ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಅಕ್ರಮ ಅತಿಕ್ರಮಣಗಳ ವಿರುದ್ಧ ಕಾರವಾರ ನಗರಸಭೆ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆಯೇ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕಾರವಾರ
ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಅಕ್ರಮ ಅತಿಕ್ರಮಣಗಳ ವಿರುದ್ಧ ಕಾರವಾರ ನಗರಸಭೆ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆಯೇ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದರು. ರಸ್ತೆ ಮತ್ತು ಫುಟ್‌ಪಾತ್ ಆಕ್ರಮಿಸಿಕೊಂಡಿದ್ದ ಗೂಡಂಗಡಿಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ತೆರವುಗೊಳಿಸುವ ಮೂಲಕ ಪಾದಚಾರಿಗಳು ಹಾಗೂ ವಾಹನ ಸವಾರರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.ನಗರದ ಪಿಕಳೆ ರಸ್ತೆ, ಎಂಜಿ ರಸ್ತೆ ಹಾಗೂ ಗ್ರೀನ್ ಸ್ಟ್ರೀಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಅನೇಕ ವ್ಯಾಪಾರಿಗಳು ರಸ್ತೆಯನ್ನೇ ಆಕ್ರಮಿಸಿಕೊಂಡಿದ್ದರು. ಗೂಡಂಗಡಿಗಳ ಮುಂದೆ ಫ್ರಿಡ್ಜ್ ಸೇರಿದಂತೆ ದೊಡ್ಡ ದೊಡ್ಡ ವಸ್ತುಗಳನ್ನು ಇಟ್ಟು ಸಂಚಾರಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಸಭೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಯಿತು. ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದ್ದುದರಿಂದ, ಅಧಿಕಾರಿಗಳು ಮುಂಜಾನೆಯೇ ಕಾರ್ಯಾಚರಣೆ ಕೈಗೊಂಡು ಗೂಡಂಗಡಿಗಳನ್ನು ತೆರವುಗೊಳಿಸಿದರು.
ಕಾರ್ಯಾಚರಣೆಯ ವೇಳೆ ರಸ್ತೆ ಅಂಚಿನಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಐದಕ್ಕೂ ಅಧಿಕ ಗೂಡಂಗಡಿಗಳ ಸಾಮಗ್ರಿಗಳನ್ನು ನಗರಸಭೆಯ ವಶಕ್ಕೆ ಪಡೆಯಲಾಯಿತು. ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದ್ದ ಶೆಡ್‌ಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಯಿತು. ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಇನ್ನು ಮುಂದೆ ರಸ್ತೆ ಅತಿಕ್ರಮಣ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಈ ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದು ನಗರಸಭೆ ಅಧಿಕಾರಿಗಳು ಈ ಸಂದರ್ಭ ಎಚ್ಚರಿಕೆ ನೀಡಿದ್ದಾರೆ.