಆಗಾದ್ರೆ ಮರಗಳ ಜೊತೆ ಹೈ ಟೆನ್ಷನ್ ವೈರನ್ನು ತೆರವು ಮಾಡಿ, ನಾನು ಜಾಗ ಬಿಟ್ಟು ಹೋಗೋದಿಲ್ಲ ಸ್ಪಾಟ್ ಗೆ ಬನ್ನಿ ಎಂದು ಆಗ್ರಹಿಸಿದರು. ಪೊಲೀಸ್‌, ಅರಣ್ಯ ಇಲಾಖೆಯವರಿಗೆ ಆವಾಜ್ ತೆರವು ಕಾರ್ಯಾಚರಣೆ ನಡೆಯುತ್ತಿರುವ ಜೆಸಿಬಿಗಳ ಬಳಿ ಹೋಗಲು ಸಂಸದ ಮುನಿಸ್ವಾಮಿ ಪ್ರಯತ್ನ ಮಾಡುತ್ತಿದಂತೆ ತಡೆದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು, ಏಯ್ ನೀನ್ಯಾರು ನನ್ನ ಮುಟ್ಟೋಕೆ, ನಾನು ಒಬ್ಬ ಸಂಸದ ಸಂಸದ ಆದವರು ಯಾರು ಬರಬಾರದ ಇಲ್ಲಿಗೆ, ನನ್ನನು ಮುಟ್ಟಿದ್ರೆ ಮನೆಗೆ ಕಳುಹಿಸುತ್ತೇನೆ ಉಷಾರು ಎಂದು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಆವಾಜ್ ಹಾಕಿದರು.