ತಾಲೂಕಿನಾದ್ಯಂತ ಕೆರೆಗಳ ಒತ್ತುವರಿ ತೆರವು: ತಹಸೀಲ್ದಾರ್ ಡಾ. ಸುಮಂತ್

| Published : Aug 18 2024, 01:45 AM IST

ಸಾರಾಂಶ

ಚಿಕ್ಕಮಗಳೂರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಿನಾದ್ಯಂತ ಕೆರೆಗಳ ಒತ್ತುವರಿ ತೆರವುಗೊಳಿಸಲಾಗುತ್ತಿದೆ ಎಂದು ತಹಸೀಲ್ದಾರ್ ಡಾ. ಸುಮಂತ್ ತಿಳಿಸಿದರು.

ಚಿಕ್ಕಮಗಳೂರು ತಾಲೂಕು ಕಸಬಾ ಹೋಬಳಿ ಹನುಮ ದೇವರ ಕೆರೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಿನಾದ್ಯಂತ ಕೆರೆಗಳ ಒತ್ತುವರಿ ತೆರವುಗೊಳಿಸಲಾಗುತ್ತಿದೆ ಎಂದು ತಹಸೀಲ್ದಾರ್ ಡಾ. ಸುಮಂತ್ ತಿಳಿಸಿದರು.ಚಿಕ್ಕಮಗಳೂರು ತಾಲೂಕು ಕಸಬಾ ಹೋಬಳಿ ಹನುಮ ದೇವರ ಕೆರೆ 1.53 ಹೆಕ್ಟೇರ್‌ಗೆ ನೀರೊದಗಿಸುತ್ತಿದ್ದು, ಈ ಕೆರೆ ಒತ್ತುವರಿಯನ್ನು ಶನಿವಾರ ತೆರೆವುಗೊಳಿಸಲಾಗಿದೆ ಎಂದು ಹೇಳಿದರು. ಚಿಕ್ಕಮಗಳೂರು ತಾಲೂಕಿನಲ್ಲಿ ಒಟ್ಟು 668 ಕೆರೆಗಳಿದ್ದು, ಈ ಪೈಕಿ ಸರ್ವೆ ಮಾಡಿದಾಗ 344 ಕೆರೆಗಳ 262 ಎಕರೆ ಒತ್ತುವರಿಯಾಗಿರುವುದು ಕಂಡು ಬಂದಿದೆ. ಕಳೆದ ಒಂದು ವರ್ಷದಿಂದ ಕೆರೆಗಳ ಒತ್ತುವರಿ ತೆರವು ಮಾಡುತ್ತಿದ್ದೇವೆ ಎಂದರು.

ಈಗಾಗಲೇ 40 ಕೆರೆಗಳ ಒತ್ತುವರಿ ಖುಲ್ಲಾ ಮಾಡಲಾಗಿದ್ದು, 79 ಎಕರೆಯಷ್ಟು ಜಾಗ ತೆರವು ಮಾಡಿದ್ದೇವೆ. ಇನ್ನೂ 304 ಕೆರೆಗಳ ಬಾಕಿ ಇದ್ದು, ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್ ಕಟಾರಿಯಾ ನೀಡಿರುವ ಗುರಿಯಂತೆ ಪ್ರತೀ ತಿಂಗಳು 16 ಕೆರೆಗಳ ಒತ್ತುವರಿ ತೆರವು ಮಾಡುತ್ತಿದ್ದೇವೆಂದು ತಿಳಿಸಿದರು.ಈ ಹನುಮ ದೇವರ ಕೆರೆಯಲ್ಲಿ 1.20 ಎಕರೆ ಒತ್ತುವರಿಯಾಗಿದೆ. ತೆರವು ಮಾಡಿದ ನಂತರ ಟ್ರಂಚ್ ಹೊಡೆದು ನಗರಸಭೆಯಿಂದ ತಂತಿಬೇಲಿ ಅಳವಡಿಸುತ್ತೇವೆ. ಈ ಕಾರ್ಯ ನಗರಸಭೆ, ಸಣ್ಣ ನೀರಾವರಿ, ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ನಡೆಸಲಾಗುತ್ತಿದೆ ಎಂದರು.ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ವಿಕಾಸ್ ಮಾತನಾಡಿ, ತಾಲೂಕಿನಲ್ಲಿ ಇಲಾಖೆ ವ್ಯಾಪ್ತಿಯಲ್ಲಿ 33 ಕೆರೆಗಳಿದ್ದು, ಇದರಲ್ಲಿ 17 ಕೆರೆಗಳು ಒತ್ತುವರಿಯಾಗಿರುವುದು ಸರ್ವೆ ಮಾಡಿದಾಗ ಗಡಿ ಗುರುತಿಸಲಾಗಿದೆ. ಒತ್ತುವರಿ ತೆರವು ಮಾಡುತ್ತಿರುವ ಹನುಮ ದೇವರಕೆರೆ ಎರಡನೇ ಕೆರೆಯಾಗಿದೆ ಎಂದರು.ಜಿಲ್ಲಾಡಳಿತದ ನಿರ್ದೇಶನದಂತೆ ಕೆರೆಗಳ ಕಂದಾಯ ಗಡಿ ಗುರುತಿಸಿದ್ದು, ಆ ಮೂಲಕ ಕೆರೆಗಳ ಸುತ್ತ ತಂತಿಬೇಲಿ ಅಳವಡಿಸುವ ಕಾರ್ಯ ಪ್ರಗತಿ ಯಲ್ಲಿದೆ ಎಂದು ಹೇಳಿದರು. ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಕೆರೆ ಅಭಿವೃದ್ಧಿಗೆ 1.04 ಕೋಟಿ ರು. ಅನುದಾನ ಮೀಸಲಿಡಲಾಗಿದೆ. ಶಾಸಕರ ಗಮನ ಸೆಳೆದು ಕೆರೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಸಂತೋಷ್, ಸರ್ವೆಯರ್ ದೊರೆರಾಜ್ ಹಾಜರಿದ್ದರು. 17 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕು ಕಸಬಾ ಹೋಬಳಿ ಹನುಮ ದೇವರ ಕೆರೆ ಒತ್ತುವರಿಯನ್ನು ಶನಿವಾರ ತೆರವುಗೊಳಿಸಲಾಯಿತು. ತಹಸೀಲ್ದಾರ್‌ ಡಾ. ಸುಮಂತ್‌, ಆರ್‌ಐ ಸಂತೋಷ್‌, ದೊರೆರಾಜ್‌ ಇದ್ದರು.