ಸಾರಾಂಶ
ಬಳ್ಳಾರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ವಿನಾಕಾರಣ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿ, ಹಾಗೂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಸಂಜೆ ಪ್ರತಿಭಟನೆ ಜರುಗಿತು.
ಇಲ್ಲಿನ ಗಡಗಿಚನ್ನಪ್ಪ ವೃತ್ತದಲ್ಲಿ ಸಂಜೆ ದಿಢೀರ್ ಪ್ರತಿಭಟನೆಗೆ ಮುಂದಾದ ಒಕ್ಕೂಟದ ಸದಸ್ಯರು, ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸಿದರು.ವಿವಾದವೇ ಅಲ್ಲದ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ. ಜನಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಕೇಂದ್ರ ನಾಯಕರು ಹೇಳಿದಂತೆ ರಾಜ್ಯಪಾಲರು ಕೇಳುತ್ತಿರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ಗಾದಿಲಿಂಗನಗೌಡ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿಯನ್ನು ಬೇಷರತ್ತಾಗಿ ಹಿಂಪಡೆಯಬೇಕೆಂದು ಆಗ್ರಹಿಸಿದರು.ಸಿದ್ದರಾಮಯ್ಯ ಯಾವುದೇ ಕಳಂಕ ಇಲ್ಲದ ನಾಯಕ, ಅವರ ವಿರುದ್ಧ ಅನಗತ್ಯವಾಗಿ ತನಿಖೆಗೆ ಅನುಮತಿ ನೀಡಲಾಗಿದೆ. ರಾಜ್ಯಪಾಲರ ನಡೆಯ ವಿರುದ್ಧ ನಮ್ಮ ಪ್ರತಿಭಟನೆಯಾಗಿದೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಪ್ರತಿಭಟನೆ ನಡೆಯಲಿವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಿರುವ ಬಿಜೆಪಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿದಾನಂದಪ್ಪ ಮಾತನಾಡಿ, ಸಿದ್ದರಾಮಯ್ಯ ಅವರು ಬಡವರ ಪರ ಇರುವ ನಾಯಕ. ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳಿಂದಾಗಿ ಜನರ ಬದುಕು ಹಸನಾಗಿದೆ. ಇದನ್ನು ಕಂಡು ಬಿಜೆಪಿ ನಾಯಕರಿಗೆ ಸಹನೆ ಆಗುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ.ಹತ್ತು ತಿಂಗಳಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರ ಬಾಕಿ ಇಟ್ಟಿರುವ ರಾಜ್ಯಪಾಲ ಗೆಹ್ಲೋಟ್ ಅವರು, ಸಿಎಂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಯಾವುದೇ ವ್ಯಕ್ತಿಯೊಬ್ಬ ದೂರಿದ ಕೂಡಲೇ ಕಾರ್ಯ ಪ್ರವೃತ್ತರಾಗರುವುದು ಅವರ ಪಕ್ಷಪಾತಿ ಧೋರಣೆಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎ.ಮಾನಯ್ಯ, ಜಿಲ್ಲಾ ವಕ್ಫ್ ಅಧ್ಯಕ್ಷ ಹುಮಾಯೂನ್ ಖಾನ್, ಕಾಂಗ್ರೆಸ್ ಹಿರಿಯ ಮುಖಂಡ ಕಲ್ಲುಕಂಭ ಪಂಪಾಪತಿ, ಅರುಣಕುಮಾರ್, ವೆಂಕಟೇಶ ಹೆಗಡೆ, ಕುಡಿತಿನಿ ರಾಮಾಂಜನಿ, ಪಿ.ಜಗನ್ನಾಥ, ಬಿಆರೆಲ್ ಸೀನಾ, ಹೊನ್ನಪ್ಪ, ಕೆರಕೋಡಪ್ಪ, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಶ್ರೀನಿವಾಸ್ ಹಾಗೂ ಸಂಗನಕಲ್ಲು ವಿಜಯಕುಮಾರ್, ಬೆಣಕಲ್ ಬಸವರಾಜಗೌಡ, ಬಿ.ಎಂ.ಪಾಟೀಲ್, ಜಾಸ್ವಾ, ಗೌಸಿಯಾಬೀ, ಕನಕ, ಇಮಾಮ್ ಗೋಡೆಕಾರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.