ಬೀದಿ ಬದಿಯ ಗೂಡಂಗಡಿಗಳ ತೆರವು ಕಾರ್ಯಾಚರಣೆ

| Published : Sep 28 2024, 01:16 AM IST

ಸಾರಾಂಶ

ಬಸವನಬಾಗೇವಾಡಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಪಾದಚಾರಿ (ಪುಟ್‌ಪಾತ್) ರಸ್ತೆಯಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ಪುರಸಭೆಯಿಂದ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿಐ ಗುರುಶಾಂತ ದಾಶ್ಯಾಳ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ನೇತೃತ್ವದಲ್ಲಿ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ವಿಜಯಪುರ ರಸ್ತೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ಪಾದಚಾರಿ (ಪುಟ್‌ಪಾತ್) ರಸ್ತೆಯಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ಪುರಸಭೆಯಿಂದ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಪಿಐ ಗುರುಶಾಂತ ದಾಶ್ಯಾಳ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ನೇತೃತ್ವದಲ್ಲಿ ಆರಂಭವಾಯಿತು.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ವಿಮೋಚನಾ ಹೋಟೆಲ್‌ದಿಂದ ಆರಂಭವಾದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಬಸವ ಭವನದವರೆಗೂ ನಡೆಯಿತು. ಅಂಗಡಿಗಳ ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಬೀದಿ ಬದಿಯ ಅಂಗಡಿಕಾರರು ನಮಗೆ ಕಾಲಾವಕಾಶ ನೀಡಿದರೇ ನಮ್ಮ ಸಾಮಾನುಗಳನ್ನು ತೆಗೆಯುತ್ತೇವೆ. ನಮ್ಮ ವ್ಯಾಪಾರದ ಮೇಲೆ ಬರೆ ಎಳೆಯಬಾರದು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಆಗ ಅಧಿಕಾರಿಗಳು ಈಗಾಗಲೇ ಅಂಗಡಿಗಳನ್ನು ತೆರವುಗೊಳಿಸಿಕೊಳ್ಳಲು ತಮಗೆ ಕಾಲಾವಕಾಶ ನೀಡಲಾಗಿತ್ತು. ತಾವು ತೆರವು ಗೊಳಿಸಿಲ್ಲ. ಪುರಸಭೆಯ ಪೌರಕಾರ್ಮಿಕರ ನೆರವಿನೊಂದಿಗೆ ತಮ್ಮ ಅಂಗಡಿ ಸಾಮಾನುಗಳನ್ನು ತೆಗೆದುಕೊಡಲಾಗುವುದು. ತಾವು ಕಾರ್ಯಾಚರಣೆಗೆ ಸಹಕರಿಸಬೇಕೆಂದಾಗ ಅಂಗಡಿಕಾರರು ಕಾರ್ಯಾಚರಣೆ ನಡೆಯುತ್ತಿದ್ದಂತೆ ತಮ್ಮ ಸಾಮಾನುಗಳನ್ನು ಎತ್ತಿಟ್ಟುಕೊಳ್ಳುತ್ತಿರುವುದು ಕಂಡುಬಂದಿತ್ತು. ಕೆಲ ಅಂಗಡಿಗಳನ್ನು ಪುರಸಭೆಯ ಜೆಸಿಬಿಯಿಂದ ತೆರವು ಗೊಳಿಸಿದರೆ ಕೆಲ ಅಂಗಡಿಗಳನ್ನು ಪುರಸಭೆಯ ಪೌರಕಾರ್ಮಿಕರು ತೆರವು ಗೊಳಿಸಿದರು. ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಎಲ್ಲ ಪಾದಚಾರಿ ರಸ್ತೆಯಲ್ಲಿರುವ ಗೂಡಂಗಡಿಗಳನ್ನು ಪುರಸಭೆಯಿಂದ ತೆರವು ಗೊಳಿಸಲಾಗುವುದು. ಮೊದಲ ಹಂತವಾಗಿ ಇಂದು ವಿಜಯಪುರ ರಸ್ತೆಯ ವಿಮೋಚನಾ ಹೋಟೆಲ್‌ದಿಂದ ಬಸವ ಭವನದವರೆಗೂ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಾಡಲಾಗಿದೆ. ಇಂದಿನ ತೆರವು ಕಾರ್ಯಾಚರಣೆಯಲ್ಲಿ ಯಾರಿಗೂ ಹಾನಿಯಾಗದ ರೀತಿಯಲ್ಲಿ ವ್ಯವಸ್ಥಿತವಾಗಿ ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಗೂಡಂಗಡಿಗಳ ಮಾಲೀಕರಿಗೆ ತಮ್ಮ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಪುರಸಭೆಯಿಂದ ತಿಳಿಸಲಾಗಿದೆ. ತೆರವು ಗೊಳಿಸದೇ ಇರುವ ಅಂಗಡಿಗಳನ್ನು ತೆರವು ಗೊಳಿಸಬೇಕಾಗುತ್ತದೆ. ಬೀದಿ ಬದಿಯಲ್ಲಿ ಕಾನೂನು ಪ್ರಕಾರ ಕಾಯಂ ಅಂಗಡಿಗಳನ್ನು ಹಾಕಿ ವ್ಯಾಪಾರವಹಿವಾಟು ಮಾಡುವಂತಿಲ್ಲ. ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡಲು ಮಾತ್ರ ಅವಕಾಶವಿದೆ. ಗೂಡಂಗಡಿಗಳನ್ನು ತೆರವುಗೊಳಿಸುವದರಿಂದ ಪಾದಚಾರಿಗಳಿಗೆ, ಸುಗಮ ವಾಹನ ಸಂಚಾರಕ್ಕೆ ತುಂಬಾ ಅನುಕೂಲವಾಗಲಿದೆ ಎಂದರು.

ಮೊಹರಂ ಹಬ್ಬದ ಒಂದೆರಡು ದಿನಗಳ ಮುನ್ನ ವಿಜಯಪುರ ರಸ್ತೆಯಲ್ಲಿ ಗೂಡಂಗಡಿಗಳ ತೆರವು ಕಾರ್ಯಾಚರಣೆ ಪುರಸಭೆಯಿಂದ ನಡೆದಾಗ ಆಗ ಗೂಡಂಗಡಿಗಳ ಮಾಲೀಕರಿಂದ ಬಹಳಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ತೆರವು ಗೊಳಿಸಲಾಗಿತ್ತು. ಆಗ ಪುರಸಭೆ ಅಧಿಕಾರಿಗಳು ತಮ್ಮ ಅಂಗಡಿಗಳನ್ನು ತೆರವುಗೊಳಿಸಬೇಕು. ಪಟ್ಟಣದ ಬಸವೇಶ್ವರ ಜಾತ್ರೆ ಮುಗಿದ ನಂತರ ಮತ್ತೆ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಿದ್ದರು ಎಂಬುವುದನ್ನು ಇಲ್ಲಿ ಸ್ಮರಿಸಬಹುದು.

ಕಾರ್ಯಾಚರಣೆ ಸಂದರ್ಭದಲ್ಲಿ ಪಿಎಸೈಗಳಾದ ಐ.ಎಂ.ದುಂಡಸಿ, ವಿನೋದ ಪೂಜಾರಿ, ಆರ್.ಎ.ಕಂಚಗಾರ, ಎಎಸೈ ತಳವಾರ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಅಭಿಯಂತರಾದ ಮಹಾದೇವ ಜಂಬಗಿ, ಸಂತೋಷ ಗಿಡ್ಡಸಣ್ಣನವರ, ಆರೋಗ್ಯ ನಿರೀಕ್ಷಕರಾದ ವಿಜಯಕುಮಾರ ವಂದಾಲ, ಮಹೇಶ ಹಿರೇಮಠ, ಬಸವರಾಜ ಬೋಳಶೆಟ್ಟಿ, ಲೆಕ್ಕಿಗ ಗುರು ಮಾಗಾವಿ, ದಪೇದಾರ ರಾವುತಪ್ಪ ಮ್ಯಾಗೇರಿ, ಬಿಲ್ ಕಲೆಕ್ಟರ್ ಸತ್ಯಪ್ಪ ಪೂಜಾರಿ, ಪೊಲೀಸ್ ಸಿಬ್ಬಂದಿ, ಪುರಸಭೆಯ ಪೌರಕಾರ್ಮಿಕರು ಇದ್ದರು.

ಕೋಟ್‌....

ಇಂದು ಬಸವ ಭವನದಿಂದ ಮುದ್ದೇಬಿಹಾಳ ರಸ್ತೆಯಲ್ಲಿರುವ ಮಿನಿವಿಧಾನಸೌಧದವರೆಗೂ ಈ ಕಾಯಾರ್ಚರಣೆ ಮುಂದುವರಿಸಲಾಗುವುದು. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆಯಲಿದೆ.

-ಎಚ್.ಎಸ್.ಚಿತ್ತರಗಿ, ಪುರಸಭೆ ಮುಖ್ಯಾಧಿಕಾರಿ.