30ಕ್ಕೂ ಅನಧಿಕೃತ ಅಧಿಕ ಅಂಗಡಿಗಳ ತೆರವು

| Published : Nov 21 2024, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಲೋಕಾಪುರ ಬೆಳಗಾವಿ-ರಾಯಚೂರು, ಸಂಗಮ-ಸಂಕೇಶ್ವರ ರಾಜ್ಯ ಹೆದ್ದಾರಿ ಪೊಲೀಸ್‌ ಕಚೇರಿಯಿಂದ ಬಾಗಲಕೋಟ ರಸ್ತೆ ಬ್ರಿಡ್ಜ್‌ ಬಳಿಯವರೆಗೆ ಬುಧವಾರ ಬೆಳಂ ಬೆಳಗ್ಗೆ ಜೆಸಿಬಿ ಯಂತ್ರಗಳ ರೌದ್ರನರ್ತನ ಮೊಳಗಿತು. ರಸ್ತೆ ಬದಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಕಟ್ಟಡಗಳು ಹಾಗೂ ಶೆಡ್‌ಗಳನ್ನು ಇದೆ ವೇಳೆ ತೆರವುಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಬೆಳಗಾವಿ-ರಾಯಚೂರು, ಸಂಗಮ-ಸಂಕೇಶ್ವರ ರಾಜ್ಯ ಹೆದ್ದಾರಿ ಪೊಲೀಸ್‌ ಕಚೇರಿಯಿಂದ ಬಾಗಲಕೋಟ ರಸ್ತೆ ಬ್ರಿಡ್ಜ್‌ ಬಳಿಯವರೆಗೆ ಬುಧವಾರ ಬೆಳಂ ಬೆಳಗ್ಗೆ ಜೆಸಿಬಿ ಯಂತ್ರಗಳ ರೌದ್ರನರ್ತನ ಮೊಳಗಿತು. ರಸ್ತೆ ಬದಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಕಟ್ಟಡಗಳು ಹಾಗೂ ಶೆಡ್‌ಗಳನ್ನು ಇದೆ ವೇಳೆ ತೆರವುಗೊಳಿಸಲಾಯಿತು.

ಜಿಲ್ಲಾಧಿಕಾರಿಗಳ ಆದೇಶದನ್ವಯ ಲೋಕೋಪಯೋಗಿ ಇಲಾಖೆ, ಪಟ್ಟಣ ಪಂಚಾಯತ ನಿರ್ದೇಶನದಂತೆ ಬುಧವಾರ ಬೆಳಗ್ಗೆ ೫ ಗಂಟೆಗೆ ಜನರು ಸಿಹಿ ನಿದ್ರೆಯಲ್ಲಿರುವಾಗಲೇ ಪಟ್ಟಣ ಪಂಚಾಯತಿ ವತಿಯಿಂದ ಕಾರ್ಯಾಚರಣೆ ಶುರುವಾಯಿತು. ರಸ್ತೆಗೆ ಹೊಂದಿಕೊಂಡ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ, ಗೊಬ್ಬರ ಅಂಗಡಿ, ಟೀ ಅಂಗಡಿ, ಕಿರಾಣಿ ಅಂಗಡಿ, ಮೊಬೈಲ್ ಅಂಗಡಿ ಗೂಡಂಗಡಿ, ಕಟ್ಟಿಂಗ್ ಅಂಗಡಿ ಸೇರಿದಂತೆ ಸರಿಸುಮಾರು 30 ಕ್ಕೂ ಹೆಚ್ಚು ಕಟ್ಟಡ ಶೆಡ್‌ಗಳನ್ನು ಮೂರು ಜಿಸಿಬಿ, ಹಿಟಾಜಿ ಯಂತ್ರಗಳು ಧರೆಗುರುಳಿಸಿದವು.

ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ ಕಾಮಗಾರಿಗೆ ಅಪಘಾತ ವಲಯವೆಂದು ಗುರುತಿಸಿರುವ ಪ್ರದೇಶದಲ್ಲಿ ಬರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುುವಂತೆ ಪಟ್ಟಣ ಪಂಚಾಯತ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಿನಂತಿಸಿಕೊಂಡಿದ್ದರು. ಮಳಿಗೆಗಳ ಮಾಲೀಕರು ಯಾವುದಕ್ಕೂ ಸೊಪ್ಪು ಹಾಕದೇ ಇದ್ದಾಗ ಅಧಿಕಾರಿಗಳು ತಮ್ಮ ತೆರವು ಕಾರ್ಯಾಚರಣೆಗೆ ನಡೆಸಿದ್ದಾರೆ. ಆರಂಭದಲ್ಲಿ ಸಂಬಂಧಪಟ್ಟ ಅಂಗಡಿಗಳ ಮಾಲೀಕರಿಗೆ ಮಾಹಿತಿಯನ್ನು ನೀಡಿದ್ದರು. ಆದರೆ, ಇದಕ್ಕೆ ಮಾಲೀಕರು ಕ್ಯಾರೆ ಎಂದಿರಲಿಲ್ಲ.

ಮಾಲೀಕರಿಗೆ ತೆರವುಗೊಳಿಸುವಂತೆ ಅನೇಕ ಭಾರಿ ಮೌಖಿಕವಾಗಿ ತಿಳಿಸಿದ್ದರೂ ತೆರವುಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಭದ್ರತೆಯೊಂದಿಗೆ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ತಿಳಿಸಿದರು.

ತೆರವು ಕಾರ್ಯಾಚರಣೆ ಮಾಹಿತಿ ಪಡೆದುಕೊಂಡಿದ್ದ ಅಂಗಡಿಗಳ ಮಾಲೀಕರು ಸ್ವಯಂಕೃತವಾಗಿ ಸಾಮಗ್ರಿಗಳನ್ನು ತೆಗೆದುಕೊಂಡಿದ್ದರು. ಕಣ್ಣೆದುರಲ್ಲೇ ಕಟ್ಟಡಗಳು ನೆಲಸಮವಾದರೂ ಸ್ವಲ್ಪಮಟ್ಟಿಗೆ ಅಂಗಡಿ ಮಾಲೀಕರು ಪ್ರತಿರೋಧ ವ್ಯಕ್ತಪಡಿಸಿದರು. ಮಾತ್ರವಲ್ಲ, ಇದೆ ವೇಳೆ ತಹಶೀಲ್ದಾರ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯತ, ಲೋಕೋಪಯೋಗಿ ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿಯೂ ನಡೆಯಿತು.

ತೆರವುಕಾರ್ಯಾಚರಣೆ ವೇಳೆ ಪಟ್ಟಣ ಪಂಚಾಯತ, ಲೋಕೋಪಯೋಗಿ ಇಲಾಖೆ, ಪೋಲಿಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು. ಇದರಿಂದ ಏನೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸಿ, ಶೆಡ್‌ಗಳನ್ನು ತೆರವು ಮಾಡಿದರು.ಕಾರ್ಯಾಚರಣೆ ವೇಳೆ ತಹಶೀಲ್ದಾರ ಮಹಾದೇವ ಸನಮೂರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಚನ್ನಬಸವ ಮಾಚನೂರ, ಅಶೋಕ ಕ್ಯಾದಿಗೇರಿ, ಮಾರುತಿ ಹೊನ್ನಕೇರಿ, ವಿನೋದ ಸಂಕ್ಕೆನವರ ಹಾಗೂ ಪಪಂ ಸಿಬ್ಬಂದಿ ಇದ್ದರು. ಪಿಎಸ್‌ಐ ಕೆ.ಬಿ ಜಕ್ಕನವರ ನೇತೃತ್ವದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

------------

ಕೋಟ್‌....

ಪಟ್ಟಣ ಪಂಚಾಯತ ಅಭಿವೃದ್ಧಿಗೆ, ರಸ್ತೆ ಅಗಲೀಕರಣಕ್ಕೆ ನಮ್ಮ ವಿರೋಧವಿಲ್ಲ. ಸ್ವಯಂಪ್ರೇರಿತವಾಗಿ ನಮ್ಮ ಅಂಗಡಿಗಳನ್ನು ತೆರವುಗೊಳಿಸಲು ಸಿದ್ಧಿರಿದ್ದೇವೆ. ಸರ್ಕಾರದಿಂದ ನಮಗೆ ಸಿಗಬೇಕಾದ ಸವಲತ್ತುಗಳನ್ನು ನೀಡಲು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ೩೦ ವರ್ಷಗಳಿಂದ ಇದೇ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ನಮಗೆ ಈಗ ಯಾವುದೇ ದಾರಿ ಕಾಣದಾಗಿದೆ.

- ವಿನೋದ ಘೋರ್ಪಡೆ, ಮಂಜುನಾಥ ಪಾಟೀಲ, ದಾನಪ್ಪ ಹಡಪದ, ಸುನೀಲ ಕಲಾಲ, ದಶರಥ ಜಾಧವ ವ್ಯಾಪಾರಸ್ಥರುರಸ್ತೆ ಅಗಲೀಕರಣ ಕಾಮಗಾರಿ ಸುಮಾರು ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದರಿಂದ ಸಂಚಾರ ಸಮಸ್ಯೆ ಉಂಟಾಗಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಅತಿಕ್ರಮ ಕಟ್ಟಡ ತೆರವು ಮಾಡಿಸಿದ್ದೇವೆ. ರಸ್ತೆ ಅಕ್ಕಪಕ್ಕ ಇರುವ ಬಹುತೇಕ ಕಟ್ಟಡಗಳು ಪಪಂನ ಗ್ರಾಮಠಾಣಾ ಜಾಗವನ್ನು ಅತಿಕ್ರಮಿಸಿಕೊಂಡಿದ್ದವು. ಲೋಕೋಪಯೋಗಿ ಇಲಾಖೆ ಪ್ರಕಾರ ರಸ್ತೆ ಮಧ್ಯ ಭಾಗದಿಂದ ೪೦ ಅಡಿಗಳವರೆಗೆ ಅಳತೆ ಮಾಡಿ ಅತಿಕ್ರಮಿಸಿಕೊಂಡ ಜಾಗದವರೆಗೆ ಮಾರ್ಕ್‌ ಮಾಡಿ, ಬಹುಮಹಡಿ ಕಟ್ಟಡ ಸೇರಿದಂತೆ ೩೦ಕ್ಕೂ ಹೆಚ್ಚು ಕಟ್ಟಡಗಳನ್ನು ಕಾರ್ಯಾ ಚರಣೆಯಲ್ಲಿ ತೆರವುಗೊಳಿಸಲಾಗಿದೆ.- ಜ್ಯೋತಿ ಉಪ್ಪಾರ, ಪಪಂ ಮುಖ್ಯಾಧಿಕಾರಿರಾಜ್ಯ ಹೆದ್ದಾರಿಗಳ ಮಧ್ಯಭಾಗದಿಂದ ೪೦ ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ಅಥವಾ ಅಂಗಡಿಗಳನ್ನು ನಿರ್ಮಿಸುವಂತಿಲ್ಲ. ಯಾವುದೇ ಕಟ್ಟಡ ನಿರ್ಮಿಸುವುದಕ್ಕೆ ಅವಕಾಶವಿಲ್ಲ. ಇದಕ್ಕೆ ನೋಟಿಸ್ ನೀಡದೆ ತೆರವುಗೊಳಿಸಲಾಗುವುದು.

- ಕೆ.ಎಂ.ಜಾನಕಿ, ಜಿಲ್ಲಾಧಿಕಾರಿ